ADVERTISEMENT

 ರಾಮನಗರ: ಆರೋಗ್ಯ ವಿ.ವಿ. ಕನಸಿಗೆ ಮರುಜೀವ

₹600 ಕೋಟಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 6:39 IST
Last Updated 19 ನವೆಂಬರ್ 2022, 6:39 IST
ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ತಾತ್ಕಾಲಿಕ ಕ್ಯಾಂಪಸ್‌ಗಾಗಿ ಬಿಟ್ಟು ಕೊಡಲಾದ ಕಂದಾಯ ಭವನ
ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ತಾತ್ಕಾಲಿಕ ಕ್ಯಾಂಪಸ್‌ಗಾಗಿ ಬಿಟ್ಟು ಕೊಡಲಾದ ಕಂದಾಯ ಭವನ   

ರಾಮನಗರ: ಜಿಲ್ಲೆಯ ಬಹುನಿರೀಕ್ಷಿತ ಯೋಜನೆಯಾದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮತ್ತೆ ನಿರೀಕ್ಷೆಯೊಂದು ಗರಿಗೆದರಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ₹600 ಕೋಟಿ ವೆಚ್ಚದ ಈ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡುವ ವಿಶ್ವಾಸವೂ ವ್ಯಕ್ತವಾಗಿದೆ. ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರ ಯೋಜನೆಗೆ ಮತ್ತೆ ಚಾಲನೆ ನೀಡುವ ಉತ್ಸಾಹ ತೋರಿದೆ. ದಶಕಗಳ ಬೇಡಿಕೆಯಾಗಿರುವ ಆರೋಗ್ಯ ವಿ.ವಿ. ಕ್ಯಾಂಪಸ್‌ ಇನ್ನಾದರೂ ನಿರ್ಮಾಣ ಆಗಲಿ ಎಂಬುದು ಇಲ್ಲಿನ ಜನರ ಆಶಯವಾಗಿದೆ.

ಇದೇ ವರ್ಷ ಜನವರಿಯಲ್ಲಿ ರಾಮನಗರಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್‌ನಲ್ಲೇ ವಿ.ವಿ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಭರವಸೆ ನೀಡಿದ್ದರು. ಈ ಬಾರಿಯ ಬಜೆಟ್‌ನಲ್ಲೂ ಈ ವಿಷಯ ಪ್ರಸ್ತಾಪ ಆಗಿದ್ದು, ವಿ.ವಿ ಕ್ಯಾಂಪಸ್‌ಗಾಗಿ ₹600 ಕೋಟಿ ಅನುದಾನ ಘೋಷಿಸಿದ್ದರು. ಅದಾದ ತಿಂಗಳುಗಳ ಬಳಿಕವೂ ಈ ವಿಷಯದಲ್ಲಿ ಯಾವುದೇ ಬೆಳವಣಿಗೆ ಆಗದಿರುವುದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿತ್ತು.

ADVERTISEMENT

ರಾಮನಗರ ಹೊರವಲಯದಲ್ಲಿ ಇರುವ ಅರ್ಚಕರಹಳ್ಳಿ ಬಳಿ ಈ ವಿ.ವಿ ಕ್ಯಾಂಪಸ್ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ ಭೂ ವ್ಯಾಜ್ಯದ ಕಾರಣಕ್ಕೆ ಯೋಜನೆ ವಿಳಂಬ ಆಗುತ್ತಲೇ ಇದೆ. ಹೀಗಾಗಿ, ಸದ್ಯ ಭೂ ವ್ಯಾಜ್ಯ ಹೊರತಾದ ಜಮೀನನ್ನು ಬಳಸಿಕೊಂಡು ವಿ.ವಿ ಕ್ಯಾಂಪಸ್ ನಿರ್ಮಾಣ ಕಾರ್ಯ ನಡೆಯಬೇಕಿದೆ.

ವಿಶ್ವ ವಿದ್ಯಾಲಯಕ್ಕೆಂದು ರಾಮನಗರ ತಾಲ್ಲೂಕಿನ ಅರ್ಚಕರಹಳ್ಳಿ ಬಳಿ 216.6 ಎಕರೆ ಜಮೀನು ಗುರುತಿಸಲಾಗಿದೆ. ಇದರಲ್ಲಿ ವಿ.ವಿ ಭವನಗಳ ಕಾಮಗಾರಿಗೆ 71 ಎಕರೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ 145 ಎಕರೆ ಮೀಸಲಾಗಿದೆ. ಈ ಪೈಕಿ ಒಟ್ಟು 76 ಎಕರೆ ಜಮೀನಿನ ಪರಿಹಾರಕ್ಕೆ ಸಂಬಂಧಿಸಿ ವ್ಯಾಜ್ಯವಿದೆ. ಉಳಿದ 140 ಎಕರೆ ಭೂಮಿ ವಿವಾದ ರಹಿತವಾಗಿದ್ದು, ಅಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

ಈ ಹಿಂದೆಯೇ ವಿಶ್ವವಿದ್ಯಾಲಯದ ತಾಂತ್ರಿಕ ವಿಭಾಗದ ಸಿಬ್ಬಂದಿ ರಾಮನಗರದಲ್ಲಿ ಬೀಡು ಬಿಟ್ಟಿದ್ದು, ಸದ್ಯ ಲಭ್ಯವಿರುವ ಜಮೀನಿಗೆ ಅನುಗುಣವಾಗಿ ಕಟ್ಟಡಗಳ ನಿರ್ಮಾಣಕ್ಕೆ ಸರ್ವೆ ಕಾರ್ಯ ಆರಂಭಿಸಿದ್ದರು. ಅವರಿಗಾಗಿ ಕಂದಾಯ ಭವನ ಬಿಟ್ಟುಕೊಡಲಾಗಿತ್ತು. ಆದರೆ, ನಂತರದಲ್ಲಿ ಆ ಭವನವನ್ನು ಕೋವಿಡ್ ರೋಗಿಗಳ ಆರೈಕೆಗಾಗಿ ಬಳಸಲಾಗುತ್ತಿದೆ.

ಆಡಳಿತ ಭವನ, ವೈದ್ಯಕೀಯ, ದಂತ, ನರ್ಸಿಂಗ್ ಕಾಲೇಜುಗಳು, 750 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ, 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರ್ಥಿ ನಿಲಯಗಳು, ವಸತಿ ಗೃಹಗಳು ಸೇರಿದಂತೆ ಒಟ್ಟು 16 ಬೃಹತ್ ಕಟ್ಟಡಗಳನ್ನು ಈ ಕ್ಯಾಂಪಸ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಆರೋಗ್ಯ ನಗರಿಯ ಅವಕಾಶ

ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಕ್ಯಾಂಪಸ್‌ ನಿರ್ಮಾಣಕ್ಕೆ ಚಾಲನೆ ದೊರೆತಲ್ಲಿ ಇಲ್ಲಿನ ಆರ್ಥಿಕ ಚಟುವಟಿಕೆಗಳಿಗೆ ಮರುಜೀವ ಬರಲಿದೆ.

ಬೆಂಗಳೂರು–ಮೈಸೂರು ಹೊಸ ಹೆದ್ದಾರಿ ನಿರ್ಮಾಣದಿಂದಾಗಿ ರೇಷ್ಮೆ ನಗರಿಯ ಆರ್ಥಿಕ ಚಟುವಟಿಕೆಗೆ ಈಗಾಗಲೇ ಹೊಡೆತ ಬಿದ್ದಿದೆ. ಹೊಸ ಬೈಪಾಸ್‌ನಿಂದಾಗಿ ನಗರ ಪ‍್ರದೇಶಕ್ಕೆ ವಾಹನಗಳ ಓಡಾಟ ಕಡಿಮೆ ಆಗಿದ್ದು, ಇದರಿಂದ ಇಲ್ಲಿನ ವಾಣಿಜ್ಯ ಚಟುವಟಿಕೆಗಳೂ ಮಂಕಾಗಿವೆ. ಈ ನಡುವೆ ಚನ್ನಪಟ್ಟಣದಲ್ಲಿ ಹೊಸ ರೇಷ್ಮೆಗೂಡು ಮಾರುಕಟ್ಟೆಗೆ ಸಿದ್ಧತೆ ನಡೆದಿದ್ದು, ಇದರಿಂದಾಗಿ ರೇಷ್ಮೆ ನಗರಿ ಹೆಸರಿಗೆ ಧಕ್ಕೆ ಬಂದಿದೆ. ಹೀಗಾಗಿ, ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣಗೊಂಡು ಆಸ್ಪತ್ರೆಗಳು ತಲೆ ಎತ್ತಿದಲ್ಲಿ, ರಾಮನಗರ ಆರೋಗ್ಯ ನಗರಿಯಾಗಿ ಬೆಳೆಯುವ ಅವಕಾಶಗಳೂ ಇರಲಿವೆ ಎನ್ನುತ್ತಾರೆ ಇಲ್ಲಿನ ನಾಗರಿಕರು.

ಯೋಜನಾ ವೆಚ್ಚ ಏರಿಕೆ

2007ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಮನಗರದಲ್ಲಿ ಆರೋಗ್ಯ ವಿ.ವಿ. ಹೊಸ ಕ್ಯಾಂಪಸ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದಾದ ಬಳಿಕ ಮೂರು ಬಾರಿ ಭೂಮಿಪೂಜೆ ನೆರವೇರಿಸಲಾಗಿದೆಯಾದರೂ ಕಟ್ಟಡ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ.

ವರ್ಷ ಕಳೆದಂತೆಲ್ಲ ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣದ ಯೋಜನಾ ವೆಚ್ಚವು ಏರುತ್ತಲೇ ಹೋಗಿದೆ. 2007ರಲ್ಲಿ ಇದರ ನಿರ್ಮಾಣ ವೆಚ್ಚ ₹330 ಕೋಟಿ ಎಂದು ಅಂದಾಜಿಸಲಾಗಿತ್ತು. 2017ರಲ್ಲಿ ಪರಿಷ್ಕೃತ ಅಂದಾಜಿನಂತೆ ₹580 ಕೋಟಿಗೆ ಏರಿಕೆ ಆಯಿತು. ಇದೀಗ ₹600 ಕೋಟಿಗೆ ಈ ವೆಚ್ಚ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.