ADVERTISEMENT

ಚನ್ನಪಟ್ಟಣ: ಮಂಡಿಪೇಟೆ ಕಾಮನ ಹಬ್ಬಕ್ಕೆ ಶತಮಾನದ ಇತಿಹಾಸ

ರತಿ ಮನ್ಮಥರನ್ನು ಪ್ರತಿಷ್ಠಾಪಿಸಿ, ಅಲಂಕರಿಸುವುದು ಇಲ್ಲಿನ ವಿಶೇಷ

ಎಚ್.ಎಂ.ರಮೇಶ್
Published 13 ಮಾರ್ಚ್ 2025, 6:37 IST
Last Updated 13 ಮಾರ್ಚ್ 2025, 6:37 IST
ಚನ್ನಪಟ್ಟಣದ ಪೇಟೆಬೀದಿಯಲ್ಲಿ ಹಾಕಿರುವ ಕಾಮನಹಬ್ಬ ಆಚರಣೆಯ ಸ್ವಾಗತ ಕೋರುವ ಕಮಾನು
ಚನ್ನಪಟ್ಟಣದ ಪೇಟೆಬೀದಿಯಲ್ಲಿ ಹಾಕಿರುವ ಕಾಮನಹಬ್ಬ ಆಚರಣೆಯ ಸ್ವಾಗತ ಕೋರುವ ಕಮಾನು   

ಚನ್ನಪಟ್ಟಣ: ನಗರದ ಇತಿಹಾಸ ಪ್ರಸಿದ್ಧ ಮಂಡೀಪೇಟೆಯ ಗರುಡಗಂಬದ ಬೀದಿಯ ಕಾಮನ ಹಬ್ಬದ ಉತ್ಸವ ಸಮಿತಿಯು ನೂರಕ್ಕೂ ಹೆಚ್ಚು ವರ್ಷಗಳಿಂದ ಕಾಮನ ಹಬ್ಬವನ್ನು ನಗರದಲ್ಲಿ ವಿಶೇಷವಾಗಿ ಆಚರಿಸುತ್ತಾ ಬರುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯ ಕಾಮನ ಹಬ್ಬವೂ ಎಲ್ಲರ ಗಮನ ಸೆಳೆಯುತ್ತಿದೆ.

ಶಿವರಾತ್ರಿ ಹಬ್ಬ ಮುಗಿದ ಮರುದಿನದಿಂದ ಆರಂಭವಾಗಿ ಹನ್ನೆರಡು ದಿನಗಳು ನಡೆಯುವ ಕಾಮನ ಹಬ್ಬದಲ್ಲಿ ರತಿ ಮನ್ಮಥರನ್ನು ಪ್ರತಿಷ್ಠಾಪಿಸಿ, ದಿನಕ್ಕೊಂದು  ಅಲಂಕಾರ ಮಾಡಿ, ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಈ ಹಬ್ಬದ ವಿಶೇಷ. ಹನ್ನೆರಡನೇ ದಿನ ಹುಣ್ಣಿಮೆಯಂದು ನಗರದಲ್ಲೆಡೆ ಮೆರವಣಿಗೆ ಮಾಡಿ ಕಾಮದಹನ ಮಾಡಲಾಗುತ್ತದೆ.

ಹೋಳಿಹಬ್ಬದ ದಿನ ಕಾಮನ ಹಬ್ಬ ಮಾಡಿ ಬಣ್ಣದೋಕುಳಿಯಾಡಿ ಸಂಭ್ರಮ ಪಡುವುದು ಎಲ್ಲೆಡೆ ನಡೆಯುತ್ತದೆ. ಆದರೆ, ಇಲ್ಲಿ ರತಿ ಮನ್ಮಥರನ್ನು ಪ್ರತಿಷ್ಠಾಪಿಸಿ, ಅವರಿಗೆ ದಿನಕ್ಕೊಂದು ಅಲಂಕಾರ ಮಾಡುವುದು ಇಲ್ಲಿನ ವಾಡಿಕೆ. ರತಿ ಮನ್ಮಥರನ್ನು ಬೈಕ್ ಮೇಲೆ ಕೂರಿಸುವ ಅಲಂಕಾರ, ಸತ್ಯನಾರಾಯಣ ಪೂಜೆ ಅಲಂಕಾರ, ಗುರು ರಾಘವೇಂದ್ರ ಆಚರಣೆ ಅಲಂಕಾರ, ಮದುವೆ ಒಪ್ಪಂದ ಅಲಂಕಾರ, ಹಳದಿಶಾಸ್ತ್ರ ಅಲಂಕಾರ, ಮದುವೆ ಶಾಸ್ತ್ರ ಅಲಂಕಾರ, ಕಾರಿನಲ್ಲಿ ದಿಬ್ಬಣ ಮೆರವಣಿಗೆ ಅಲಂಕಾರ ಹೀಗೆ ವಿವಿಧ ರೀತಿಯ ಅಲಂಕಾರ ಗಮನ ಸೆಳೆಯುತ್ತದೆ.

ADVERTISEMENT

ಕಾಮದಹನದ ಹಿಂದಿನ ದಿನ ರಾತ್ರಿ ಕೃತಕ ಆನೆ ಅಂಬಾರಿ ನಿರ್ಮಿಸಿ ಅಂಬಾರಿ ಮೇಲೆ ಮಹಾರಾಜ ಪಾತ್ರಧಾರಿಯನ್ನು ಕೂರಿಸಿ ಮೆರವಣಿಗೆ ಮಾಡುವುದು ಇಲ್ಲಿಯ ಮತ್ತೊಂದು ವಿಶೇಷ. ಈ ಮೆರವಣಿಗೆ ವೇಳೆ ಎತ್ತಿನಗಾಡಿ, ಟ್ರ್ಯಾಕ್ಟರ್, ಟೆಂಪೋಗಳಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ಆಂಜನೇಯ ಸೇರಿದಂತೆ ವಿಶೇಷ ವೇಷಧಾರಿಗಳ ಮೆರವಣಿಗೆಯೂ ನಡೆಯುತ್ತದೆ. ಜತೆಗೆ ಗರಡಿಮನೆಗಳ ಕುಸ್ತಿಪಟುಗಳ ದೊಣ್ಣೆ ವರಸೆ, ಕತ್ತಿವರಸೆ, ತೆಂಗಿನಕಾಯಿ ಒಡೆಯುವ ವರಸೆ ಮುಂತಾದವು ನೆರವೇರುತ್ತವೆ ಎಂಂಬುದು ರತಿಮನ್ಮಥ ಪೂಜೆ ಮಾಡುವ ಅರ್ಚಕ ಬಿ.ಗಂಗಾಧರಯ್ಯ ಅವರ ಮಾತಾಗಿದೆ.

ಕಾಮದಹನದ ದಿನ ಬೆಳಿಗ್ಗೆ ಮಂಡೀಪೇಟೆಯ ಲಕ್ಷ್ಮಿನಾರಾಯಣ ದೇವಸ್ಥಾನದ ಬಳಿಯಿಂದ ನಗರದ ಎಂ.ಜಿ. ರಸ್ತೆ ಸೇರಿದಂತೆ ವಿವಿಧೆಡೆ ಬೆಳಿಗ್ಗೆಯಿಂದ ಸಂಜೆಯವರೆಗೆ ರತಿಮನ್ಮಥರ ವಿಜೃಂಭಣೆಯ ಬೆಳ್ಳಿ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯುತ್ತದೆ. ಈ ವೇಳೆ ಮಂಡೀಪೇಟೆ ಹಾಗೂ ಅಕ್ಕಪಕ್ಕದ ನಿವಾಸಿಗಳು ಯಾವುದೇ ವಯಸ್ಸಿನ ತಾರತಮ್ಯವಿಲ್ಲದೆ ಬಣ್ಣದೋಕುಳಿಯಾಡುತ್ತಾರೆ. ಯುವ ಸಮೂಹ ಸಂಭ್ರಮದ ಅಲೆಯಲ್ಲಿ ತೇಲುತ್ತಾರೆ. ಮೆರವಣಿಗೆಯ ನಂತರ ಅದೇ ದಿನ ಸಂಜೆ ಕಾಮಣ್ಣನ ದೇವಸ್ಥಾನದ ಬಳಿ ಕಾಮದಹನ ನಡೆಸುವುದು ಇಲ್ಲಿನ ವಾಡಿಕೆಯಾಗಿದೆ ಎಂದು ಅವರು ವಿವರಿಸಿದರು.

ಪ್ರತಿವರ್ಷ ಕಾಮನ ಹಬ್ಬವನ್ನು ವಾಡಿಕೆಯಂತೆ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಈ ಹಬ್ಬ ಆಚರಣೆ ಮಾಡುವುದನ್ನು ಯಾರು, ಯಾವಾಗ ಆರಂಭಿಸಿದರು ಎನ್ನುವುದು ಯಾರಿಗೂ ತಿಳಿದಿಲ್ಲ. ಅನಾದಿಕಾಲದಿಂದಲೂ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ನಾವು ಸಹ ಮುಂದುವರೆಸುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಯೂ ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ಇದೆ ಎಂಬುದು ಗರುಡಗಂಬ ಬೀದಿಯ ನಿವಾಸಿಗಳ ಮಾತಾಗಿದೆ.

ರತಿ ಮನ್ಮಥರ ಬೈಕ್ ಸವಾರಿ ಅಲಂಕಾರ
ಹರಕೆ ಹೊತ್ತರೆ ಮದುವೆಯಾಗುತ್ತದೆ!
ರತಿ ಮನ್ಮಥರಿಗೆ ಹರಕೆ ಹೊತ್ತು ಮಡಿಲಕ್ಕಿ ಕಟ್ಟಿದರೆ ಮದುವೆಯಾಗುತ್ತದೆ, ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ ಎನ್ನುವುದು ಇಲ್ಲಿಯ ವಾಡಿಕೆಯಾಗಿದೆ. ರತಿ ಮನ್ಮಥರ ಪ್ರತಿಷ್ಠಾಪನೆಯಾದ ನಂತರ ಕೆಲವರು ಹರಕೆ ಹೊರಲು ಬರುತ್ತಾರೆ. ಮಂಗಳವಾರ, ಶುಕ್ರವಾರ ಮಡಿಲಕ್ಕಿ ಕಟ್ಟುತ್ತಾರೆ. ಅನೇಕ ಮಂದಿಗೆ ಅವರ ನಂಬಿಕೆ ನಿಜವಾಗಿದೆ. ಅಂತವರು ಮುಂದಿನ ವರ್ಷ ಹರಕೆ ತೀರಿಸಲು ಬರುತ್ತಾರೆ. ರತಿಮನ್ಮಥರಿಗೆ ಅಕ್ಕಿ, ಬಳೆ, ಸೀರೆ, ರವಿಕೆ, ಪಂಚೆ, ಶಲ್ಯ ಅರ್ಪಿಸಿ, ಪ್ರಸಾದ ತಯಾರಿಸಿ ಭಕ್ತರಿಗೆ ಪ್ರಸಾದ ಹಂಚುತ್ತಾರೆ ಎಂಬುದು ಅರ್ಚಕ ಗಂಗಾಧರಯ್ಯ ಅವರ ಮಾತಾಗಿದೆ.

ನಾಡಿನ ಸುಖ ಸಂತೋಷಕ್ಕಾಗಿ ಹಬ್ಬ

ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ನಾಡು ಸುಭಿಕ್ಷವಾಗಿರಲಿ. ಮಾನವ ಕುಲ, ಪ್ರಾಣಿ ಸಂಕುಲಕ್ಕೆ ಒಳ್ಳೆಯದಾಗಲಿ. ಎಲ್ಲರೂ ಸುಖ ಸಂತೋಷದಿಂದ ಇರಲಿ ಎನ್ನುವ ಉದ್ದೇಶದಿಂದ ಕಾಮನ ಹಬ್ಬ ಆಚರಿಸಲಾಗುತ್ತದೆ. ಇಲ್ಲಿ ಸಂಪ್ರದಾಯದಂತೆ ಕಾಮನಹಬ್ಬ ಆಚರಿಸಲಾಗುತ್ತಿದ್ದು, ಮುಂದಿನ ಪೀಳಿಗೆ ಇದನ್ನು ಮುಂದುವರೆಸಬೇಕು.
–ಬಿ. ಗಂಗಾಧರಯ್ಯ, ಅರ್ಚಕ, ಕಾಮನಗುಡಿ, ಚನ್ನಪಟ್ಟಣ.
ರತಿ ಮನ್ಮಥರ ಮದುವೆ ಶಾಸ್ತ್ರದ ಅಲಂಕಾರ

ಸಂಪ್ರದಾಯ ಮುಂದುವರಿಕೆ

ನಮ್ಮ ಹಿರಿಯರು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿರುವ ಕಾಮನಹಬ್ಬವನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ವಿವಿಧ ವಿಶೇಷತೆಗಳೊಂದಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಈ ಹಬ್ಬಕ್ಕೆ ಮತ್ತಷ್ಟು ಮೆರಗು ತರಲಾಗುವುದು.
–ರುದ್ರೇಶ್, ಕಾಮನಹಬ್ಬ ಸಮಿತಿಯ ಸಂಚಾಲಕ, ಚನ್ನಪಟ್ಟಣ.

ಎಲ್ಲರ ಸಹಕಾರ ದೊರೆಯುತ್ತಿದೆ

ಕಾಮನಹಬ್ಬ ಆಚರಣೆಗೆ ಮಂಡೀಪೇಟೆ ಹಾಗೂ ಗರುಡಗಂಬ ಬೀದಿಯ ನಿವಾಸಿಗಳು ಸಹಕಾರ ನೀಡುತ್ತಿದ್ದಾರೆ. ಇದರ ಜತೆಗೆ ವ್ಯಾಪಾರಿಗಳು, ಯುವ ಸಮೂಹದ ಪ್ರೋತ್ಸಾಹ ದೊರೆಯುತ್ತಿದೆ. ಸ್ವಇಚ್ಛೆಯಿಂದ ಹಣ ಸಹಾಯ ಮಾಡುತ್ತಾರೆ. ಅನೇಕರು ಕೈಜೋಡಿಸಿರುವುದರಿಂದ ಹಬ್ಬವನ್ನು ವಿಜೃಂಭಣೆಯಿಂದ ಮಾಡಲಾಗುತ್ತಿದೆ.
–ದೇವರಾಜು, ಕಾಮನಹಬ್ಬ ಸಮಿತಿ, ಚನ್ನಪಟ್ಟಣ.
ರತಿ ಮನ್ಮಥರ ದಿಬ್ಬಣದ ಮೆರವಣಿಗೆ ಅಲಂಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.