
ರಾಮನಗರ: ತಾಲ್ಲೂಕಿನ ಕೂನಮುದ್ದನಹಳ್ಳಿ ವೃದ್ಧೆ ಜಯಮ್ಮ ಅವರ ಚಿನ್ನದ ಸರ ದೋಚಿದ್ದ ಮೂವರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಕರಿ ಕೆಲಸ ಮಾಡುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಲಿಂಗಾಪಟ್ಟಣದ ದರ್ಶನ್ (21), ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಹಲಗೂರು ಗ್ರಾಮದ ಮನೋಜ್ (24) ಹಾಗೂ ಆಟೊ ಚಾಲಕನಾಗಿರುವ ಚನ್ನಪಟ್ಟಣ ತಾಲ್ಲೂಕಿನ ಕೆಂಚಯ್ಯನದೊಡ್ಡಿಯ ರಾಜು (26) ಬಂಧಿತರು.
ಆರೋಪಿಗಳ ಬಂಧನದಿಂದ ಎರಡು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ₹7.11 ಲಕ್ಷ ಮೌಲ್ಯದ 59.300 ಗ್ರಾಂ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಯಮ್ಮ ಅವರು 2025ರ ಸೆ. 25ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಕೊಟ್ಟಿಗೆ ಬಳಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಬಂದ ದರ್ಶನ್, ‘ತಾನು ಗಾರೆ ಕೆಲಸದವನು. ಕುಡಿಯಲು ನೀರು ಬೇಕು’ ಎಂದು ಕೇಳಿದ. ಜಯಮ್ಮ ನೀರು ತರಲು ಒಳಕ್ಕೆ ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಆರೋಪಿ ವೃದ್ದೆ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಓಡಿದ್ದ ಎಂದು ಪೊಲೀಸರು ಹೇಳಿದರು.
ನಂತರ ಅನತಿ ದೂರದಲ್ಲಿ ಬೈಕ್‌ನಲ್ಲಿ ಕಾಯುತ್ತಿದ್ದ ತನ್ನ ಸಹಚರರಾದ ಮನೋಜ್ ಮತ್ತು ರಾಜು ಜೊತೆ ಸ್ಥಳದಿಂದ ಪರಾರಿಯಾಗಿದ್ದ. ಆತನ ಕೃತ್ಯದಿಂದ ದಿಗ್ಬ್ರಮೆಗೊಂಡ ಜಯಮ್ಮ ಜೋರಾಗಿ ಕೂಗಿಕೊಂಡರು. ಸ್ಥಳಕ್ಕೆ ಬಂದ ಅಕ್ಕಪಕ್ಕದವರು ಸುತ್ತಮುತ್ತ ಹುಡುಕಾಡಿದರೂ ಆರೋಪಿಗಳು ಸಿಗಲಿಲ್ಲ. ನಂತರ ಜಯಮ್ಮ ಠಾಣೆಗೆ ಬಂದು ದೂರು ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲಾಯಿತು. ಸ್ನೇಹಿತರಾದ ಆರೋಪಿಗಳು ಶೋಕಿ ಜೀವನಕ್ಕಾಗಿ ಸರಗಳ್ಳತನಕ್ಕೆ ಇಳಿದಿದ್ದರು. ಇವರ ಬಂಧನದಿಂದಾಗಿ ಮಾದಾಪುರ ಗ್ರಾಮದಲ್ಲಿ ನಡೆದಿದ್ದ ಮತ್ತೊಂದು ಸರಗಳ್ಳತನ ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಮುರಳಿ ಟಿ., ಎಸ್‌ಐಗಳಾದ ಮಹಮ್ಮದ್ ಅಲ್ಲಾವುದೀನ್, ನರಸಿಂಹಯ್ಯ, ಸಿದ್ದರಾಜು ಹಾಗೂ ಸಿಬ್ಬಂದಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.