
ಚನ್ನಪಟ್ಟಣ: ನಗರದ ಕೋಟೆ ರಸ್ತೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಹಾಶಿವರಾತ್ರಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ಅಧ್ಯಕ್ಷ ರಾಂಪುರ ರಾಜಣ್ಣ ತಿಳಿಸಿದರು.
ದೇವಸ್ಥಾನ ಆವರಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.15ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನದ ನಂತರ ದರ್ಶನ ಆರಂಭವಾಗಲಿದೆ. ಚನ್ನಪಟ್ಟಣ, ರಾಮನಗರ ಸೇರಿದಂತೆ ಸುತ್ತಮುತ್ತಲಿನ 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ರಾತ್ರಿಯಿಂದ ಬೆಳಗಿನ ಜಾವದವರೆಗೆ ಜಾಗರಣೆ ಅಂಗವಾಗಿ ಹಲವು ಕಾರ್ಯಕ್ರಮ ನಡೆಯಲಿದೆ. ಜೈಭುವನೇಶ್ವರಿ ಮಹಿಳಾ ಭಜನಾ ಮಂಡಳಿಯಿಂದ ನಾಮ ಸಂಕೀರ್ತನೆ, ಭಾರತ ವಿಕಾಸ ಪರಿಷತ್ ಮಹಿಳಾ ಭಜನಾ ಮಂಡಳಿಯಿಂದ ಶಿವಾನಂದ ಲಹರಿ ಮತ್ತು ನಾಮಸಂಕೀರ್ತನೆ, ರಜತಾದ್ರಿ ಮಹಿಳಾ ಭಜನಾ ಮಂಡಳಿಯಿಂದ ದೇವರ ನಾಮ, ಅಂಜನಾದ್ರಿ ಮಂಡಳಿಯಿಂದ ನಾಮಸಂಕೀರ್ತನೆ, ಕಲ್ಪಶ್ರೀ ಫರ್ ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಟ್ರಸ್ಟ್ ವತಿಯಿಂದ ಭರತನಾಟ್ಯ, ಕೂಚುಪುಡಿ, ಒಡಿಸ್ಸಿ, ಕಥಕ್ ನೃತ್ಯ ಹಾಗೂ ಶಾಸ್ತ್ರೀಯ ಸಂಗೀತ, ಶಾರದಾ ನಾಗೇಶ್ ಮತ್ತು ತಂಡದಿಂದ ನಾಮಸಂಕೀರ್ತನೆ, ಸಾಯಿಬಾಬಾ ದೇವಸ್ಥಾನದ ಮಕ್ಕಳಿಂದ ಭಜನೆ, ಕೆರೆಗೋಡು ಉಮೇಶ್ ಮತ್ತು ತಂಡದವರಿಂದ ಹರಿಕಥೆ ನಡೆಯಲಿದೆ.
ಫೆ.16ರಂದು ಬೆಳಿಗ್ಗೆ 7.30ರಿಂದ ಮಧ್ಯಾಹ್ನದವರೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ರಾಜಣ್ಣ ತಿಳಿಸಿದರು.
ಗೋಷ್ಠಿಯಲ್ಲಿ ಟ್ರಸ್ಟಿನ ಉಪಾಧ್ಯಕ್ಷ ಡಿ.ಎಂ.ಮಂಜುನಾಥ್, ಕಾರ್ಯದರ್ಶಿ ಪುಟ್ಟಮಾದಯ್ಯ, ಖಜಾಂಚಿ ಪುಟ್ಟಸ್ವಾಮಿ, ನಿರ್ದೇಶಕರಾದ ಎಂ.ಸುರೇಶ್, ಎಂ.ಶ್ಯಾಮ್ ಸುಂದರ್, ತಮ್ಮಣ್ಣಗೌಡ, ಪಿ.ಮಧು, ಎಚ್.ಎನ್.ರವಿ, ಅರ್ಚಕ ಎಸ್.ಜಿ.ರಮೇಶ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.