
ಆರೋಪಿ ತಿಮ್ಮರಾಜು
ಚನ್ನಪಟ್ಟಣ: ಬುದ್ಧಿಮಾಂದ್ಯ ಪುತ್ರಿ ಮೇಲೆ ತಂದೆಯೇ ಅತ್ಯಾಚಾರ ಎಸಗಿರುವ ಘಟನೆ ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯ ಹೀನ ಕೃತ್ಯದ ಕುರಿತು ಪತ್ನಿ ನೀಡಿದ ದೂರಿನ ಮೇರೆಗೆ ತಿಮ್ಮರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದಂಪತಿಗೆ ಮೂವರು ಪುತ್ರಿಯರಿದ್ದು, ಆ ಪೈಕಿ 23 ವರ್ಷದ ಹಿರಿಯ ಪುತ್ರಿ ಬುದ್ಧಿಮಾಂದ್ಯಳಾಗಿದ್ದಾಳೆ. ಉಳಿದಿಬ್ಬರು ಪುತ್ರಿಯರು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಹೊರಗಡೆ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ತಿಮ್ಮರಾಜು, ಹದಿನೈದು ದಿನಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ.
ಬುದ್ಧಿಮಾಂದ್ಯ ಪುತ್ರಿಯೊಂದಿಗೆ ಗ್ರಾಮದಲ್ಲೇ ನೆಲೆಸಿದ್ದ ಪತ್ನಿ, ಬದುಕಿಗಾಗಿ ಕೂಲಿ ಮಾಡುತ್ತಿದ್ದರು. ಪುತ್ರಿಯನ್ನು ಮನೆಯೊಳಗೆ ಬಿಟ್ಟು ಹೊರಗಿನಿಂದ ಬಾಗಿಲು ಹಾಕಿಕೊಂಡು ಕೂಲಿಗೆ ಹೋಗುತ್ತಿದ್ದರು. ಅದರಂತೆ ಘಟನಾ ದಿನ ಪತ್ನಿ ಬೆಳಿಗ್ಗೆ ಕೂಲಿಗೆ ಹೋದ ಬಳಿಕ, ತಿಮ್ಮರಾಜು ಮನೆಗೆ ಬಂದು ಪತ್ನಿಗೂ ಕರೆ ಮಾಡಿ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದರು.
ಸಂಜೆ 4ರ ಸುಮಾರಿಗೆ ಪತ್ನಿ ಕೂಲಿ ಮುಗಿಸಿ ಮನೆಗೆ ಬಂದಾಗ ಬಾಗಿಲುಗಳು ಮುಚ್ಚಿದ್ದವು. ತೆಗೆದು ಒಳಗೆ ಹೋದಾಗ ಯಾವಾಗಲೂ ನಡುಮನೆಯಲ್ಲಿ ಇರುತ್ತಿದ್ದ ಪುತ್ರಿ ಕಾಣಲಿಲ್ಲ. ಪಕ್ಕದ ಕೊಠಡಿಯ ಬಾಗಿಲು ತೆರೆದು ನೋಡಿದಾಗ, ಪುತ್ರಿ ಮೇಲೆ ಪತಿ ಅತ್ಯಾಚಾರ ಮಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿದರು.
ತನ್ನ ಕೃತ್ಯವನ್ನು ಪತ್ನಿ ಗಮನಿಸುತ್ತಿದ್ದಂತೆ ಎಚ್ಚೆತ್ತುಕೊಂಡ ತಿಮ್ಮರಾಜು, ‘ನನ್ನಿಂದ ತಪ್ಪಾಗಿದ್ದು, ಯಾರಿಗೂ ಹೇಳಬೇಡ’ ಎಂದು ಪತ್ನಿಯನ್ನು ಕೇಳಿಕೊಂಡಿದ್ದಾನೆ. ಗಂಡನ ಕೃತ್ಯದಿಂದ ಶಾಕ್ ಆದ ಪತ್ನಿ ವಿಷಯವನ್ನು ತನ್ನ ಸಹೋದರನಿಗೆ ತಿಳಿಸಿ, ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ತಿಮ್ಮರಾಜುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತೆ ಯುವತಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.