ADVERTISEMENT

ಸಿಇಟಿ ಪರೀಕ್ಷೆ ಸುಸೂತ್ರ; 483 ಮಂದಿ ಗೈರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 7:32 IST
Last Updated 19 ಏಪ್ರಿಲ್ 2024, 7:32 IST

ರಾಮನಗರ: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗುರುವಾರ ಎರಡು ವಿಷಯಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಗೆ(ಸಿಇಟಿ) ಜಿಲ್ಲೆಯಲ್ಲಿ 483 ವಿದ್ಯಾರ್ಥಿಗಳು ಗೈರಾದರು. ರಾಮನಗರ ಮತ್ತು ಚನ್ನಪಟ್ಟಣ ಸೇರಿ ಒಟ್ಟು 6 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ, ಜಿಲ್ಲೆಯಲ್ಲಿ 2,856 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

ಬೆಳಿಗ್ಗೆ 10.30ರಿಂದ 11.50ರವರೆಗೆ ನಡೆದ ಮೊದಲ ಪತ್ರಿಕೆ ಜೀವವಿಜ್ಞಾನಕ್ಕೆ 2,474 ಹಾಜರಾಗಿ, 382 ವಿದ್ಯಾರ್ಥಿಗಳು ಗೈರಾದರು. ಮಧ್ಯಾಹ್ನ 2.30ರಿಂದ 3.50ರವರೆಗೆ ನಡೆದ ಗಣಿತ ವಿಷಯದ ಪರೀಕ್ಷೆಗೆ 2,755 ವಿದ್ಯಾರ್ಥಿಗಳು ಹಾಜರಾಗಿ 101ವಿದ್ಯಾರ್ಥಿಗಳು ಗೈರಾದರು.

ರಾಮನಗರ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪಿಯು ಕಾಲೇಜು, ಯೂನಿವರ್ಸಲ್ ಪಿಯು ಕಾಲೇಜು, ಸಂಸ್ಕೃತಿ ಬಾಲಕಿಯರ ಪಿಯು ಕಾಲೇಜು ಹಾಗೂ ಚನ್ನಪಟ್ಟಣದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪಿಯು ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ದೂರದ ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಬಂದು ನೋಂದಣಿ ಸಂಖ್ಯೆ ಖಚಿತಪಡಿಸಿಕೊಂಡು ಕಡೆ ಗಳಿಗೆಯ ತಯಾರಿ ನಡೆಸಿದರು. ವಿದ್ಯಾರ್ಥಿಗಳ ಜೊತೆಗ ಪೋಷಕರು ಸಹ ಬಂದಿದ್ದರು.

ADVERTISEMENT

‘ಪರೀಕ್ಷಾ ಅಕ್ರಮ ತಡೆಯಲು, ಪ್ರತಿ ಕೊಠಡಿಯೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ಇಡಲಾಗಿತ್ತು. ಪರೀಕ್ಷಾ ಕೇಂದ್ರಗಳ ಬಳಿ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಏ. 19ರಂದು ಬೆಳಿಗ್ಗೆ ಭೌತ ವಿಜ್ಞಾನ ಮತ್ತು ಮಧ್ಯಾಹ್ನ ರಸಾಯನ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ನಾಗಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.