ADVERTISEMENT

ರಾಮನಗರ | ಜಿಲ್ಲಾ ಕೇಂದ್ರದಲ್ಲಿಲ್ಲ ಸುಸಜ್ಜಿತ ಬಸ್ ನಿಲ್ದಾಣ

ಕಿರಿದಾದ ನಿಲ್ದಾಣದಲ್ಲೇ ಪ್ರಯಾಣಿಕರ ಪರದಾಟ; ನಿಲ್ದಾಣದೊಳಕ್ಕೆ ಬಾರದೆ ಹೋಗುವ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 4:41 IST
Last Updated 14 ಫೆಬ್ರುವರಿ 2024, 4:41 IST
ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿರುವ ರಾಮನಗರ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣ
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿರುವ ರಾಮನಗರ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣ ಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ರಾಮನಗರ: ಸಾಮಾನ್ಯವಾಗಿ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣವೆಂದರೆ ಹೇಗಿರುತ್ತದೆ? ಕನಿಷ್ಠ 50 ಬಸ್‌ಗಳು ನಿಲ್ಲುವಂತಹ ವಿಶಾಲವಾದ ಜಾಗ, ಕನಿಷ್ಠ 25–30 ಪ್ಲಾಟ್‌ಫಾರಂಗಳು, ದೂರದೂರಿಗೆ ನಿಲ್ದಾಣದಿಂದ ನೇರ ಬಸ್ ವ್ಯವಸ್ಥೆ, ನಿಲ್ದಾಣದೊಳಕ್ಕೆ ಬಂದು ಹೋಗುವ ಎಲ್ಲಾ ಮಾರ್ಗದ ಬಸ್‌ಗಳು... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ರೇಷ್ಮೆನಾಡು ಖ್ಯಾತಿಯ ರಾಮನಗರ ಜಿಲ್ಲಾ ಕೇಂದ್ರದ ವಿಷಯದಲ್ಲಿ ಮೇಲಿನ ಪಟ್ಟಿಯಲ್ಲಿರುವ ಯಾವ ಲಕ್ಷಣವೂ ಇಲ್ಲ. ಜಿಲ್ಲಾ ಬಸ್ ನಿಲ್ದಾಣವಾದರೂ ತಾಲ್ಲೂಕು ನಿಲ್ದಾಣಕ್ಕಿಂತಲೂ ಕಡೆಯಾಗಿದೆ. ಸೌಲಭ್ಯಗಳು ಮರೀಚಿಕೆಯಾಗಿವೆ. ರಾಜಧಾನಿ ಪಕ್ಕದಲ್ಲಿರುವ ರಾಮನಗರ ಜಿಲ್ಲೆಯಾಗಿ 16 ವರ್ಷವಾದರೂ, ಇಲ್ಲೊಂದು ಸುಸಜ್ಜಿತ ಬಸ್ ನಿಲ್ದಾಣವಿಲ್ಲದಿರುವುದು ಇಲ್ಲಿನ ಜನರ ದೌರ್ಭಾಗ್ಯವೇ ಸರಿ.

ಕೊರತೆಗಳ ಸರಮಾಲೆ: ನಿಲ್ದಾಣದಲ್ಲಿ ಬಸ್ಸುಗಳ ಕೊರತೆ, ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇಲ್ಲದಿರುವುದು, ದೂರದ ಊರುಗಳಿಗೆ ನೇರವಾಗಿ ಬಸ್‌ ಸಂಪರ್ಕ ಇಲ್ಲದಿರುವುದು, ಕಿರಿದಾದ ಜಾಗದಲ್ಲಿ ಸುಸಜ್ಜಿತ ಶೌಚಾಲಯ ಸಮಸ್ಯೆ, ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳಿಲ್ಲದಿರುವುದು ಸೇರಿದಂತೆ ಇಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.

ADVERTISEMENT

‘ಹೆಸರಿಗಷ್ಟೇ ರಾಮನಗರ ರಾಜಕೀಯವಾಗಿ ದೊಡ್ಡ ರಾಜಕಾರಣಿಗಳನ್ನು ಹೊಂದಿರುವ ಜಿಲ್ಲೆ. ಆದರೆ, ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾ ಕೇಂದ್ರವು ಅತ್ಯಂತ ಹಿಂದುಳಿದಿದೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರನ್ನು ಕಂಡಿರುವ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತದೆ’ ಎಂದು ಪ್ರಯಾಣಿಕ ವೀರಭದ್ರ ‘ಪ್ರಜಾವಾಣಿ’ಯೊಂದಿಗೆ ಬೇಸರ ತೋಡಿಕೊಂಡರು.

ನಿಲ್ದಾಣ ಪ್ರವೇಶಿಸದ ಬಸ್: ಬೆಂಗಳೂರು ಕಡೆಯಿಂದ ಬರುವ ವೇಗದೂತ ಬಸ್‌ಗಳು ಇಲ್ಲಿನ ನಿಲ್ದಾಣವನ್ನೇ ಪ್ರವೇಶಿಸುವುದಿಲ್ಲ. ಮುಂಭಾಗದ ಸಿಗ್ನಲ್‌ನಲ್ಲೇ ಪ್ರಯಾಣಿಕರನ್ನು ಇಳಿಸಿ, ಮುಂದಿನ ಊರುಗಳಿಗೆ ಹೋಗುವವರನ್ನು ಹತ್ತಿಸಿಕೊಂಡು ಹೋಗುತ್ತವೆ. ಬಹುಶಃ ಇಂತಹ ವ್ಯವಸ್ಥೆ ರಾಜ್ಯದ ಎಲ್ಲೂ ಇಲ್ಲ.

‘ಮೈಸೂರು ಸೇರಿದಂತೆ ದೂರದ ಊರುಗಳಿಗೆ ಹೋಗುವ ಬಸ್‌ಗಳು ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದೊಳಕ್ಕೆ ಬಂದ ಪ್ರಯಾಣಿಕರನ್ನು ಇಳಿಸಿ, ಎಂಟ್ರಿ ಹಾಕಿಸಿಕೊಳ್ಳಬೇಕು. ಇಲ್ಲಿರುವ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು. ಈ ನಿಯಮ ರಾಮನಗರದಲ್ಲಿ ತದ್ವಿರುದ್ದ. ಚನ್ನಪಟ್ಟಣ, ಮಂಡ್ಯ, ಮದ್ದೂರು, ಮೈಸೂರು, ಚಾಮರಾಜನಗರ ಸೇರಿದಂತೆ ಮೈಸೂರು ಮಾರ್ಗದ ಬಸ್ಸುಗಳಿಗೆ ಪ್ರಯಾಣಿಕರು ಸಿಗ್ನಲ್ ಬಳಿಯೇ ಕಾಯಬೇಕು. ಅಲ್ಲೊಂದು ತಂಗುದಾಣ ಸಹ ಇಲ್ಲ. ಇಷ್ಟೊಂದು ಅವ್ಯವಸ್ಥೆಯನ್ನು ನಾನೆಲ್ಲೂ ನೋಡಿಲ್ಲ’ ಎಂದು ನಿತ್ಯ ಬೆಂಗಳೂರಿನಿಂದ ರಾಮನಗರಕ್ಕೆ ಉದ್ಯೋಗಕ್ಕೆ ಬರುವ ವಿಶಾಲ್ ಹೇಳಿದರು.

ಹೈಟೆಕ್ ಬಸ್‌ ಸೌಲಭ್ಯವಿಲ್ಲ: ಎಲ್ಲಾ ನಿಲ್ದಾಣಗಳಿಂದಲೂ ಹೈಟೆಕ್ ಬಸ್‌ಗಳು ದೂರದ ಊರುಗಳಿಗೆ ಸಂಚರಿಸುತ್ತವೆ. ಆದರೆ, ರಾಮನಗರದಲ್ಲಿ ಕಡೆ ಪಕ್ಷ ಒಂದು ವೋಲ್ವೊ ಬಸ್, ರಾಜಹಂಸ, ಸ್ಲೀಪರ್ ಬಸ್ ಸೇರಿದಂತೆ ಯಾವುದೇ ಬಸ್‌ಗಳು ಇಲ್ಲ. ಕಡೆಪಕ್ಷ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಓಡಾಡುವ ಬಸ್‌ಗಳು ಸಹ ನಿಲ್ದಾಣಕ್ಕೆ ಬರುವುದಿಲ್ಲ.

‘ಜನಪ್ರತಿನಿಧಿಗಳಲ್ಲಿರುವ ಇಚ್ಛಾಶಕ್ತಿ ಕೊರತೆಯೇ ಇಷ್ಟೊಂದು ಅಧ್ವಾನಕ್ಕೆ ಕಾರಣ. ಜಿಲ್ಲಾ ಕೇಂದ್ರದ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸುಸಜ್ಜಿತ ಬಸ್ ನಿಲ್ದಾಣ ತಲೆ ಎತ್ತಿರುತ್ತಿತ್ತು. ಆದರೆ, ಅವರಿಗೆ ಅದ್ಯಾವುದೂ ಬೇಕಿಲ್ಲ. ರಾಮನಗರದ ಅಭಿವೃದ್ಧಿಯ ಸ್ಥಿತಿ ನೋಡಿದರೆ ಬೇಸರವೆನಿಸುತ್ತದೆ’ ಎಂದು ವ್ಯಾಪಾರಿ ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಜಾಗದ ಕೊರತೆ: ‘ಜಿಲ್ಲಾ ಕೇಂದ್ರವಾಗಿ ರಾಮನಗರ 2007ರಲ್ಲಿ ಘೋಷಣೆಯಾದರೂ, ಬಸ್ ನಿಲ್ದಾಣವಾಗಿ ಅದಾಗಲೇ ಇದ್ದ ಬಸ್ ನಿಲ್ದಾಣವನ್ನು ನವೀಕರಿಸಿ 2014ರಲ್ಲಿ ಉದ್ಘಾಟಿಸಲಾಯಿತು. ಕ್ಷೇತ್ರದ ಶಾಸಕರೂ ಆಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಇಲ್ಲೊಂದು ವಿಶಾಲವಾದ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನಿಸಿದರು. ಆದರೆ, ಜಾಗದ ಕೊರತೆಯಿಂದಾಗಿ ಸಾಧ್ಯವಾಗಲಿಲ್ಲ’ ಎಂದು ಜೆಡಿಎಸ್ ಮುಖಂಡ ಉಮೇಶ್ ಹೇಳಿದರು.

ಶಿವು ಗೌಡ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ
ಬೇವೂರು ಯೋಗೀಶ್ ಗೌಡ ಜಿಲ್ಲಾಧ್ಯಕ್ಷ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಮನಗರ
ಪ್ರಶಾಂತ್ ಕಾರ್ಯದರ್ಶಿ ರಾಮನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ
ನಾಗಚಂದ್ರ ಆರ್ ವಕೀಲ ರಾಮನಗರ
ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲೆಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನಸ್ಸು ಮಾಡಬೇಕು
– ಶಿವು ಗೌಡ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ
ಜಿಲ್ಲೆ ರಾಜಕೀಯ ಘಟಾನುಘಟಿಗಳನ್ನು ಹೊಂದಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ನಾಚಿಕೆಗೇಡಿತನ. ಹಾಗಾಗಿ ಬಸ್ ನಿಲ್ದಾಣ ಸೇರಿದಂತೆ ಅಭಿವೃದ್ಧಿ ಚಟುವಟಿಕೆಗೆ ಜನಪ್ರತಿನಿಧಿಗಳು ಆದ್ಯತೆ ನೀಡಬೇಕು –
ಬೇವೂರು ಯೋಗೀಶ್ ಗೌಡ, ಜಿಲ್ಲಾಧ್ಯಕ್ಷ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಮನಗರ

‘ಹೈಟೆಕ್ ಬಸ್ ನಿಲ್ದಾಣದ ಅಗತ್ಯವಿದೆ’ ‘ರಾಮನಗರವು ಬೆಂಗಳೂರಿಗೆ ಕೂಗಳತೆ ದೂರದಲ್ಲಿದ್ದರೂ ಹಲವು ರೀತಿಯ ಅಭಿವೃದ್ಧಿಯಿಂದ ವಂಚಿತವಾಗಿದೆ. ಇಲ್ಲಿರುವ ಬಸ್ ನಿಲ್ದಾಣವೇ ಜಿಲ್ಲಾ ಕೇಂದ್ರದ ದುಃಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಇಲ್ಲಿಗಿಂತ ತಾಲ್ಲೂಕು ಕೇಂದ್ರದ ಬಸ್ ನಿಲ್ದಾಣಗಳೇ ಎಷ್ಟೋ ವಾಸಿ. ಕನಕಪುರದಲ್ಲಿ ಹೈಟೆಕ್ ಬಸ್ ನಿಲ್ದಾಣವಾಗುತ್ತಿದೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಗೂಡಿನಂತಿದೆ. ಬಸ್ಸುಗಳ ಕೊರತೆ ಪಾರ್ಕಿಂಗ್ ಕೊರತೆ ಸೇರಿದಂತೆ ಇಲ್ಲಗಳೇ ಪಟ್ಟಿಯೇ ಹೆಚ್ಚಾಗಿದೆ. ಬೆಂಗಳೂರು ವಿಸ್ತರಣೆಯಾಗುತ್ತಿರುವುದರಿಂದ ಅಲ್ಲಿನ ಅಭಿವೃದ್ಧಿ ಚಟುವಟಿಕೆಗಳು ರಾಮನಗರದಲ್ಲಿ ಶುರುವಾಗಲಿವೆ. ರಿಯಲ್ ಎಸ್ಟೇಟ್ ಬೆಳೆಯುತ್ತಿದೆ ಕೈಗಾರಿಕೆಗಳ ಸ್ಥಾಪನೆ ಹೆಚ್ಚುತ್ತಿದೆ. ಆದರೆ ಅದಕ್ಕೆ ತಕ್ಕಂತೆ ರಾಮನಗರ ಅಭಿವೃದ್ಧಿಯಾಗಿಲ್ಲ. ಭವಿಷ್ಯದ ದೃಷ್ಟಿಯಿಂದ ಇಲ್ಲೊಂದು ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಬೇಕು’. – ಪ್ರಶಾಂತ್ ಕಾರ್ಯದರ್ಶಿ ರಾಮನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ‘ಹೆಸರಿಗಷ್ಟೇ ಜಿಲ್ಲೆ; ಅಭಿವೃದ್ಧಿ ನಗಣ್ಯ’ ‘ರಾಮನಗರವು ಹೆಸರಿಗಷ್ಟೇ ಜಿಲ್ಲೆಯಾಗಿದೆ. ಆದರೆ ಜಿಲ್ಲಾ ಕೇಂದ್ರಕ್ಕಿರಬೇಕಾದ ಅಭಿವೃದ್ಧಿ ಮಾನದಂಡಗಳು ನಗಣ್ಯವಾಗಿವೆ. ಇಲ್ಲಿನ ಬಸ್ ನಿಲ್ದಾಣವೇ ಜಿಲ್ಲಾ ಕೇಂದ್ರದ ಅಭಿವೃದ್ಧಿ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಸೂಚಿಸುತ್ತದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲ. ವಾಹನಗಳ ನಿಲುಗಡೆಗೆ ಸರಿಯಾದ ಜಾಗವಿಲ್ಲದಿರುವುದು ಸೇರಿದಂತೆ ನಿಲ್ದಾಣವು ಅವ್ಯವಸ್ಥೆಗಳ ಆಗರವಾಗಿದೆ. ಜನಪ್ರತಿನಿಧಿಗಳು ಇದನ್ನು ಗಮನಿಸಬೇಕು. ರಾಜಕೀಯ ಕಾರಣಕ್ಕಾಗಿ ಅಭಿವೃದ್ಧಿ ವಿಷಯಗಳು ಮಂಕಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಪಣ ತೊಡಬೇಕು. ಮೊದಲಿಗೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಬೇಕು’. - ನಾಗಚಂದ್ರ ಆರ್ ವಕೀಲ ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.