ADVERTISEMENT

‘ಸೀಲ್‌ಡೌನ್‌ ಗ್ರಾಮಗಳ ಬಗ್ಗೆ ಕಾಳಜಿ ವಹಿಸಿ’

ಸೌಲಭ್ಯ ಪೂರೈಕೆಗೆ ತಾ.ಪಂ ಅಧ್ಯಕ್ಷ ರಾಜಣ್ಣ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 16:07 IST
Last Updated 16 ಜೂನ್ 2020, 16:07 IST
ಚನ್ನಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ರಾಜಣ್ಣ ಮಾತನಾಡಿದರು
ಚನ್ನಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ರಾಜಣ್ಣ ಮಾತನಾಡಿದರು   

‌ಚನ್ನಪಟ್ಟಣ: ಕೋವಿಡ್‌ ಪ್ರಕರಣಗಳು ವರದಿಯಾಗಿರುವ ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಈ ಗ್ರಾಮಗಳ ನಿವಾಸಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಸಂಬಂಧಪಟ್ಟ ಇಲಾಖೆಗಳು ನಿಗಾ ವಹಿಸಿ ಸೌಲಭ್ಯ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೀಲ್ ಡೌನ್ ಆಗಿರುವ ಗ್ರಾಮಗಳಲ್ಲಿ ಆಹಾರ, ಔಷಧ ಸೇರಿದಂತೆ ಯಾವುದೇ ವಿಚಾರದಲ್ಲೂ ಕೊರತೆ ಎದುರಾಗಬಾರದು. ಸೂಕ್ತ ಸೌಲಭ್ಯ ನೀಡಲಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕೊರೊನಾ ವೈರಸ್ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖಾಧಿಕಾರಿಗಳು ಮಾಡಬೇಕು. ಜಾನುವಾರಿಗೆ ಮೇವಿನ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. ಇತರೆ ಕಾಯಿಲೆಗಳಿಂದ ನರಳುತ್ತಿರುವವರ ಆರೋಗ್ಯವನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜು ಮಾತನಾಡಿ, ಕೋವಿಡ್‌ ಕುರಿತು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಗೊಂದಲ ಮೂಡುತ್ತಿವೆ. ವೈರಸ್ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡುವ ವಿಚಾರದಲ್ಲಿಯೂ ಗೊಂದಲ ಮೂಡಿಸಲಾಗುತ್ತಿದೆ. ಕೊರೊನಾ ವಿಚಾರದಲ್ಲೂ ವೈಯಕ್ತಿಕ ದ್ವೇಷ ಸಾಧಿಸಲು ಕೆಲವರು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸೋಂಕಿತ ವ್ಯಕ್ತಿಯ ಹೇಳಿಕೆ ಆಧಾರದ ಮೇಲೆ ಆತನ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡುವಾಗ ಕೆಲವರು ಸಂಪರ್ಕದಲ್ಲಿ ಇಲ್ಲದಿರುವವರ ಹೆಸರನ್ನೂ ಸೂಚಿಸಿದ್ದಾರೆ. ಇದು ಗೊಂದಲ ಮೂಡಿಸುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಸರ್ ಬಳಕೆಯಿಂದ ಕೊರೊನಾ ವೈರಸ್ ನಿಯಂತ್ರಣಕ್ಕೆ ತರಬಹುದಾಗಿದೆ. ಸಾರ್ವಜನಿಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ವರದಿ ಮಂಡಿಸಿದರು. ಉಪಾಧ್ಯಕ್ಷೆ ಸಾಕಮಾದಮ್ಮ, ಇಒ ಚಂದ್ರು, ನರೇಗಾ ವ್ಯವಸ್ಥಾಪಕ ಲೋಕೇಶ್ ಹಾಗೂ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.