ADVERTISEMENT

ಚನ್ನಪಟ್ಟಣ | ವಿದ್ಯುತ್ ಚಿತಾಗಾರದ ನಿರ್ವಹಣೆ ಖಾಸಗಿಯವರಿಗೆ; ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 15:34 IST
Last Updated 11 ಜೂನ್ 2025, 15:34 IST
ಚನ್ನಪಟ್ಟಣದ ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ವಾಸಿಲ್ ಆಲಿಖಾನ್ ಮಾತನಾಡಿದರು. ಪೌರಾಯುಕ್ತ ಮಹೇಂದ್ರ, ಸ್ಥಾಯಿ ಸಮಿತಿ ಸದಸ್ಯ ಚಂದ್ರಶೇಖರ್ ಇದ್ದರು
ಚನ್ನಪಟ್ಟಣದ ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ವಾಸಿಲ್ ಆಲಿಖಾನ್ ಮಾತನಾಡಿದರು. ಪೌರಾಯುಕ್ತ ಮಹೇಂದ್ರ, ಸ್ಥಾಯಿ ಸಮಿತಿ ಸದಸ್ಯ ಚಂದ್ರಶೇಖರ್ ಇದ್ದರು   

ಚನ್ನಪಟ್ಟಣ: ನಗರದ ರಾಮಮ್ಮನ ಕೆರೆ ಬಳಿ ನಿರ್ಮಿಸಿರುವ ವಿದ್ಯುತ್ ಚಿತಾಗಾರದ ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸುವ ಕುರಿತು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.

ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ವಾಸಿಲ್ ಆಲಿಖಾನ್, ವಿದ್ಯುತ್ ಚಿತಾಗಾರ ನಿರ್ಮಿಸಿ ಎರಡು ವರ್ಷ ಕಳೆದಿದೆ. ಚಿತಾಗಾರಕ್ಕೆ ಅಳವಡಿಸಿದ್ದ ಸಾಕಷ್ಟು ವಸ್ತುಗಳು ಕಳ್ಳತನವಾಗಿವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಚಿತಾಗಾರದ ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸಿ ಶೀಘ್ರ ಕಾರ್ಯಾರಾಂಭ ಮಾಡಲು ಸಭೆಯ ಒಪ್ಪಿಗೆಗೆ ಮನವಿ ಮಾಡಿದರು. ಈ ವಿಷಯ ಕುರಿತು ಚರ್ಚೆ ನಡೆಸಿ ನಂತರ ಒಪ್ಪಿಗೆ ಸೂಚಿಸಲಾಯಿತು.

ಬೆಸ್ಕಾಂ ವತಿಯಿಂದ ನಗರ ಪ್ರದೇಶದ ಕೆಲವು ಕಡೆಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳು ವಾಲಿಕೊಂಡಿವೆ. ಇನ್ನು ಹಲವು ಕಂಬಗಳು, ಪ್ಯಾನಲ್ ಬೋರ್ಡ್‌ಗಳು ತೀರಾ ಹಳೆದಾಗಿವೆ. ಈ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿವೆ. ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಯಾವುದೇ ಅನಾಹುತ ಸಂಭವಿಸುವ ಮುನ್ನಾ ಇವುಗಳನ್ನು ಬದಲಿಸುವಂತೆ ವಾಸಿಲ್ ಅಲಿಖಾನ್ ಸೂಚನೆ ನೀಡಿದರು.

ADVERTISEMENT

ನಗರ ಪ್ರದೇಶದಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಅಗೆದಿರುವ ರಸ್ತೆಯು ಹಲವು ಕಡೆ ಗುಂಡಿ ಬಿದ್ದಿದೆ. ಅಲ್ಲಿ ಓಡಾಡುವ ಜನ ಆಯಾತಪ್ಪಿ ಗುಂಡಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಈ ಕೂಡಲೇ ಅದನ್ನು ಸರಿಪಡಿಸಬೇಕು. ಅಂತೆಯೇ ಮನೆಗಳಿಗೆ ಸಂಪರ್ಕ ಕಲ್ಪಿಸುವ ಗ್ಯಾಸ್ ಪೈಪ್‌ಲೈನ್ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಜೊತೆಗೆ ಅಪೂರ್ಣವಾಗಿರುವ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಹಾಗೆಯೇ ನಗರ ಪ್ರದೇಶದಲ್ಲಿ ಕಾವೇರಿ ಪೈಪ್‌ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಬೇಕು. ಕೆಲವು ಕಡೆ ಬೋರ್‌ವೆಲ್‌ಗೆ ಅಳವಡಿಸಿದ್ದ ಹಳೆ ಮೋಟರ್ ತೆಗೆಯಲಾಗಿದೆ. ಆದರೆ, ಹೊಸ ಮೋಟರ್ ಅಳವಡಿಸಿಲ್ಲ. ಇದನ್ನು ಸರಿಪಡಿಸಿ. ತುಕ್ಕು ಹಿಡಿದಿರುವ ಪ್ಯಾನಲ್ ಬೋರ್ಡ್ ಬದಲಿಸಬೇಕು. ಕಾವೇರಿ ಪೈಪ್‌ಲೈನ್ ಕಾಮಗಾರಿ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರಸಭೆ ಸಾಮಾನ್ಯ ಸಭೆ ಕರೆದರೆ ಬಹುತೇಕ ಇಲಾಖೆ ಅಧಿಕಾರಿಗಳು ಸರಿಯಾದ ಮಾಹಿತಿಯೊಂದಿಗೆ ಸಭೆಗೆ ಬರುವುದಿಲ್ಲ. ಸೂಕ್ತ ದಾಖಲೆಗಳೊಂದಿಗೆ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ನಗರಸಭೆ ಸಾಮಾನ್ಯ ಸಭೆಗೆ ಸೂಕ್ತ ಮಾಹಿತಿಯೊಂದಿಗೆ ಬರುವಂತೆ ಪೌರಾಯುಕ್ತರು ಅಧಿಕಾರಿಗಳಿಂದ ಸೂಕ್ತ ಮಾಹಿತಿ ನೀಡಬೇಕು ಎಂದರು.

ನಗರ ವ್ಯಾಪ್ತಿಯಲ್ಲಿ ಯಾವ ವಾರ್ಡ್‌ನಲ್ಲಿ ಎಷ್ಟು ಎಲ್‌ಇಡಿ ಬಲ್ಬ್ ಅಳವಡಿಸಲಾಗುತ್ತಿದೆ ಎಂಬ ಮಾಹಿತಿ ಸದಸ್ಯರಿಗೆ ಇಲ್ಲ. ಕ್ಲ್ಯಾಂಪ್ ಹಾಕದೆ ತಂತಿ ಕಟ್ಟಿ ಹಲವು ಕಡೆ ಬಲ್ಬ್ ಅಳವಡಿಸಲಾಗಿದೆ ಎಂದು ಕೆಲವು ಸದಸ್ಯರು ಆರೋಪಿಸಿದರು. ನಗರದಲ್ಲಿ ಪ್ರತಿ ವಾರ್ಡ್‌ನಲ್ಲೂ 100 ಎಲ್‌ಇಡಿ ಬಲ್ಬ್‌ಗಳಂತೆ ಒಟ್ಟು 3,926 ಬಲ್ಬ್ ಅಳವಡಿಸಲಾಗುತ್ತಿದೆ ಎಂದು ವಾಸೀಲ್ ಅಲಿಖಾನ್ ತಿಳಿಸಿದರು.

ಸಭೆಯಲ್ಲಿ ಇನ್ನೂ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಜೊತೆಗೆ ಹಲವು ವಿಚಾರಗಳಿಗೆ ಅನುಮೋದನೆ ಪಡೆಯಲಾಯಿತು. ಪೌರಾಯುಕ್ತ ಮಹೇಂದ್ರ, ಸ್ಥಾಯಿ ಸಮಿತಿ ಸದಸ್ಯ ಚಂದ್ರಶೇಖರ್, ನಗರಸಭೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.