
ಚನ್ನಪಟ್ಟಣ: ‘ತಾಲ್ಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ನರೇಗಾ ಕಾಮಗಾರಿಗಳ ಸಾಮಗ್ರಿ ವೆಚ್ಚ ಮತ್ತು 15ನೇ ಹಣಕಾಸು ಆಯೋಗದಲ್ಲಿ ನಡೆದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ’ ಎಂದು ಮಾಕಳಿ ಗ್ರಾಮದ ಮುಖಂಡ ಎಂ.ಎಲ್. ಲೋಕೇಶ ಆರೋಪಿಸಿದರು.
‘ಈ ಅವ್ಯವಹಾರಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಸಿದ್ದಲಿಂಗೇಗೌಡ ಅವರೇ ನೇರ ಕಾರಣರಾಗಿದ್ದು, ಅವರ ಸದಸ್ಯತ್ವ ರದ್ದುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಪತ್ರಗಳನ್ನು ಪ್ರದರ್ಶಿಸಿ ಮಾತನಾಡಿದರು.
ಅಧ್ಯಕ್ಷ ಸಿದ್ದಲಿಂಗೇಗೌಡ ಒಡೆತನದ ಇಟ್ಟಿಗೆ ಕಾರ್ಖಾನೆಯಿಂದ ನರೇಗಾ ಕಾಮಗಾರಿಗೆ ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂದು ಬಿಲ್ ಮಾಡಿಕೊಳ್ಳಲಾಗಿದೆ. ಜೊತೆಗೆ ತಮ್ಮ ಮಗ ಮಂಜುನಾಥ್ ಅವರಿಗೆ ಸೇರಿದ ವೆಂಡರ್ ಖಾತೆಗೆ ನಿಯಮಬಾಹಿರವಾಗಿ 47.18 ಲಕ್ಷ ನರೇಗಾ ಹಣವನ್ನು ಜಮೆ ಮಾಡಿಸಿದ್ದಾರೆ. ಈ ಇಟ್ಟಿಗೆ ಕಾರ್ಖಾನೆಗೆ ಜಿಲ್ಲಾಡಳಿತದಿಂದ ಅನುಮತಿಯೂ ಪಡೆದಿಲ್ಲ. ತೆರಿಗೆಯನ್ನೂ ಕಟ್ಟಿಲ್ಲ ಎಂದು ಅವರು ದೂರಿದರು.
ಯಾವುದೇ ಗ್ರಾಮ ಪಂಚಾಯಿತಿ ಸದಸ್ಯರು ತಾವು ಸದಸ್ಯರಾದ ಗ್ರಾಮ ಪಂಚಾಯಿತಿಯಲ್ಲಿ ಸ್ವತಃ ಅಥವಾ ತನ್ನ ಕುಟುಂಬದ ಹತ್ತಿರದ ಬಂಧುಗಳ ಮೂಲಕ ನರೇಗಾ ಯೋಜನೆಯಡಿ ಸಾಮಗ್ರಿ ಪೂರೈಕೆದಾರರಾಗಿ, ಸಾಮಗ್ರಿ ಬಿಲ್ ಪಡೆದುಕೊಂಡಿದ್ದಲ್ಲಿ ಅಂತಹ ಸದಸ್ಯರನ್ನು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43ಎ(ವಿ) ಅಡಿ ಸದಸ್ಯತ್ವದಿಂದ ವಜಾ ಮಾಡಲು ಅವಕಾಶವಿದೆ. ಆದರೆ, ಅಧಿಕಾರಿಗಳು ಈ ನಿಯಮ ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಈ ಸಂಬಂಧ ನಾನು ಜಿಲ್ಲಾ ಪಂಚಾಯಿತಿ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದೂರು ನೀಡಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಧ್ಯಕ್ಷರ ಅಕ್ರಮದ ಬಗ್ಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಕ್ಟೋಬರ್ ಒಂದರಂದು ಗ್ರಾಮ ಪಂಚಾಯಿತಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದೆ. ಅಂದು ಸ್ಥಳಕ್ಕೆ ಬಂದಿದ್ದ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶಿವಕುಮಾರ್ 15 ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಹೀಗಾಗಿ, ಧರಣಿ ವಾಪಸ್ ಪಡೆದಿದ್ದೆ. ಆದರೆ, ಈವರೆಗೆ ಕ್ರಮ ಜರುಗಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅಕ್ರಮ ಎಸಗಿದ ಗ್ರಾ.ಪಂ. ಅಧ್ಯಕ್ಷ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜೊತೆಗೆ ಅವರ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನ.5ರಂದು ಬೆಂಗಳೂರಿನ ಗಾಂಧಿನಗರದ ಫ್ರೀಡಂ ಪಾರ್ಕ್‌ನಲ್ಲಿ ನನ್ನ ಬೆಂಬಲಿಗರ ಜೊತೆ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದರು.
ಗ್ರಾಮದ ಮುಖಂಡ ಸಿದ್ದಲಿಂಗಯ್ಯ, ಕೆಂಪೇಗೌಡ ಹಾಜರಿದ್ದರು.
‘ತನಿಖೆಗೆ ಸಿದ್ಧವಿದ್ದೇನೆ’
‘ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದಾಗ ದುರುದ್ದೇಶಪೂರ್ವಕವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ನಾನು ಅಧ್ಯಕ್ಷನಾದ ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ’ ಎಂದು ಮಾಕಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಸಿದ್ದಲಿಂಗೇಗೌಡ ತಿಳಿಸಿದರು. ‘ನನ್ನ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಮುಂದಾದರೆ ತನಿಖೆಗೆ ಸಹಕಾರ ನೀಡುತ್ತೇನೆ. ತನಿಖೆಗೆ ನಾನು ಸಿದ್ಧನಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.