
ಚನ್ನಪಟ್ಟಣ: ಸಾಹಿತ್ಯ ಕ್ಷೇತ್ರಕ್ಕೂ ಅಸ್ಪೃಶ್ಯತೆ ಕಳಂಕ ಅಂಟಿದೆ. ಇದರ ಪರಿಣಾಮವಾಗಿ ಅನೇಕ ಸಮರ್ಥ ಕವಿಗಳು ಹಾಗೂ ಬರಹಗಾರರು ಗೌರವದಿಂದ ವಂಚಿತರಾಗುತ್ತಿದ್ದಾರೆ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ಮೊಗಳ್ಳಿ ಗಣೇಶ್ ಅಕ್ಷರ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಲೋಕದಲ್ಲಿ ಗುಂಪುಗಾರಿಕೆ, ಅಸ್ಪೃಶ್ಯತೆ ತಲೆದೋರಿದೆ. ಮೊಗಳ್ಳಿ ಗಣೇಶ್ ಅವರ ಬರಹ ಮನುವಾದಿಗಳ ಹೊಡೆತಕ್ಕೆ ಸಿಲುಕಿ ಕಣ್ಮರೆಯಾಗಿದೆ. ಅವರ ಸಾಹಿತ್ಯಕ್ಕೆ ಧಕ್ಕಬೇಕಾದ ಗೌರವ ಸನ್ಮಾನ ದಕ್ಕಿಲ್ಲ. ಅವರಿಗೆ ದೊಡ್ಡ ಪ್ರಶಸ್ತಿ ಸಿಗದಿರುವುದು ನಿಜಕ್ಕೂ ದುರಂತ. ಇಂತಹ ಅಸಹನೀಯ ವಿಚಾರಗಳ ಬಗ್ಗೆ ಕವಿಗಳು, ಲೇಖಕರು ಹಾಗೂ ಸಾಹಿತ್ಯಾಸಕ್ತರು ಆಲೋಚಿಸಬೇಕು ಎಂದರು.
ಮೈಸೂರು ವಿ.ವಿ ಕಲಾನಿಕಾಯ ಡೀನ್ ಹಾಗೂ ಲೇಖಕ ಎಂ.ಎಸ್.ಶೇಖರ್ ಮಾತನಾಡಿ, ಪರಿಸ್ಥಿತಿಯ ಅಸಹನೀಯತೆ ಕೃತಿ ಮೂಲಕ ಮೊಗಳ್ಳಿ ಗಣೇಶ್ ಸಮಾಜದ ನೋವು, ಅಸಹನೆ ಮತ್ತು ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದಾರೆ. ಪರಿಸ್ಥಿತಿಗೆ ಬಹು ಬೇಗ ಪ್ರತಿಕ್ರಿಯೆ ನೀಡಿ, ನೇರವಾಗಿ ಮಾತನಾಡುವ ಒರಟು ಸಾಹಿತಿಯಂತೆ ಮೊಗಳ್ಳಿ ಗಣೇಶ್ ಕಾಣುತ್ತಾರೆ. ಅವರ ಬರಹದಲ್ಲಿ ಕೋಪದ ಉರಿಯೂ, ಸಮಾಜ ಬದಲಾವಣೆ ಹಂಬಲವೂ ಸೂರ್ಯನ ಬೆಳಕಿನಂತೆ ಸ್ಪಷ್ಟವಾಗಿದೆ ಎಂದು ಪ್ರಶಂಸಿಸಿದರು.
ಹಿರಿಯ ಜಾನಪದ ವಿದ್ವಾಂಸ ಡಾ.ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಚಿಂತಕ ಬಂಜೆಗೆರೆ ಜಯಪ್ರಕಾಶ್, ನಿವೃತ್ತ ಪ್ರಾಂಶುಪಾಲ ಕೆ.ಎಂ.ಮಾಯಿಗೌಡ, ಚಿಂತಕ ಧನಂಜಯ ಎಲಿಯೂರು, ಕ್ರೈಸ್ತ ಪಾದ್ರಿ ರಿವೆರೆಂಡ್ ಅಬ್ರಾಹಂ, ರೈತ ಹೋರಾಟಗಾರ್ತಿ ಅನಸೂಯಮ್ಮ, ರೈತ ಮುಖಂಡ ಸಿ.ಪುಟ್ಟಸ್ವಾಮಿ, ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೇಶ್, ಸಾಹಿತಿ ವಿಜಯ್ ರಾಂಪುರ, ಕಲಾವಿದ ರಾಜೇಶ್ ರಾಂಪುರ, ಮುಖಂಡರಾದ ಅಕ್ಕೂರು ಶೇಖರ್, ಪಿ.ಜೆ.ಗೋವಿಂದರಾಜು, ಮತ್ತೀಕೆರೆ ಹನುಮಂತಯ್ಯ, ಸಿದ್ದರಾಮಯ್ಯ, ಇತರರು ಭಾಗವಹಿಸಿದ್ದರು.
ಬಳಗದ ಸಂಚಾಲಕ ಬಿ.ಪಿ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಮೌರ್ಯ ನಿರೂಪಿಸಿದರು. ಪ್ರದೀಪ್ ವಂದಿಸಿದರು. ಗಾಯಕ ಬಿ.ಆರ್.ಶಿವಕುಮಾರ್ ಗೀತನಮನ ಸಲ್ಲಿಸಿದರು.
'ಮೊಗಳ್ಳಿ ಗಣೇಶ್ ಸಮಾಜದ ಅಸಹನೆಯನ್ನು ಬರಹದ ರೂಪದಲ್ಲಿ ಅದ್ಭುತವಾಗಿ ವ್ಯಕ್ತಪಡಿಸಿದ್ದಾರೆ. ಅವರ ಕೃತಿಗಳು ಪ್ರಸ್ತುತ ಕಾಲದ ಸಾಮಾಜಿಕ ವಾಸ್ತವತೆಗಳ ನಿಖರ ಪ್ರತಿಬಿಂಬವಾಗಿವೆಬಂಜೆಗೆರೆ ಜಯಪ್ರಕಾಶ್ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.