ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಶೆಟ್ಟಿಹಳ್ಳಿ ಕೆರೆ ಅಂಗಳ ಒತ್ತುವರಿಗೆ ಒಳಗಾಗಿ ಕಿರಿದಾಗುತ್ತಿದ್ದು, ದಿನಕಳೆದಂತೆ ಕೆರೆಯ ಒಡಲು ಮಾಯವಾಗುತ್ತಿದೆ.
ಸುಮಾರು 60 ಎಕರೆಯ ಪ್ರದೇಶ ವ್ಯಾಪಿಸಿದ್ದ ಕೆರೆಗೆ ಈಗ ಒತ್ತುವರಿ ಭೂತ ಕಾಡುತ್ತಿದೆ. ಕೆರೆಯ ನಾಲ್ಕು ದಿಕ್ಕುಗಳಲ್ಲಿಯೂ ಸುಮಾರು 20 ಎಕರೆಯಷ್ಟು ಕೆರೆ ಅಂಗಳ ಒತ್ತುವರಿಯಾಗಿದೆ. ಆದರೆ, ಈ ಬಗ್ಗೆ ಆಡಳಿತಯಂತ್ರ ದಿವ್ಯ ನಿರ್ಲಕ್ಷ್ಯ ವಹಿಸಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿವೆ.
ಕೆರೆಯ ಆಸುಪಾಸಿನಲ್ಲಿರುವ ಕೆಲವು ಸರ್ಕಾರಿ ಇಲಾಖೆಗಳು ಕೆರೆಯನ್ನು ಒತ್ತುವರಿ ಮಾಡಿಕೊಂಡು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದರ ಜೊತೆಗೆ ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿಯಲ್ಲಿ ಭಾಗಿಯಾಗಿದ್ದಾರೆ. ಕೆರೆಯ ಮೇಲ್ಭಾಗದ ಇಂದಿರಾ ಕಾಟೇಜ್ ಬಳಿ ಕೆರೆಯ ತೀರದಲ್ಲಿರುವ ಕೆಲವರು ಕೆರೆಯನ್ನು ಮುಚ್ಚಿ ಮನೆ, ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ.
ನಗರದ ಯಾವುದೇ ಹಳೆ ಕಟ್ಟಡ, ಮನೆ ಕೆಡವಿದರೆ, ರಸ್ತೆ ಅಗೆದರೆ ಅವುಗಳ ಕಲ್ಲು, ಮಣ್ಣು, ಸಿಮೆಂಟ್ ತ್ಯಾಜ್ಯವನ್ನು ಕೆರೆ ಬದಿಗೆ ಸುರಿಯುತ್ತಾರೆ. ಇಂದಿರಾ ಕಾಟೇಜ್ ಅಸುಪಾಸಿನಲ್ಲಿ ಕೆರೆಯ ಒತ್ತುವರಿ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಒಂದು ಕಾಲದಲ್ಲಿ ಕೆರೆಯ ನೀರು ಕೃಷಿಗೆ ಬಳಕೆಯಾಗುತ್ತಿತ್ತು. ಈಗ ಕೃಷಿ ಭೂಮಿಯನ್ನು ಬಡಾವಣೆಗಳಾಗಿ ಮಾರ್ಪಾಡು ಮಾಡಿದ್ದಾರೆ. ಇದರಿಂದ ಕೆರೆ ನೀರು ನಿಂತಲ್ಲೆ ನಿಂತು ಕಲುಷಿತಗೊಂಡಿದ್ದು, ಬಳಕೆಗೆ ಬಾರದಂತಾಗುತ್ತಿದೆ. ಹಾಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಒತ್ತುವರಿ ತೆರವುಗೊಳಿಸಿ ಕೆರೆ ರಕ್ಷಿಸಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
ಶೆಟ್ಟಿಹಳ್ಳಿ ಕೆರೆ ಒತ್ತುವರಿಯ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈಗಾಗಲೇ ಕೆಲವೆಡೆ ಆಗಿರುವ ಒತ್ತುವರಿ ತೆರವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತೆರವು ಕಾರ್ಯಾಚರಣೆ ನಡೆಸಿ ಕೆರೆ ಜಾಗವನ್ನು ಬಂದೋಬಸ್ತ್ ಮಾಡಲಾಗುವುದು.ಲಕ್ಷ್ಮಿದೇವಮ್ಮ ಗ್ರೇಡ್ 2 ತಹಶೀಲ್ದಾರ್ ಚನ್ನಪಟ್ಟಣ
ಮಂಗಳಮುಖಿಯರ ಯಲ್ಲಮ್ಮ ತಾಯಿ ದೇವಸ್ಥಾನ
ಶೆಟ್ಟಿಹಳ್ಳಿ ಕೆರೆಯ ಉತ್ತರಕ್ಕೆ ಪೊಲೀಸ್ ವಸತಿ ನಿಲಯದ ಭಾಗದಲ್ಲಿ ಮಂಗಳಮುಖಿಯರು ಕೆರೆಯ ಸ್ವಲ್ಪ ಭಾಗವನ್ನು ಮುಚ್ಚಿ ಅಲ್ಲಿ ಯಲ್ಲಮ್ಮ ತಾಯಿ ಅಂಗಾಳ ಪರಮೇಶ್ವರಿ ದೇವಾಲಯ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ.ಹಲವು ವರ್ಷಗಳಿಂದ ಮುಂಗಳಮುಖಿಯರು ಪೂಜೆ ಮಾಡಿಕೊಂಡು ಬಂದಿದ್ದು ಆಷಾಢ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆ ವೇಳೆ ವಿವಿಧ ಭಾಗಗಳಿಂದ ಮಂಗಳಮುಖಿಯರು ಆಗಮಿಸುತ್ತಾರೆ. ಆಷಾಢ ಮಾಸದ ಭೀಮನ ಅಮಾವಾಸ್ಯೆಯಂದು ರಾತ್ರಿ ಪೂರ್ತಿ ಪ್ರಾರ್ಥನೆ ಭಜನೆ ಪೂಜೆ ನಡೆಸುತ್ತಾರೆ. ಯಾವುದೇ ಅನುಮತಿ ಪಡೆಯದೆ ಕೆರೆ ಅಂಗಳವನ್ನು ಮುಚ್ಚಿ ದೇವಸ್ಥಾನ ನಿರ್ಮಿಸಿ ಪೂಜೆ ನಡೆಸುತ್ತಿದ್ದರೂ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಬಡಾವಣೆ ನಿವಾಸಿಗಳ ಆರೋಪವಾಗಿದೆ.
ಸರ್ವೆ ಕಾರ್ಯ ನನೆಗುದಿಗೆ
ಕೆರೆಯ ಒತ್ತುವರಿ ಬಗ್ಗೆ ಸಾರ್ವಜನಿಕರ ಆರೋಪಗಳು ಹೆಚ್ಚುತ್ತಿದ್ದ ಹಿನ್ನೆಲೆ ಜಿಲ್ಲಾಡಳಿತದ ಸೂಚನೆ ಮೇರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಎರಡು ವರ್ಷದ ಅವಧಿಯಲ್ಲಿ ಎರಡು ಬಾರಿ ಕೆರೆ ಸರ್ವೆಗೆ ತಾಲ್ಲೂಕು ಆಡಳಿತ ಮುಂದಾಗಿತ್ತು. ಸರ್ವೆ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಜೊತೆ ಪೊಲೀಸರ ರಕ್ಷಣೆಯೊಂದಿಗೆ ಕೆರೆಯ ಬಳಿಗೆ ಆಗಮಿಸಿದ್ದ ಅಧಿಕಾರಿಗಳ ತಂಡ ಅಲ್ಲಲ್ಲಿ ಸರ್ವೆ ಕಾರ್ಯ ನಡೆಸಿ ಸುಮ್ಮನಾಗಿತ್ತು. ಕೆರೆ ಒತ್ತುವರಿ ಹಾಗೂ ತೆರವು ಕಾರ್ಯಾಚರಣೆಯಾಗಲಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿರಲಿಲ್ಲ. ತಹಶೀಲ್ದಾರ್‌ಗಳ ವರ್ಗಾವಣೆ ಕೆಲವು ಪ್ರಭಾವಿಗಳ ಒತ್ತಡ ಮತ್ತಿತರ ಕಾರಣಗಳಿಂದ ಸರ್ವೆ ಕಾರ್ಯ ನನೆಗುದಿಗೆ ಬಿದ್ದಿದೆ ಎಂಬ ಆರೋಪಗಳು ಕೇಳಿ ಬಂದಿವೆ. =
ಕೆರೆ ಪುನಶ್ಚೇತನಗೊಳಿಸಿ
ಶೆಟ್ಟಿಹಳ್ಳಿ ಕೆರೆಯು ಐತಿಹಾಸಿಕ ಕೆರೆಯಾಗಿದ್ದು ಈ ಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿ ಪುನಶ್ಚೇತನಗೊಳಿಸಿ ಶುದ್ಧನೀರು ತುಂಬಿಸಿ ಜಲಕ್ರೀಡೆ ದೋಣಿ ವಿಹಾರಕ್ಕೆ ಯೋಜನೆ ರೂಪಿಸುವುದು ಉತ್ತಮ. ಇದರಿಂದ ನಗರ ವಾಸಿಗಳು ತಮ್ಮ ರಜಾ ದಿನಗಳಲ್ಲಿ ಈ ಕೆರೆಯನ್ನು ಮೋಜಿನ ತಾಣವಾಗಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಚಿಂತಿಸುವುದು ಅಗತ್ಯಸುರೇಶ್ ಕುಮಾರ್ ಉಪನ್ಯಾಸಕ ಚನ್ನಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.