ರಾಮನಗರ: ಕಾಲಿನಲ್ಲಿದ್ದ ಗಂಟು ನೋವಿನ ಚಿಕಿತ್ಸೆಗಾಗಿ ಕರೆ ತಂದಿದ್ದ 6 ತಿಂಗಳ ಹೆಣ್ಣು ಮಗುವಿಗೆ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್ ಚುಚ್ಚುಮದ್ದು ನೀಡಿ ಸಾವಿಗೆ ಕಾರಣವಾದ, ನಗರದ ಬಾಲಗೇರಿಯ ಅಲ್ ಖೈರ್ ಫೌಂಡೇಷನ್ ಕ್ಲಿನಿಕ್‌ನ ನಕಲಿ ವೈದ್ಯನನ್ನು ರಾಮನಗರ ಪುರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನಾಲಬಂದವಾಡಿಯ ಮೋತಿ ನಗರದ ಮೊಹಮ್ಮದ್ ಸೈಫುಲ್ಲಾ ಬಂಧಿತ. ನಗರದ ಚಾಮುಂಡೇಶ್ವರಿ ಬಡಾವಣೆಯ ಆರ್. ಶಿವರಾಜ ಮತ್ತು ರೋಜಾ ದಂಪತಿಯ ಪುತ್ರಿ ಶರಣ್ಯ, ನಕಲಿ ವೈದ್ಯ ನೀಡಿದ ಚುಚ್ಚುಮದ್ದಿಗೆ ಜೀವ ಕಳೆದುಕೊಂಡ ಮಗು.
ಐದು ತಿಂಗಳು ಪೂರೈಸಿದ್ದ ಮಗುವಿನ ಬಲಗಾಲಿನ ತೊಡೆಯಲ್ಲಿ ಗಂಟು ಕಾಣಿಸಿಕೊಂಡು ಕೀವು ಕಟ್ಟಿಕೊಂಡಿತ್ತು. ದಂಪತಿ ಮಗುವನ್ನು ಸೈಫುಲ್ಲಾ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಅದಾದ ತಿಂಗಳ ಬಳಿಕ, ಎಡ ಭಾಗದಲ್ಲೂ ಗಂಟಾಗಿತ್ತು. ಹಾಗಾಗಿ, ಜೂನ್ 10ರಂದು ದಂಪತಿ ಮತ್ತೆ ಮಗುವನ್ನು ಅದೇ ಕ್ಲಿನಿಕ್‌ಗೆ ಕರೆದೊಯ್ದಿದ್ದರು ಎಂದು ಪೊಲೀಸರು ಹೇಳಿದರು.
ಗಂಟು ಪರಿಶೀಲಿಸಿದ್ದ ಸೈಫುಲ್ಲಾ ಎಡಗಾಲಿಗೆ ಚುಚ್ಚುಮದ್ದು ನೀಡಿ, ಶೀಘ್ರ ಗುಣಮುಖವಾಗಲಿದೆ ಎಂದು ಹೇಳಿ ಕಳಿಸಿದ್ದ. ಮನೆಗೆ ಬಂದ ಒಂದು ತಾಸಿನಲ್ಲೇ ಮಗು ಜೋರಾಗಿ ಅಳುತ್ತಾ ಒದ್ದಾಡತೊಡಗಿತ್ತು. ಆತಂಕಗೊಂಡ ಶಿವರಾಜು ಅವರು ಸೈಫುಲ್ಲಾಗೆ ಕರೆ ಮಾಡಿ ವಿಷಯ ತಿಳಿಸಿದಾಗ, ‘ಇಂಜೆಕ್ಷನ್ ಕಾರಣಕ್ಕೆ ಹೀಗಾಗುತ್ತಿದೆ. ಮಗು ಮಲಗಿ ಎದ್ದ ಬಳಿಕ ಸರಿ ಹೋಗಲಿದೆ’ ಎಂದು ಹೇಳಿದ್ದ ಎಂದು ಪೊಲೀಸರು ತಿಳಿಸಿದರು.
ಉಸಿರಾಟದಲ್ಲಿ ತೊಂದರೆ: ಕೆಲ ಹೊತ್ತಿನ ನಂತರ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆಗಲೂ ಶಿವರಾಜು ಅವರು ಸೈಫುಲ್ಲಾನಿಗೆ ಕರೆ ಮಾಡಿದ್ದಾಗ, ‘ಔಷಧದ ಅಂಗಡಿಯಲ್ಲಿ ನಾಸಲ್ ಡ್ರಾಪ್ಸ್ ಖರೀದಿಸಿ ಮೂಗಿಗೆ ಒಂದೆರಡು ಹನಿ ಹಾಕಿ’ ಎಂದು ಸಲಹೆ ನೀಡಿದ್ದ. ಅದರಂತೆ, ರಾತ್ರಿ ಡ್ರಾಪ್ಸ್ ತಂದು ಹಾಕಿದಾಗ ಮಗುವಿಗೆ ಉಸಿರಾಟದ ತೊಂದರೆ ಸ್ವಲ್ಪ ಮಟ್ಟಿಗೆ ನಿಂತಿತ್ತು.
ಆದರೂ, ಆರೋಗ್ಯದಲ್ಲಾದ ಏರುಪೇರಿನಿಂದಾಗಿ ಬೆಳಿಗ್ಗಿನವರೆಗೆ ಮಗು ಚಡಪಡಿಸುತ್ತಲೇ ಇತ್ತು. ಬೆಳಿಗ್ಗೆ ಶಿವರಾಜು ಮತ್ತೆ ಸೈಫುಲ್ಲಾಗೆ ಕರೆ ಮಾಡಿ ವಿಷಯ ತಿಳಿಸಿದಾಗ, ‘ಮಕ್ಕಳ ವೈದ್ಯರಿಗೆ ತೋರಿಸಿ’ ಎಂದು ಸಲಹೆ ನೀಡಿದ್ದ. ಅದರಂತೆ, ದಂಪತಿ ಬೆಳಿಗ್ಗೆ 7 ಗಂಟೆಗೆ ನಗರದ ಶ್ರೀದೇವಿ ಮಿಷನ್ ಆಸ್ಪತ್ರೆಗೆ ಮಗು ಕರೆದೊಯ್ದಿದ್ದರು. ತಪಾಸಣೆ ನಡೆಸಿದ್ದ ವೈದ್ಯರು ಮಗು ಮೃತಪಟ್ಟಿರುವುದಾಗಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದರು.
ಉಡಾಫೆಯ ಪ್ರತಿಕ್ರಿಯೆ: ವೈದ್ಯರ ಮಾತಿನಿಂದ ಆತಂಕಗೊಂಡ ದಂಪತಿ ಮಗುವನ್ನು ಮತ್ತೆ ಸೈಫುಲ್ಲಾ ಬಳಿಗೆ ಕರೆದೊಯ್ದು, ‘ನೀವು ಇಂಜೆಕ್ಷನ್ ಕೊಟ್ಟ ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ’ ಎಂದು ದೂರಿದ್ದರು. ಅದಕ್ಕೆ ಸೈಫುಲ್ಲಾ, ‘ಈಗ ನಾನೇನು ಮಾಡಲು ಸಾಧ್ಯವಿಲ್ಲ. ಬೇಕಿದ್ದರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ’ ಎಂದು ಉಡಾಫೆಯಿಂದ ಪ್ರತಿಕ್ರಿಯಿಸಿದ್ದ.
ದಂಪತಿ ಜಿಲ್ಲಾಸ್ಪತ್ರೆಗೆ ಮಗು ಕರೆದೊಯ್ದು ತೋರಿಸಿದಾಗ, ಅಲ್ಲಿನ ವೈದ್ಯರು ಸಹ ಮಗು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು. ಮಗು ಸಾವಿಗೆ ಸೈಫುಲ್ಲಾ ನೀಡಿದ ಇಂಜೆಕ್ಷನ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ದಂಪತಿ ವೈದ್ಯನ ಹಿನ್ನೆಲೆ ವಿಚಾರಿಸಿದಾಗ ಆತ, ನಕಲಿ ವೈದ್ಯ ಎಂಬುದು ಗೊತ್ತಾಯಿತು.
ಮಗು ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸೈಫುಲ್ಲಾನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಸೈಫುಲ್ಲಾ ತಾನು ವೈದ್ಯ ಎಂದು ಹೇಳಿಕೊಂಡು ನಕಲಿ ಕ್ಲಿನಿಕ್ ನಡೆಸುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.
ಮಗು ಸಾವು ಮತ್ತು ನಕಲಿ ವೈದ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಹ ಪ್ರತ್ಯೇಕವಾಗಿ ತನಿಖೆ ನಡೆಸಲಿದೆ. ತನಿಖಾ ವರದಿ ಆಧರಿಸಿ ಇಲಾಖೆ ವತಿಯಿಂದಲೂ ನಕಲಿ ವೈದ್ಯನ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತೇವೆಡಾ. ನಿರಂಜನ್ ಜಿಲ್ಲಾ ಆರೋಗ್ಯಾಧಿಕಾರಿ ರಾಮನಗರ
‘ನೋವು ನಿವಾರಣೆಗೆ ಹೆಚ್ಚಿನ ಸ್ಟಿರಾಯ್ಡ್ ಕೊಟ್ಟಿದ್ದ’
ಮಗು ಕಾಲಿನಲ್ಲಿದ್ದ ಗಂಟು ಕಿವು ಕಟ್ಟಿ ನೋವಾಗುತ್ತಿದ್ದರಿಂದ ಸೈಫುಲ್ಲಾ ನೋವು ನಿವಾರಣೆಗೆ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್ ಚುಚ್ಚುಮದ್ದು ನೀಡಿದ್ದ. ಅದರ ಅಡ್ಡ ಪರಿಣಾಮದಿಂದಾಗಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಬೆಳಗ್ಗಿನವರೆಗೆ ಹಿಂಸೆ ಅನುಭವಿಸಿ ಕೊನೆಯುಸಿರೆಳೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಮಗು ಶವದ ಮರಣೋತ್ತರ ಪರೀಕ್ಷೆ ಸಹ ನಡೆಸಲಾಗಿದೆ. ಘಟನೆ ಗೊತ್ತಾಗುತ್ತಿದ್ದಂತೆ ಸೈಫುಲ್ಲಾ ಕ್ಲಿನಿಕ್‌ಗೆ ನಮ್ಮ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ಆತ ವೈದ್ಯನಲ್ಲ ಎಂಬುದು ಗೊತ್ತಾಯಿತು. ಕೋಲ್ಕತ್ತದಲ್ಲಿ ಫಾರ್ಮಸಿ ಕೋರ್ಸ್ ಓದಿಕೊಂಡು ಬಂದಿದ್ದ ಆತ ವೈದ್ಯ ಎಂದು ಹೇಳಿಕೊಂಡು ಮನೆಯ ಒಂದು ಕೊಠಡಿಯಲ್ಲೇ ಐದಾರು ವರ್ಷಗಳಿಂದ ಅಲ್ ಖೈರ್ ಫೌಂಡೇಷನ್ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದಾಗಿ ಕ್ಲಿನಿಕ್‌ಗೆ ಬರುತ್ತಿದ್ದವರಿಗೆ ಅಲೋಪಥಿ ಔಷಧಗಳನ್ನು ನೀಡುತ್ತಿದ್ದ. ಸದ್ಯ ಆತನ ಕ್ಲಿನಿಕ್‌ಗೆ ಬೀಗ ಜಡಿದು ಅಲ್ಲಿದ್ದ ಔಷಧಗಳು ಸೇರಿದಂತೆ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.