ADVERTISEMENT

ಕೇರೆ ಹಾವು ರಕ್ಷಣೆ: ಗುಬ್ಬಚ್ಚಿಗೆ ಆಶ್ರಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 5:55 IST
Last Updated 30 ಏಪ್ರಿಲ್ 2021, 5:55 IST
ಮರಸಪ್ಪ ರವಿ ಅವರ ಮನೆಯಲ್ಲಿ ಕಾಣಿಸಿಕೊಂಡ ಕೇರೆ ಹಾವನ್ನು ಹಿಡಿದಿರುವುದು
ಮರಸಪ್ಪ ರವಿ ಅವರ ಮನೆಯಲ್ಲಿ ಕಾಣಿಸಿಕೊಂಡ ಕೇರೆ ಹಾವನ್ನು ಹಿಡಿದಿರುವುದು   

ಕನಕಪುರ: ಇಲ್ಲಿನ ಮಳಗಾಳು ಗ್ರಾಮದಲ್ಲಿನ ಪಕ್ಷಿ ಪ್ರೇಮಿ ಮರಸಪ್ಪ ರವಿ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದ ಕೇರೆ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ಮರಸಪ್ಪ ರವಿ ಅವರು ತಮ್ಮ ಮನೆಯಲ್ಲಿ ನೂರಾರು ಗುಬ್ಬಚ್ಚಿ (ಗುಂಚಕ್ಕಿ)ಗಳಿಗೆ ಆಶ್ರಯ ನೀಡಿದ್ದಾರೆ. ಜೋಡಿ ಹಕ್ಕಿಗಳು ಮೊಟ್ಟೆಯಿಟ್ಟು ಮರಿ ಮಾಡಿರುವುದರಿಂದ ಮೊಟ್ಟೆ ಮತ್ತು ಮರಿ ತಿನ್ನಲು ವಿವಿಧ ಜಾತಿಯ ಹಾವುಗಳು ಇವರ ಮನೆಗೆ ಬರುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಹಾವುಗಳನ್ನು ಕೊಲ್ಲದೆ ಅವುಗಳನ್ನು ಉರುಗ ತಜ್ಞರಿಂದ ಹಿಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಡುತ್ತಾರೆ.

ವಿಶೇಷವೆಂದರೆ ರವಿ ಅವರ ಮನೆಯೆ ಒಂದು ಪುಟ್ಟ ಕಾಡಾಗಿದ್ದು ಹಕ್ಕಿಗಳು ಕೂರಲು ಕೃತಕ ಗೂಡುಗಳನ್ನು ಮಾಡಲಾಗಿದೆ. ಕೆಲವು ಪಕ್ಷಿಗಳು ಇಲ್ಲಿ ಗೂಡನ್ನು ಸೃಷ್ಟಿಸಿಕೊಂಡಿವೆ. ಈ ಜಾಗದಲ್ಲಿ ಗುಬ್ಬಚ್ಚಿಗಳಲ್ಲದೆ ಸನ್‌ ಬರ್ಡ್‌, ಬುಲ್‌ಬುಲ್‌ ಪಕ್ಷಿಗಳು ಆಶ್ರಯ ಪಡೆದುಕೊಂಡಿವೆ.

ADVERTISEMENT

‘ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳು ಮನೆಯ ಬಳಿ ಬಂದು ಕೂರುತ್ತಿದ್ದವು. ಅದನ್ನು ಗಮನಿಸಿ ಅವುಗಳಿಗೆ ಬೇಕಾದ ಕಾಳನ್ನು ಹಾಕಿದಾಗ ಇಲ್ಲಿ ಶಾಶ್ವತವಾಗಿ ಉಳಿದುಕೊಂಡವು. ನಂತರದಲ್ಲಿ ಗುಬ್ಬಚ್ಚಿಗಳ ಸಂಖ್ಯೆ ನೂರರಷ್ಟಾಗಿದ್ದು ಅವುಗಳ ಜತೆಗೆ ಬೇರೆ ಬೇರೆ ಪಕ್ಷಿಗಳು ಮನೆಯಲ್ಲಿ ಆಶ್ರಯ ಪಡೆದಿವೆ’ ಎಂದರು.

‘ಅವುಗಳ ಮೊಟ್ಟೆ ತಿನ್ನಲು ಹಾವು ಗಳು ಬರುತ್ತವೆ. ಅವುಗಳನ್ನು ಕೊಲ್ಲದೆ ಸಂರಕ್ಷಿಸಬೇಕೆಂದು ಉರುಗ ಪ್ರೇಮಿ ವಿನಯ್‌ ಅವರಿಂದ ಹಾವನ್ನು ಹಿಡಿದು ಕಾಡಿಗೆ ಬಿಡುತ್ತೇವೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.