ಚನ್ನಪಟ್ಟಣ: ಇಂದು ಪರಿಸರದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಿಂದ ಪರಿಸರ ನಾಶವಾಗುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಆಣಿಗೆರೆ ಕೆ.ಮಲ್ಲಯ್ಯ ಎಚ್ಚರಿಸಿದರು.
ತಾಲ್ಲೂಕಿನ ಸಂಕಲಗೆರೆ ಗ್ರಾಮದ ಬಳಿ ಮಂಗಳವಾರ ಪರಿಸರ ಪ್ರೇಮಿ ಶಂಕರಪ್ಪ ಅವರು ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಪರಿಸರ ಉಳಿಸಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಸ್ವಯಂಪ್ರೇರಿತವಾಗಿ ಬರಬೇಕು. ಎಲ್ಲರೂ ಪರಿಸರ ಉಳಿಸುವ ಕಾಯಕಕ್ಕೆ ಕೈಜೋಡಿಸಬೇಕು. ಮರಗಿಡಗಳನ್ನು ಬೆಳೆಸುವುದರ ಜೊತೆಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು, ಗಾಳಿಯನ್ನು ಶುದ್ಧವಾಗಿಡಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಕಲಗೆರೆ ಮತ್ತೀಕೆರೆ ರಸ್ತೆಯಲ್ಲಿ ಗಿಡ ನೆಡುವ ಜೊತೆಗೆ ರೈತರಿಗೆ 80ಕ್ಕೂ ಹೆಚ್ಚು ತೆಂಗು ಮತ್ತು 100 ಅಡಿಕೆ ಸಸಿಗಳನ್ನು ವಿತರಿಸಲಾಯಿತು.
ಪರಿಸರ ಪ್ರೇಮಿ ಶಂಕರಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಕೃಷ್ಣಯ್ಯ, ಪದಾಧಿಕಾರಗಳಾದ ತಿಮ್ಮೇಗೌಡ, ಮರೀಗೌಡ, ಅಬ್ಬೂರು ವಿಜಯ್ ಕುಮಾರ್, ನೀಲಸಂದ್ರ ಸಿದ್ದರಾಮು, ಚಕ್ಕಲೂರು ಚೌಡಯ್ಯ, ವಸಂತಕುಮಾರ್, ಸರ್ವೋತ್ತಮ, ಸುರೇಶ್, ಯಲಿಯೂರು ಈರಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.