ADVERTISEMENT

ಕ್ಯಾರೆಟ್‌ ದುಬಾರಿ: ಬೀನ್ಸ್‌ ಅಗ್ಗ

ಟೊಮೆಟೊ ಧಾರಣೆ ಚೇತರಿಕೆ: ಬೆಳೆಗಾರರ ನಿಟ್ಟುಸಿರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:53 IST
Last Updated 25 ಜುಲೈ 2021, 3:53 IST
ಗ್ರಾಹಕರಿಗಾಗಿ ಕಾದ ತರಕಾರಿ ವ್ಯಾಪಾರಿ (ಸಂಗ್ರಹ ಚಿತ್ರ)
ಗ್ರಾಹಕರಿಗಾಗಿ ಕಾದ ತರಕಾರಿ ವ್ಯಾಪಾರಿ (ಸಂಗ್ರಹ ಚಿತ್ರ)   

ರಾಮನಗರ: ಆಷಾಢದ ಆರಂಭದಲ್ಲಿ ಅಗ್ಗವಾಗಿದ್ದ ತರಕಾರಿ ಈಗ ಬೆಲೆ ಏರಿಸಿಕೊಳ್ಳತೊಡಗಿದ್ದು, ಗ್ರಾಹಕರ ಕೈ ಸುಡುತ್ತಿದೆ.

ಸದ್ಯ ಬೆಲೆ ಏರಿಕೆಯಲ್ಲಿ ಕ್ಯಾರೆಟ್‌ಗೆ ಅಗ್ರಸ್ಥಾನ. ನವಿರಾದ ಬಣ್ಣದ ಊಟಿ ಕ್ಯಾರೆಟ್ ಮಾರುಕಟ್ಟೆಗೆ ಬರುತ್ತಿದೆಯಾದರೂ ದರ ಮಾತ್ರ ವಿಪರೀತವಾಗಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಉತ್ಪನ್ನ ಕಡಿಮೆ ಇದ್ದು, ಉತ್ತಮ ದರ್ಜೆಯ ಕ್ಯಾರೆಟ್‌ ಪ್ರತಿ ಕೆ.ಜಿ.ಗೆ ₹ 80ರವರೆಗೂ ಮಾರಾಟ ನಡೆದಿದೆ. ಎರಡು ವಾರಗಳ ಹಿಂದಷ್ಟೇ ಕೆ.ಜಿ.ಗೆ ₹ 20ರಂತೆ ಈ ತರಕಾರಿ ಮಾರಾಟ ನಡೆದಿತ್ತು. ಹದಿನೈದೇ ದಿನದಲ್ಲಿ ಮೂರು ಪಟ್ಟು ಬೆಲೆ ಹೆಚ್ಚಿದೆ.

ಹದಿನೈದು ದಿನದ ಹಿಂದೆ ಗಗನಮುಖಿಯಾಗಿದ್ದ ಬೀನ್ಸ್‌ ಅರ್ಥಾತ್‌ ಹುರುಳಿಕಾಯಿ ಈಗ ಬೆಲೆ ಇಳಿಸಿಕೊಳ್ಳತೊಡಗಿದೆ. ಸಾಧಾರಣ ದರ್ಜೆಯ ಉತ್ಪನ್ನ ಕೆ.ಜಿ.ಗೆ ₹ 70–80 ಇದ್ದದ್ದು, ಸದ್ಯಕ್ಕೆ ಬೆಲೆ ಅರ್ಧದಷ್ಟು ಇಳಿದಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ವರ್ತಕರು.

ADVERTISEMENT

ಟೊಮೆಟೊ ಚೇತರಿಕೆ: ರೈತರ ಕಣ್ಣಲ್ಲಿ ನೀರು ತರಿಸಿದ್ದ ಟೊಮೆಟೊ ಧಾರಣೆಯಲ್ಲಿ ಚೇತರಿಕೆ ಕಾಣುತ್ತಿದೆ. ಕಳೆದೊಂದು ವಾರದಲ್ಲಿ ಇದರ ಬೆಲೆ ಜಿಗಿದಿದ್ದು, ಬೆಳೆಗಾರರು ನಿಟ್ಟುಸಿರು ಬಿಡುವಂತೆ ಆಗಿದೆ. ಈರುಳ್ಳಿ ಧಾರಣೆಯಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಸದ್ಯ ಹಳೆಯ ದಾಸ್ತಾನು ಪೂರೈಕೆ ಆಗುತ್ತಿದೆ. ಬೆಂಡೆ, ಮೂಲಂಗಿ, ಈರೇಕಾಯಿ ಸೇರಿದಂತೆ ದಿನಬಳಕೆಯ ಹಲವು ತರಕಾರಿಗಳ ಬೆಲೆಯು ಸ್ಥಿರವಾಗಿದೆ.

ಸೊಪ್ಪಿನ ದರವೂ ಇಳಿಕೆ: ಮಳೆಯ ಹಿನ್ನೆಲೆಯಲ್ಲಿ ಸೊಪ್ಪು ಪೂರೈಕೆ ವ್ಯತ್ಯಾಸ ಆಗಿದ್ದು, ಬೆಲೆಯೂ ಏರಿಳಿತ ಕಾಣುತ್ತಿದೆ. ಕೊತ್ತಂಬರಿ ಅಗ್ಗವಾಗಿದ್ದು, ನಾಟಿ ಸೊಪ್ಪು ಕಂತೆಗೆ ₹ 10ರಂತೆ ಸಿಗುತ್ತಿದೆ. ದಂಟು, ಕೀರೆ, ಕಿಲ್‌ಕೀರೆ, ಪಾಲಕ್‌, ಸಬ್ಬಸ್ಸಿಗೆ ಎಲ್ಲವೂ ಕಂತೆಗೆ ₹ 10ರಂತೆ ಸಿಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.