ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವ ಮತ್ತು ಸಂಗೀತ ಸಂಜೆ ಕಾರ್ಯಕ್ರಮದ ಪೋಸ್ಟರ್ ಅನ್ನು ಶುಕ್ರವಾರ ಬಿಡುಗಡೆ ಮಾಡಿದರು.
ರಾಮನಗರ: ‘ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವ ಜುಲೈ 15ಕ್ಕೆ ಅದ್ಧೂರಿಯಾಗಿ ಜರುಗಲಿದೆ. ಸಂಜೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು ಹಾಗೂ ಸಿನಿಮಾ ಕಲಾವಿದರು ಭಾಗವಹಿಸಲಿದ್ದಾರೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಭಾನುವಾರ ಪೂಜೆ ನೆರವೇರಿಸಿ, ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ಡಿ.ಕೆ. ಸುರೇಶ್, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಸಿ.ಪಿ. ಯೋಗೇಶ್ವರ್, ಪರಿಷತ್ ಸದಸ್ಯರದ ಎಸ್.ರವಿ, ಪುಟ್ಟಣ್ಣ, ಸುಧಾಮ ದಾಸ್, ರಾಮೋಜಿ ಗೌಡ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದರು.
‘ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಇರಲಿದೆ. ಸಿನಿಮಾ ನಟರಾದ ರವಿಚಂದ್ರನ್, ಶ್ರೀಮುರುಳಿ, ಯುವ ರಾಜಕುಮಾರ್, ನಟಿಯರಾದ ರಾಗಿಣಿ, ಸಂಜನಾ, ತನಿಷಾ ಕುಪ್ಪಂಡ, ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ರಘು ದೀಕ್ಷಿತ್, ಚಂದನ್ ಶೆಟ್ಟಿ ಸೇರಿದಂತೆ ಹಲವರು ಮೆರಗು ತುಂಬಲಿದ್ದಾರೆ’ ಎಂದು ತಿಳಿಸಿದರು.
ವಿದ್ಯದ್ದೀಪಾಲಂಕಾರ: ‘ಕರಗವನ್ನು ಸೌಹಾರ್ದದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ. ನಗರದ ಬೀದಿಗಳನ್ನು ವಿದ್ದುದ್ದೀಪಗಳಿಂದ ಅಲಂಕರಿಸಲಾಗಿದೆ. ಜೂನಿಯರ್ ಕಾಲೇಜು ಮೈದಾನ ಮನರಂಜನಾ ಆಟಗಳು ಶುರುವಾಗಿದ್ದು, ರಸ್ತೆಯಲ್ಲಿ ಅಂಗಡಿಗಳು, ವಸ್ತು ಪ್ರದರ್ಶನಗಳು ಈಗಾಗಲೇ ತೆರೆದಿವೆ. ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನ ಭಾಗವಹಿಸುವುದರಿಂದ ಅಗತ್ಯ ಪೊಲೀಸ್ ಬಂದೋಬಸ್ತ್‌ಗೆ ಸೂಚಿಸಲಾಗಿದೆ’ ಎಂದು ಹೇಳಿದರು.
12 ದೇಗುಲಕ್ಕೆ ಮಡಿಲಕ್ಕಿ: ‘ಈ ವರ್ಷವೂ ನಗರದ 12 ದೇವಸ್ಥಾನಗಳಿಗೆ ಸೋಮವಾರ ಮಡಿಲಕ್ಕಿ ಅರ್ಪಿಸಲಾಗುವುದು. ಕರಗ ಮಹೋತ್ಸವಕ್ಕೆ ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಅಗತ್ಯ ಸಹಕಾರ ನೀಡಿದ್ದು, ಈ ಸಲವೂ ಯಶಸ್ವಿಯಾಗಿ ಕರಗ ಮಹೋತ್ಸವ ಜರುಗಲಿದೆ’ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ಬಿ.ಸಿ. ಪಾರ್ವತಮ್ಮ, ವಿಜಯಕುಮಾರಿ, ಗಿರಿಜಮ್ಮ, ಬೈರೇಗೌಡ, ನಾಗಮ್ಮ, ಜಯಲಕ್ಷ್ಮಮ್ಮ, ಸಮದ್, ಪದ್ಮಮ್ಮ ಮುಖಂಡರಾದ ಸಿಎನ್‌ಆರ್ ವೆಂಕಟೇಶ್, ರವಿಕಿರಣ್, ಶಿವಶಂಕರ್, ನಾಗೇಶ್, ಗುರುಪ್ರಸಾದ್, ರವಿ ಹಾಗೂ ಇತರರು ಇದ್ದರು.
‘ಕರಗಕ್ಕೆ ಹಣ ಸಂಗ್ರಹಿಸಿಲ್ಲ’:
‘ನಾನು ಶಾಸಕನಾದ ಬಳಿಕ ಸತತ ಮೂರನೇ ವರ್ಷ ಕರಗದ ಜವಾಬ್ದಾರಿ ವಹಿಸಿಕೊಂಡು ನೆರವೇರಿಸುತ್ತಿರುವೆ. ಅದಕ್ಕಾಗಿ ಸಮಿತಿ ರಚಿಸಿ ಎಲ್ಲರಿಗೂ ಜವಾಬ್ದಾರಿ ಕೊಟ್ಟಿರುವೆ. ಕರಗ ಹೆಸರಿನಲ್ಲಿ ಹಣ ಸಂಗ್ರಹಿಸುವುದಕ್ಕೆ ಬ್ರೇಕ್ ಹಾಕಲಾಗಿದೆ. ನಾನೇ ಸುಮಾರು ಒಂದೂವರೆ ಕೋಟಿಯಷ್ಟು ಖರ್ಚು ಮಾಡಿರುವೆ. ಈ ಸಲ ಪಾಸ್ ವ್ಯವಸ್ಥೆ ಇರುವುದಿಲ್ಲ. ಬದಲಿಗೆ ವಸ್ತು ಪ್ರದರ್ಶನದ ಶುಲ್ಕವನ್ನು ಎಲ್ಲರಿಗೂ ಕೈಗೆಟುಕುವಂತೆ ಕನಿಷ್ಠ ₹40ರಿಂದ ₹60ರೊಳಗೆ ನಿಗದಿಪಡಿಸಲಾಗಿದೆ. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಹಲವು ವರ್ಷಗಳಿಂದ ಶ್ರೀರಾಮ ಟಾಕೀಸ್ ಬಳಿ ನಡೆದುಕೊಂಡು ಬಂದಿರುವ ಕಾರ್ಯಕ್ರಮಕ್ಕೂ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ’ ಎಂದು ಹುಸೇನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.