ADVERTISEMENT

ಶಿಕ್ಷಣದ ಜತೆಗೆ ಸಾಂವಿಧಾನಿಕ ಮೌಲ್ಯ ಕಲಿಯಿರಿ

ಮಕ್ಕಳ ಸಂವಿಧಾನ ಕ್ಲಬ್ ‌ಸಮಾರಂಭ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 7:40 IST
Last Updated 4 ಏಪ್ರಿಲ್ 2024, 7:40 IST
ಚನ್ನಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದ ಮಕ್ಕಳ ಸಂವಿಧಾನ ಕ್ಲಬ್ ಸಮಾರೋಪ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು
ಚನ್ನಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದ ಮಕ್ಕಳ ಸಂವಿಧಾನ ಕ್ಲಬ್ ಸಮಾರೋಪ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು   

ಚನ್ನಪಟ್ಟಣ: ಮಕ್ಕಳು ಶಿಕ್ಷಣದ ಜತೆಗೆ ಬದುಕಿಗೆ ಬೇಕಾದ ಎಲ್ಲ ಕೌಶಲ, ಪ್ರಜಾಪ್ರಭುತ್ವ ತತ್ವ ಹಾಗೂ ಸಾಂವಿಧಾನಿಕ ಮೌಲ್ಯ ಕಲಿಯಬೇಕಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಪ್ರಾಂಶುಪಾಲರಾದ ಎಚ್.ಎಲ್.ಕಮಲಮ್ಮ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ಸಂವಿಧಾನ ಕ್ಲಬ್ ‌ಸಮಾರಂಭದಲ್ಲಿ ಮಾತನಾಡಿದರು.

ದೇಶದಲ್ಲಿ ಸಮಾಜದ ಪರಿವರ್ತನೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ. ಪ್ರಸ್ತುತ ಯುವಜನರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಕ್ಕಳ ಸಂವಿಧಾನ ಕ್ಲಬ್ ರಚಿಸಿ ವಿದ್ಯಾರ್ಥಿಗಳು ಶಾಲೆಯಲ್ಲಿ ಕೌಶಲ ಕಲಿಯಲು ಸಮಾಜ ಕಲ್ಯಾಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಮಕ್ಕಳು ತರಗತಿಯಲ್ಲಿ ಕಲಿತ ಮಾನವೀಯ ಮೌಲ್ಯಗಳ ವಿಷಯಗಳನ್ನು ಸ್ನೇಹಿತರಿಗೆ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುವ ಮೂಲಕ ಅವರಲ್ಲಿಯೂ ಸಹ ಮೌಲ್ಯಗಳನ್ನು ಬಿತ್ತಲು ಪ್ರೇರೇಪಿಸಲಾಗಿದೆ ಎಂದರು.

ADVERTISEMENT

ಶಿಕ್ಷಕಿ ಕೆ.ಆರ್.ಶಿಲ್ಪ ಮಾತನಾಡಿ, ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ನಡೆಸುವ ಎಲ್ಲ 800 ವಸತಿ ಶಾಲೆಗಳಲ್ಲಿ ಮಕ್ಕಳ ಸಂವಿಧಾನ ಕ್ಲಬ್ ಅನುಷ್ಠಾನಗೊಂಡಿದೆ. ಮಕ್ಕಳು ಸ್ಥಳೀಯ ಸರ್ಕಾರದೊಂದಿಗೆ ಭಾಗವಹಿಬೇಕು. ಮಕ್ಕಳ ಹಕ್ಕುಗಳು ಮತ್ತು ಜವಾಬ್ದಾರಿ, ದಿನನಿತ್ಯದ ಬದುಕಿನಲ್ಲಿ ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ಆಲೋಚನೆ ಬೆಳೆಸಿಕೊಳ್ಳಬೇಕಿದೆ. ಸಮಾನತೆ, ನ್ಯಾಯ, ಭ್ರಾತೃತ್ವ, ಪ್ರಕೃತಿಯೊಂದಿಗೆ ಸಾಮರಸ್ಯ ಬೆಳೆಸಿಕೊಳ್ಳಬೇಕು. ಜ್ಞಾನ, ಪರಸ್ಪರ ಗೌರವ ಮನೋಭಾವ ಮತ್ತು ನಡವಳಿಕೆಯಲ್ಲಿ ಬದಲಾವಣೆ ತರಲು ಕ್ಲಬ್‌ಗಳ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ನಿಲಯಪಾಲಕಿ ಎ.ಪಿ.ಶಕುಂತಲಾ, ಶಿಕ್ಷಕಿಯರಾದ ಚೈತ್ರಾ, ವರಲಕ್ಷ್ಮಿ ಸುವರ್ಣ, ವಿದ್ಯಾರ್ಥಿನಿಯರಾದ ಶ್ರದ್ಧಾ, ಖುಷಿ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.