ADVERTISEMENT

ಕೂಸಿನ ಮನೆ 'ಶಿಶು ಪಾಲನಾ ಕೇಂದ್ರ' ಉದ್ಘಾಟನೆ: ದುಡಿಯುವ ಮಹಿಳೆಯರಿಗೆ ಆಸರೆ

ತೇರಿನದೊಡ್ಡಿಯಲ್ಲಿ ಕೂಸಿನ ಮನೆ ಶಿಶು ಪಾಲನಾ ಕೇಂದ್ರ

ಬರಡನಹಳ್ಳಿ ಕೃಷ್ಣಮೂರ್ತಿ
Published 22 ಜನವರಿ 2024, 5:17 IST
Last Updated 22 ಜನವರಿ 2024, 5:17 IST
ಕನಕಪುರ ತೇರಿನದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಕೂಸಿನ ಮನೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಕನಕಪುರ ತೇರಿನದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಕೂಸಿನ ಮನೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು   

ಕನಕಪುರ: ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕ ಮಕ್ಕಳ ಪೋಷಣೆ ಮತ್ತು ಪಾಲನೆಗಾಗಿ ಸರ್ಕಾರ ನೂತನವಾಗಿ ಕೂಸಿನ ಮನೆ 'ಶಿಶು ಪಾಲನಾ ಕೇಂದ್ರ' ಯೋಜನೆ ಜಾರಿಗೆ ತಂದಿದ್ದು ತಾಲ್ಲೂಕಿನಲ್ಲಿ ಮೊದಲ ಬಾರಿಗೆ ತೇರಿನದೊಡ್ಡಿ ಗ್ರಾಮದಲ್ಲಿ ಪ್ರಾರಂಭಗೊಂಡಿದೆ.

ಗ್ರಾಮಾಂತರ ಭಾಗದಲ್ಲಿ ಮಹಿಳಾ ಕೂಲಿ ಕಾರ್ಮಿಕರಿಗೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ. ಮಕ್ಕಳ ಲಾಲನೆ ಪಾಲನೆಗೆ ತಾಯಿ ಸಾಕಷ್ಟು ಸಮಯ ನೀಡಬೇಕಾಗುತ್ತದೆ. ಆದರೆ, ಕೆಲಸ ಮಾಡುವ ಮಹಿಳೆ ಮಕ್ಕಳಿಗೆ ಸಮಯ ಕೊಡುವುದಾಗಿ ನೋಡಿಕೊಳ್ಳುವುದಕ್ಕಾಗಲಿ ಆಗುವುದಿಲ್ಲ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಕ್ಕಳ ಪಾಲನೆಗಾಗಿ ಸರ್ಕಾರ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿ, ಆರೋಗ್ಯವಂತರಾಗಿ ನೋಡಿಕೊಳ್ಳಲು ತರಬೇತಿ ಪಡೆದ ಸಿಬ್ಬಂದಿಗಳನ್ನು ನಿಯೋಜಿಸಿ ಕೂಸಿನ ಮನೆ ಯೋಜನೆ ಜಾರಿಗೊಳಿಸಿದೆ.

ADVERTISEMENT
ಕೂಸಿನ ಮನೆಯಲ್ಲಿ ಆರೈಕೆ ಮಾಡುವ ಮಹಿಳೆಯರು
ಶಿಶು ಪಾಲನಾ ಕೇಂದ್ರವನ್ನು ಉದ್ಘಾಟಿಸಿದ ವಿಜಯಲಕ್ಷ್ಮಿ ಮೋಹನ್‌ಬಾಬು

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಾಗಿ ದುಡಿಯುವ ಮಹಿಳೆಯರು ತಮ್ಮ ಆರು ತಿಂಗಳಿನಿಂದ ಮೂರು ವರ್ಷದವರೆಗಿನ ಮಕ್ಕಳನ್ನು ಕೂಸಿನ ಮನೆ 'ಶಿಶು ಪಾಲನಾ ಕೇಂದ್ರ'ದಲ್ಲಿ ಬಿಟ್ಟು ನೆಮ್ಮದಿಯಾಗಿ ಕೆಲಸ ಮಾಡಬಹುದಾಗಿದೆ.

ತಾಲ್ಲೂಕಿನ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ತೇರಿನದೊಡ್ಡಿ ಗ್ರಾಮದಲ್ಲಿ ಶಿಶು ಪಾಲನಾ ಕೇಂದ್ರ ಪ್ರಾರಂಭಿಸಲು ಸರ್ಕಾರಿ ಕಿರಿಯ ಪ್ರಾಥಮಕ ಶಾಲೆ ಆಯ್ಕೆ ಮಾಡಿಕೊಂಡಿದ್ದು ಅದರಲ್ಲಿ ಒಂದು ಕೊಠಡಿಯನ್ನು ಕೂಸಿನ ಮನೆಯನ್ನಾಗಿ ನಿರ್ಮಾಣ ಮಾಡಲಾಗಿದೆ.

ಶಿಶು ಪಾಲನಾ ಕೇಂದ್ರದಲ್ಲಿ ಮಕ್ಕಲ ಪಾಲನೆಗಾಗಿ ಇಟ್ಟಿರುವ ಆಹಾರ ಸಾಮಗ್ರಿ

ಪಾಲನಾ ಕೇಂದ್ರದಲ್ಲಿ ಮಕ್ಕಳಿಗೆ ಪೂರಕವಾದ ಉತ್ತಮ ವಾತಾವರಣ ಕಲ್ಪಿಸಿ, ಆಟದ ಸಾಮಗ್ರಿ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುವುದು. ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಮಕ್ಕಳ ಪಾಲನೆ ಬಗ್ಗೆ ತರಬೇತಿ ಪಡೆದಿರುವ ಇಬ್ಬರು ಮಹಿಳಾ ಆರೈಕೆದಾರರನ್ನು ನಿಯೋಜನೆ ಮಾಡಲಾಗುತ್ತದೆ.

ಮಕ್ಕಳ ಪಾಲನೆಗಾಗಿ ಇಟ್ಟಿರುವ ತೊಟ್ಟಿಲು

ಕೇಂದ್ರದ ನಿರ್ವಹಣೆಗೆ ಸರ್ಕಾರದಿಂದ ₹1ಲಕ್ಷದಷ್ಟು ಅನುದಾನ ಬರಲಿದೆ. ಮಕ್ಕಳ ಆಟಿಕೆ ವಸ್ತುಗಳು ತೊಟ್ಟಿಲು ಮತ್ತು ಪೂರಕವಾದ ವಾತಾವರಣೆ ನಿರ್ಮಾಣಕ್ಕೆ ಈ ಹಣ ಬಳಸಿಕೊಳ್ಳಬಹುದಾಗಿದೆ. ಉಳಿದಂತೆ ಕೊಠಡಿ ನಿರ್ವಹಣೆ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಪಂಚಾಯಿತಿ ವೈಯಕ್ತಿಕ ನಿಧಿಯಿಂದ ನಿರ್ವಹಣೆ ಮಾಡಬೇಕಿದೆ.

ಮಕ್ಕಳ ಕಲಿಕೆಗೆ ಪೂರಕವಾದ ಚಿತ್ರಗಳು

ಪ್ರಥಮ ಬಾರಿಗೆ ತಾಲ್ಲೂಕಿನ ತೇರಿನದೊಡ್ಡಿಯಲ್ಲಿ ನಿರ್ಮಾಣ ಮಾಡಿರುವ ಕೂಸಿನ ಮನೆ 'ಶಿಶು ಪಾಲಾನಾ ಕೇಂದ್ರ'ವನ್ನು ಶನಿವಾರ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್‌ ಬಾಬು, ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್‌‌ ಉದ್ಘಾಟಿಸಿದರು.

ಪಂಚಾಯಿತಿ ಸದಸ್ಯೆ ಅರ್ಪಿತ ಶಿವಕುಮಾರ್, ಪಿಡಿಒ ಶ್ರೀನಿವಾಸ್, ಕಾರ್ಯದರ್ಶಿ ಮಹೇಶ್ವರ ಮಾಸ್ಟರ್ ಟ್ರೈನರ್‌ಗಳಾದ ಸರಸ್ವತಿ ಮತ್ತು ಜಯಲಕ್ಷ್ಮಮ್ಮ.ಪಿ, ಸಂಪನ್ಮೂಲ ವ್ಯಕ್ತಿ ರಾಜಶೇಖರ್, ಐಇಸಿ ಸಂಯೋಜಕ ಪ್ರಸನ್ನ ಕುಮಾರ್ ಹಾಗೂ ಕೂಸಿನ ಮನೆ ಆರೈಕೆದಾರರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ಮಕ್ಕಳ ನಿರ್ವಹಣೆಗಾಗಿ ಇಟ್ಟಿರುವ ಬಟ್ಟೆಗಳು
ಮಹಿಳಾ ಕೂಲಿ ಕಾರ್ಮಿಕರಿಗೆ ತಮ್ಮ ಮಕ್ಕಳ ಪಾಲನೆ ಮಾಡುವುದು ಕಷ್ಟವಾಗುತ್ತಿತ್ತು. ಈಗ ಕೂಸಿನ ಮನೆಯಲ್ಲಿ ಮಗು ಬಿಟ್ಟು ನೆಮ್ಮದಿಯಾಗಿ ಕೆಲಸ ಮಾಡಬಹುದು
-. ವಿಜಯಲಕ್ಷ್ಮಿ ಪ್ರಕಾಶ್‌ ಗ್ರಾಮ ಪಂಚಾಯಿತಿ ಅಧ್ಯಕ್ಷೆ.
ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮಹಿಳೆಯರ ಮಕ್ಕಳಿಗಾಗಿ ಈ ಯೋಜನೆ ಜಾರಿಗೆ ಬಂದಿದೆ. ಗ್ರಾಮ ಪಂಚಾಯಿತಿಗೆ ಒಂದರಂತೆ ಕೂಸಿನ ಮನೆ ಮಾಡಬೇಕಿದ್ದು ಪ್ರಾಯೋಗಿಕವಾಗಿ ತೇರಿನದೊಡ್ಡಿಯಲ್ಲಿ ನಿರ್ಮಾಣ ಮಾಡಲಾಗಿದೆ
-ಮೋಹನ್‌ ಬಾಬು ಎಡಿ ತಾಲ್ಲೂಕು ಪಂಚಾಯಿತಿ.
ನರೇಗಾ ಮಹಿಳಾ ಕೂಲಿ ಕಾರ್ಮಿಕರು 6 ತಿಂಗಳಿನಿಂದ 3 ವರ್ಷದ ಮಗು ಬಿಡಬಹುದು. ಅವರು ಕೆಲಸ ಮುಗಿಸಿ ಬರುವವರೆಗೂ ನೋಡಿಕೊಳ್ಳುತ್ತೇವೆ
-ಸರಸ್ವತಿ ಕೇಂದ್ರದ ಆರೈಕೆದಾರರು.
ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ವತಿಯಿಂದ ತಾಲ್ಲೂಕಿನ 40 ಗ್ರಾಮ ಪಂಚಾಯಿತಿ 80 ಮಹಿಳೆಯರಿಗೆ ತರಬೇತಿ ನೀಡಲಾಗಿದೆ
-ರಾಜಶೇಖರ್‌ ತರಬೇತಿ ತಾಲ್ಲೂಕು ಸಂಯೋಜಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.