
ಚನ್ನಪಟ್ಟಣ: ತಾಲ್ಲೂಕಿನ ಲಂಬಾಣಿ ತಾಂಡಾ ಗ್ರಾಮದ ಬಳಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಿಳುನಾಡಿನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ಚಾಕು ತೋರಿಸಿ ಅವರ ಬಳಿ ಇದ್ದ ನಗದು, ಚಿನ್ನಾಭರಣ, ಮೊಬೈಲ್ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚನ್ನಪಟ್ಟಣ ನಗರದ ಸೈಯದ್ ವಾಡಿಯ ಸೈಯದ್ ತನ್ವೀರ್ ಅಲಿಯಾಸ್ ತನ್ನು (30), ರಾಮನಗರ ನಗರದ ಫೈರೋಜ್ ಪಾಷಾ (28), ಗೆಜ್ಜಲಗುಡ್ಡೆಯ ತನ್ವೀರ್ ಪಾಷಾ (32) ಬಂಧಿತರು. ಬಂಧಿತರಿಂದ ದ್ವಿಚಕ್ರ ವಾಹನ, ಮಾರಕಾಸ್ತ್ರಗಳು, ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ತಮ್ಮ ಮಗನನ್ನು ತಮ್ಮ ಊರಿಗೆ ಕರೆದೊಯ್ಯಲು ತಮಿಳುನಾಡಿನ ಚೀರಂಬಾಡಿ ಪೊಲೀಸ್ ಠಾಣೆ ಪಿಎಸ್ಐ ಶಾಜಿನ್ ಅವರು ತಮ್ಮ ಪತ್ನಿಯೊಂದಿಗೆ ಅಕ್ಟೋಬರ್ 6ರಂದು ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಮಧ್ಯರಾತ್ರಿ ನಿದ್ದೆ ಬಂದಿದ್ದರಿಂದಾಗಿ ಲಂಬಾಣಿ ತಾಂಡದ ಬಳಿಯ ಹೆದ್ದಾರಿಯಲ್ಲಿ ಕಾರನ್ನು ನಿಲ್ಲಿಸಿ ಮಲಗಿದ್ದರು. ಅ.7ರ ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಸ್ಕೂಟಿಯಲ್ಲಿ ಬಂದ ಮೂವರು ಚಾಕು ತೋರಿಸಿ, ಅವರ ಬಳಿ ಇದ್ದ ಎರಡು ಮೊಬೈಲ್, ಬೇಬಿನಲ್ಲಿದ್ದ ₹10,000 ನಗದು, ಶಾಜಿನ್ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಶಾಜಿನ್ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಕೆ. ಪ್ರಕಾಶ್, ಸಬ್ ಇನ್‌ಸ್ಪೆಕ್ಟರ್ ಬಿ.ಮನೋಹರ್, ಅಜಯ್ ಗೌಡ, ಅಕ್ಕೂರು ಠಾಣೆ ಪಿಎಸ್ಐ ಪ್ರಜ್ವಲ್, ಸಿಬ್ಬಂದಿ ಶಿವಕುಮಾರ್, ಹನುಮಂತ ಶೆಟ್ಟಿ, ಎನ್.ಪಿ. ಶಿವು, ಪವನ್ ಕುಮಾರ್, ಪ್ರವೀಣ್, ಜಿಲ್ಲಾ ತಾಂತ್ರಿಕ ವಿಭಾಗದ ಮಹದೇವ್ ತನಿಖೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.