ಚನ್ನಪಟ್ಟಣ: ನಗರದಲ್ಲಿರುವ ಮುಖ್ಯ ರಸ್ತೆಗಳು ಸೇರಿದಂತೆ ಕೆಲ ರಸ್ತೆಗಳ ಪಾದಚಾರಿ ಮಾರ್ಗಗಗಳು ಪಾದಚಾರಿಗಳಿಗಿಂತ ಹೆಚ್ಚಾಗಿ ಬೀದಿ ವ್ಯಾಪಾರಕ್ಕೆ ಬಳಕೆಯಾಗುತ್ತಿವೆ. ರಸ್ತೆ ಬದಿ ನಡೆದು ಹೋಗಲು ಸ್ಥಳವಿಲ್ಲದಿದ್ದರಿಂದ ಜನರು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಜನ ಬಳಕೆಯ ಫುಟ್‌ಪಾತ್ ಅನ್ನು ಬೀದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ.
ನಗರಸಭೆ ವತಿಯಿಂದ ನಗರದ ವ್ಯಾಪ್ತಿಯಲ್ಲಿ ಸುಮಾರು ₹1 ಕೋಟಿಗೂ ಹೆಚ್ಚು ಅನುದಾನದಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ. ಆದರೆ, ಬಹುತೇಕ ಮಾರ್ಗವು ಬೀದಿ ವ್ಯಾಪಾರಕ್ಕೆ ಸೀಮಿತವಾಗಿದೆ. ನಗರದ ಎಂ.ಜಿ.ರಸ್ತೆ, ಪೇಟೆ ಬೀದಿ ರಸ್ತೆ, ಅಂಚೆ ಕಚೇರಿ ರಸ್ತೆ, ಸಾತನೂರು ಸರ್ಕಲ್ ರಸ್ತೆ, ಹಳೆ ನ್ಯಾಯಾಲಯ ರಸ್ತೆ ಸೇರಿದಂತೆ ಪಟ್ಟಣದ ವಿವಿಧ ರಸ್ತೆಗಳನ್ನು ಗಮನಿಸಿದ ಗೊತ್ತಾಗುತ್ತದೆ.
ಎಂ.ಜಿ. ರಸ್ತೆಯಲ್ಲಂತೂ ರಸ್ತೆಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ತಮ್ಮ ವ್ಯಾಪಾರಕ್ಕಾಗಿ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿರುವ ಫುಟ್‌ಪಾತ್ ಇರುವುದೇ ರಸ್ತೆ ಬದಿ ವ್ಯಾಪಾರಕ್ಕಾಗಿ ಎಂಬಂತಾಗಿದೆ. ಇಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಸಾರ್ವಜನಿಕ ಆಸ್ಪತ್ರೆ, ಕೆಲವು ಸರ್ಕಾರಿ ಕಚೇರಿಗಳು ಇದ್ದು, ಇಲ್ಲಿ ವಾಹನ ಹಾಗೂ ಜನರ ಓಡಾಟ ಹೆಚ್ಚಾಗಿದೆ.
ಹೆಚ್ಚು ವಾಹನಗಳ ಸಂಚಾರದಿಂದಾಗಿ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡ ನಗರಸಭೆ ಎಂ.ಜಿ. ರಸ್ತೆಯುದ್ದಕ್ಕೂ 2014ರಲ್ಲಿ ಪಾದಚಾರಿ ಮಾರ್ಗ ನಿರ್ಮಿಸಿದೆ. ಎರಡೂ ಬದಿಯಲ್ಲಿ ಕಬ್ಬಿಣದ ಸಲಾಕೆಗಳನ್ನು ಹಾಕಿ, ನೆಲಕ್ಕೆ ಟೈಲ್ಸ್ ಹಾಕಿ ಸುಸಜ್ಜಿತ ಫುಟ್‌ಪಾತ್ ನಿರ್ಮಿಸಲಾಗಿದೆ. ಜನಬಳಕೆಗೆ ಮೀಸಲಾಗಬೇಕಿದ್ದ ಈ ಜಾಗ ವ್ಯಾಪಾರಸ್ಥರ ಕೇಂದ್ರವಾಗಿ ಮಾರ್ಪಟ್ಟಿದೆ.
ನಗರಸಭೆ ಅಧಿಕಾರಿಗಳು ಆಗಾಗ ರಸ್ತೆ ಬದಿ ಅಂಗಡಿಗಳನ್ನು ತೆರವು ಮಾಡಿಸುತ್ತಾ, ಅಲ್ಲಿ ವ್ಯಾಪಾರ ಮಾಡುವವರಿಗೆ ದಂಡ ಹಾಕುತ್ತಿದ್ದಾರೆ. ವ್ಯಾಪಾರಕ್ಕೆ ಬಳಸುವ ತಳ್ಳುಗಾಡಿಗಳನ್ನು ತುಂಬಿಕೊಂಡು ಹೋಗುವ ಕಾರ್ಯ ಮಾಡುತ್ತಿದ್ದರೂ, ವ್ಯಾಪಾರಸ್ಥರು ಮಾತ್ರ ತಮ್ಮ ರಸ್ತೆ ಬದಿಯೇ ವ್ಯಾಪಾರ ಮುಂದುವರೆಸಿದ್ದಾರೆ.
ಮುಖ್ಯರಸ್ತೆಯೇ ಗತಿ: ‘ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು, ರೈಲು ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು, ಪೇಟೆಗೆ ತೆರಳುವ ಮಂದಿ ಸೇರಿದಂತೆ ಸಾವಿರಾರು ಮಂದಿ ನಡೆದುಕೊಂಡೇ ಹೋಗುತ್ತಾರೆ. ಆದರೆ ಪಾದಚಾರಿಗಳಿಗೆಂದು ನಿರ್ಮಾಣವಾಗಿರುವ ಮಾರ್ಗವನ್ನು ವ್ಯಾಪಾರಸ್ಥರು ಆಕ್ರಮಿಸಿಕೊಂಡಿರುವ ಕಾರಣ, ಅನಿವಾರ್ಯವಾಗಿ ಮುಖ್ಯರಸ್ತೆಯಲ್ಲಿ ನಡೆಯುವಂತಾಗಿದೆ. ನಗರಸಭೆಯವರು ಫುಟ್‌ಪಾತ್ ಅನ್ನು ವ್ಯಾಪಾರಸ್ಥರಿಗೆ ಬಿಟ್ಟುಕೊಟ್ಟಂತಿದೆ’ ಎಂದು ಸ್ಥಳೀಯರಾದ ನಾಗರಾಜು ಮತ್ತು ಜಯಣ್ಣ ಅಸಮಾಧಾನ ವ್ಯಕ್ತಪಡಿಸಿದರು.
‘ಸಾರ್ವಜನಿಕರು ಮುಖ್ಯರಸ್ತೆಯಲ್ಲಿ ನಡೆದಾಡುವುದು ಹಾಗೂ ಕೆಲವರು ತಮ್ಮ ವಾಹನವನ್ನು ರಸ್ತೆಬದಿಯಲ್ಲಿಯೇ ನಿಲ್ಲಿಸುವ ಕಾರಣ ರಸ್ತೆ ಕಿರಿದಾಗಿದೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ಬಹಳ ತೊಂದರೆಯಾಗುತ್ತಿದೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ’ ಎಂದು ಸಾರ್ವಜನಿಕರಾದ ನಾಗೇಶ್, ಸತೀಶ್, ಬಾಬು ಹೇಳಿದರು.
ಇಲ್ಲೇ ಒಳ್ಳೆ ವ್ಯಾಪಾರ: ‘ರಸ್ತೆಬದಿಯಲ್ಲಿ ವ್ಯಾಪಾರ ಮಾಡಿದರೆ ಜನರಿಗೆ ಬೇಕಾದ ವಸ್ತುಗಳು ಸುಲಭವಾಗಿ ಸಿಗುತ್ತವೆ. ಜೊತೆಗೆ ನಮಗೆ ಒಳ್ಳೆಯ ವ್ಯಾಪಾರವಾಗುತ್ತದೆ. ರಸ್ತೆ ಬದಿಯಲ್ಲಿ ಸಂಜೆಯವರೆಗೆ ವ್ಯಾಪಾರ ಮಾಡಿದರೆ ದಿನವೊಂದಕ್ಕೆ ₹400ರಿಂದ ₹600ರವರೆಗೆ ಸಂಪಾದನೆಯಾಗುತ್ತದೆ . ಬೇರೆಡೆಗೆ ಹೋದರೆ ವ್ಯಾಪಾರವಾಗುವುದು ಕಷ್ಟ’ ಎಂದು ಹೂವಿನ ವ್ಯಾಪಾರಿ ನವೀನ, ವೀಳ್ಯದೆಲೆ ವ್ಯಾಪಾರಿ ತಿಮ್ಮಮ್ಮ, ತರಕಾರಿ ವ್ಯಾಪಾರಿ ಕೃಷ್ಣ ಪರಿಸ್ಥಿತಿ ಬಿಚ್ಚಿಟ್ಟರು.
ವ್ಯಾಪಾರಸ್ಥರು ಕರಬಲ ಮೈದಾನದಲ್ಲಿ ನಿರ್ಮಿಸಿರುವ ಮಳಿಗೆಗಳಿಗೆ ಹೋಗುವುದಿಲ್ಲ. ಪಾದಚಾರಿಗಳ ಗೋಳು ತಪ್ಪುವುದಿಲ್ಲ. ನಗರಸಭೆ ಅಧಿಕಾರಿಗಳು ಬಿಡುವುದಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾತ್ರ ಸತ್ಯ. ನಗರಸಭೆ ಅಧಿಕಾರಿಗಳು ಪಾದಚಾರಿ ರಸ್ತೆಗಳಲ್ಲಿಯ ವ್ಯಾಪಾರಕ್ಕೆ ಕಡಿವಾಣ ಹಾಕಿ, ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಶೀಘ್ರ ಕ್ರಮ: ‘ಪಾದಚಾರಿ ರಸ್ತೆ ತೆರವು ಮಾಡಲು ಆಗಾಗ ಕ್ರಮ ತೆಗೆದುಕೊಂಡರೂ ಪ್ರಯೋಜನವಾಗುತ್ತಿಲ್ಲ. ರಸ್ತೆಬದಿ ವ್ಯಾಪಾರಸ್ಥರನ್ನು ಕರಬಲ ಮೈದಾನಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಶೀಘ್ರವೇ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೆಸರು ಹೇಳಲಿಚ್ಛಿಸದ ನಗರಸಭೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಸ್ಥಳಾಂತರಗೊಳ್ಳದ ವ್ಯಾಪಾರಿಗಳು ನಗರದ ರಸ್ತೆಬದಿಯಲ್ಲಿ ನಡೆಯುತ್ತಿರುವ ವ್ಯಾಪಾರವನ್ನು ನಿಲ್ಲಿಸಿ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ನಗರಸಭೆ ಕನಸು ಇಂದಿಗೂ ಸಾಕಾರಗೊಂಡಿಲ್ಲ. ನಗರದ ಕರಬಲ ಮೈದಾನದಲ್ಲಿ ರಸ್ತೆಬದಿ ವ್ಯಾಪಾರಿಗಳಿಗೆಂದು ನಗರಸಭೆ ವತಿಯಿಂದ 2006 ಹಾಗೂ 2012ರಲ್ಲಿ ಒಟ್ಟು 150ಕ್ಕೂ ಹೆಚ್ಚು ಅಂಗಡಿ ಮಳಿಗೆಗಳು ನಿರ್ಮಾಣವಾಗಿವೆ. ಈ ಅಂಗಡಿ ಮಳಿಗೆಗಳಿಗೆ ರಸ್ತೆಬದಿ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡಬೇಕು ಎನ್ನುವ ನಗರಸಭೆಯ ಆಸೆ ಇನ್ನೂ ಕೈಗೂಡಿಲ್ಲ. ಕೆಲವು ಮಳಿಗೆಗಳನ್ನು ಟೆಂಡರ್‌ನಲ್ಲಿ ವ್ಯಾಪಾರಸ್ಥರು ಪಡೆದಿದ್ದರೂ ಅಲ್ಲಿಗೆ ಸ್ಥಳಾಂತರವಾಗಿಲ್ಲ. ಆ ಜಾಗ ವ್ಯಾಪಾರಕ್ಕೆ ಸೂಕ್ತವಾಗಿಲ್ಲ. ಅಲ್ಲಿ ಸೌಲಭ್ಯಗಳು ಇಲ್ಲ ಎಂದು ಆರೋಪ ಮಾಡುತ್ತಿರುವ ವ್ಯಾಪಾರಸ್ಥರು ಆ ಮಳಿಗೆಗಳಿಗೆ ಬೀಗ ಜಡಿದು ರಸ್ತೆ ಬದಿಯಲ್ಲಿಯೇ ಎಂದಿನಂತೆ ತಮ್ಮ ವ್ಯಾಪಾರ ಮುಂದುವರೆಸುತ್ತಿದ್ದಾರೆ.
‘ಪಾದಚಾರಿಗಳಿಗೆ ಜಾಗ ಬೇಕು’ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ಜಾಗ ಬೇಕಾಗಿದೆ. ನಗರಸಭೆ ಅಧಿಕಾರಿಗಳು ರಸ್ತೆ ಬದಿ ವ್ಯಾಪಾರಿಗಳನ್ನು ತೆರವು ಮಾಡಿಸಿ ಅವರಿಗಾಗಿ ನಿರ್ಮಾಣವಾಗಿರುವ ಕರಬಲ ಮೈದಾನದ ಜಾಗಕ್ಕೆ ಸ್ಥಳಾಂತರ ಮಾಡಲಿ. ಆಗ ಪಾದಚಾರಿ ಮಾರ್ಗವು ಜನರಿಗೆ ಮುಕ್ತವಾಗುತ್ತದೆ. ನಗರಸಭೆ ಅಧಿಕಾರಿಗಳು ಈ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕು. – ಮೋಹನ್ ದಾಸ್ ಸ್ಥಳೀಯರು ಚನ್ನಪಟ್ಟಣ ‘ವ್ಯಾಪಾರಿಗಳನ್ನು ಸ್ಥಳಾಂತರಿಸಲಿ’ ನಗರದ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿರುವ ರಸ್ತೆ ಬದಿ ವ್ಯಾಪಾರಿಗಳನ್ನು ಸ್ಥಳಾಂತರ ಮಾಡುವುದು ನಗರಸಭೆ ಕರ್ತವ್ಯ. ಎಂ.ಜಿ. ರಸ್ತೆ ಸೇರಿದಂತೆ ನಗರದ ಕೆಲ ರಸ್ತೆಗಳಲ್ಲಿ ನಡೆದು ಹೋಗುವುದು ಬಹಳ ಕಷ್ಟಕರವಾಗುತ್ತಿದೆ. ಇಲ್ಲಿ ನೋಡಿದರೆ ಇದು ರಸ್ತೆಯೋ ಮಾರುಕಟ್ಟೆಯೋ ಎಂಬ ಅನುಮಾನ ಬರುತ್ತದೆ. ರಸ್ತೆಯನ್ನು ವಿಶಾಲ ಮಾಡಿ ಪಾದಚಾರಿ ಮಾರ್ಗ ನಿರ್ಮಿಸಿದ್ದರೂ ಉಪಯೋಗಕ್ಕೆ ಬಾರದೆ ಇದ್ದರೆ ಯಾಕಾಗಿ ಮಾಡಬೇಕಿತ್ತು ಎನ್ನಿಸುತ್ತದೆ. – ಹರ್ಷಿತಾ ವಿದ್ಯಾರ್ಥಿನಿ ಚನ್ನಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.