ADVERTISEMENT

ಸುಗ್ಗಿ ಹಬ್ಬ: ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು

ಬೆಲೆ ಏರಿಕೆ ಬಿಸಿಗೆ ಗ್ರಾಹಕ ತತ್ತರ l ಗ್ರಾಮೀಣ ಪರಿಸರದಲ್ಲಿ ಹಬ್ಬದ ಸಡಗರ l ಎಳ್ಳುಬೆಲ್ಲ ಬೀರಿದ ಹೆಣ್ಣುಮಕ್ಕಳು

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 3:19 IST
Last Updated 15 ಜನವರಿ 2021, 3:19 IST

ಕನಕಪುರ: ತಾಲ್ಲೂಕಿನಲ್ಲಿ ಸಂಕ್ರಾಂತಿ ಹಬ್ಬದ ಸಡಗರ ಹೆಚ್ಚಾಗಿದ್ದು ಜನರು ಸಡಗರ- ಸಂಭ್ರಮದಿಂದ ಸಾಮಾನುಗಳನ್ನು ಖರೀದಿಸಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದು ಕಂಡುಬಂದಿತು.

ರೈತರ ಬದುಕಿನ ಸುಗ್ಗಿ ಹಬ್ಬ ಎಂದೇ ಹೆಸರುಗಳಿಸಿರುವ ಸಂಕ್ರಾಂತಿ ಹಬ್ಬವು ರೈತರು ತಮ್ಮ ಮನೆಯಲ್ಲಿ ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ ಪೂಜಿಸುವ ಮೂಲಕ ಹಬ್ಬ ಆಚರಿಸಿದರು.

ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗೂ ಸುಗ್ಗಿಯ ಸಂಭ್ರಮವಾಗಿದೆ. ಸಂಜೆ ವೇಳೆಗೆ ತಾವು ಸಾಕಿರುವ ಎತ್ತುಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರ ಮಾಡಿದರು.ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಹಬ್ಬ ಬಂದರೂ ಅದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದು ಮಹಿಳೆಯರು. ಅದರಂತೆ ಸಂಕ್ರಾಂತಿ ವರ್ಷದ ಮೊದಲ ಸಂಭ್ರಮ ಇನ್ನಷ್ಟು ಇಮ್ಮಡಿಯಾಯಿತು.

ADVERTISEMENT

ಮಹಿಳೆಯರು ಈ ಹಬ್ಬದಲ್ಲಿ ಎಳ್ಳು ಬೀರುವುದು ಸಾಮಾನ್ಯವಾಗಿದೆ. ತಮ್ಮ ಮನೆಯ ಹೆಣ್ಣುಮಕ್ಕಳನ್ನು ಮುದ್ದಾಗಿ ಶೃಂಗಾರ ಮಾಡಿ ಮನೆ ಮನೆಗೆ ಎಳ್ಳುಬೆಲ್ಲ ಬೀರುವುದನ್ನು ಪುಟ್ಟಮಕ್ಕಳಿಂದ ಮಾಡಿಸಿದರು.ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ಬೆಲೆಗಳು ಕೊಂಚ ದುಬಾರಿ ಆಗಿದ್ದರೂ ಜನತೆ ಅದನ್ನು ಲೆಕ್ಕಿಸದೆ ಖರೀದಿ ಮಾಡಿದರು. ಅತ್ಯಂತ ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದರು.

ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು: ಸಂಕ್ರಾಂತಿ ಹಬ್ಬದಲ್ಲಿ ಜಾನುವಾರುಗಳನ್ನು ಕಿಚ್ಚು ಹಾಯಿಸುವುದು ಒಂದು ಸಂಭ್ರಮವಾಗಿದೆ.

ಇದರಲ್ಲಿ ಯುವಕರು ತಮ್ಮ ಹಸುಗಳು, ಎತ್ತುಗಳು, ಹೋರಿಗಳನ್ನು ಕಿಚ್ಚಾಯಿಸಲು ಪೈಪೋಟಿ ನಡೆಸುತ್ತಾರೆ. ಪ್ರತಿ ಗ್ರಾಮದಲ್ಲೂ ಗ್ರಾಮದ ಜನತೆ ಸೇರಿ ಸಂಕ್ರಮಣ ಗುಡಿ ನಿರ್ಮಿಸಿ ಅದಕ್ಕೆ ಶೃಂಗಾರ ಮಾಡಿ ಅಲ್ಲಿಗೆ ಎಲ್ಲಾ ಜಾನುವಾರುಗಳನ್ನು ಸೇರಿಸಿ ಕಿಚ್ಚು ಹಾಯಿಸುವುದು ಸರ್ವೇ ಸಾಮಾನ್ಯ.

ಇದಕ್ಕೂ ಮುನ್ನ ತಾವು ಸಾಕಿರುವ ಜಾನುವಾರುಗಳನ್ನು ಶೃಂಗಾರ ಮಾಡಿ ಮೆರವಣಿಗೆಯಲ್ಲಿ ಕರೆದುಕೊಂಡು ಸಂಕ್ರಮಣ ಗುಡಿಯವರೆಗೆ ಹೋಗಿ ಅಲ್ಲಿ ಪೂಜೆ ನೆರವೇರಿಸುತ್ತಾರೆ. ಬಳಿಕ ರಾಸುಗಳನ್ನು ಕಿಚ್ಚು ಹಾಯಿಸಿದ್ದು ಪ್ರತಿ ಗ್ರಾಮಗಳಲ್ಲೂ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.