ADVERTISEMENT

ರಾಮನಗರ | ಬಾಲ್ಯವಿವಾಹ: 6 ವರ್ಷದಲ್ಲಿ 64 ಬಾಲಕಿಯರು ಹಸೆಮಣೆಗೆ

ಓದೇಶ ಸಕಲೇಶಪುರ
Published 20 ಡಿಸೆಂಬರ್ 2023, 4:15 IST
Last Updated 20 ಡಿಸೆಂಬರ್ 2023, 4:15 IST
<div class="paragraphs"><p>ಬಾಲ್ಯವಿವಾಹ (ಪ್ರಾತಿನಿಧಿಕ ಚಿತ್ರ)</p></div>

ಬಾಲ್ಯವಿವಾಹ (ಪ್ರಾತಿನಿಧಿಕ ಚಿತ್ರ)

   

ರಾಮನಗರ: ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ ಸುಮಾರು 64 ಬಾಲ್ಯವಿವಾಹಗಳು ವರದಿಯಾಗಿವೆ. ಸಂಸಾರ ಮತ್ತು ಕುಟುಂಬದ ಕಲ್ಪನೆಯೇ ಗೊತ್ತಿಲ್ಲದ ಬಾಲಕ–ಬಾಲಕಿಯರನ್ನು ಈ ಆಧುನಿಕ ಕಾಲದಲ್ಲೂ ವಿವಾಹ ಬಂಧನಕ್ಕೆ ಒಳಪಡಿಸುವ ಪಿಡುಗು ಜಿಲ್ಲೆಯಲ್ಲಿ ಇಂದಿಗೂ ಜೀವಂತವಾಗಿದೆ.

ಶಾಲಾ ಶಿಕ್ಷಣ ಪಡೆದು ಭವಿಷ್ಯದ ಬಗ್ಗೆ ಆಗಷ್ಟೇ ಕನಸು ಕಾಣಲಾರಂಭಿಸುವ ಹದಿ ಹರೆಯಯದವರನ್ನು 18 ವರ್ಷಕ್ಕೆ ಮುಂಚೆಯೇ ಹಸೆಮಣೆಗೆ ಏರಿಸುವುದರ ವಿರುದ್ಧ ಕಠಿಣ ಕಾನೂಗಳಿದ್ದರೂ, ಈ ಪಿಡುಗಿಗೆ ಸಂಪೂರ್ಣವಾಗಿ ಅಂಕುಶ ಬಿದ್ದಿಲ್ಲ. ವಿವಿಧ ಕಾರಣಗಳಿಗಾಗಿ ಬಾಲ್ಯವಿವಾಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜಿಲ್ಲೆಯಲ್ಲಿ ಇಂತಹ ಘಟನೆಗಳಲ್ಲಿ ಏರಿಳಿತಗಳಾಗುತ್ತಿವೆಯೇ ಹೊರತು, ನಿಯಂತ್ರಣಕ್ಕೆ ಮಾತ್ರ ಬಂದಿಲ್ಲ.

ADVERTISEMENT

2 ವರ್ಷದಲ್ಲಿ 125 ಘಟನೆ

‘ಜಿಲ್ಲೆಯಲ್ಲಿ ಎರಡು ವರ್ಷದಲ್ಲಿ (2022 ಮತ್ತು 2023ನೇ ವರ್ಷ) 125 ಬಾಲ್ಯವಿವಾಹ ಘಟನೆಗಳು ನಡೆದಿವೆ. ಈ ಪೈಕಿ, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡವು ಸಕಾಲದಲ್ಲಿ ಸ್ಥಳಕ್ಕೆ ತೆರಳಿ ಸುಮಾರು 97 ಬಾಲ್ಯವಿವಾಹಗಳಿಗೆ ತಡೆಯೊಡ್ಡಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸರನ್ನೊಳಗೊಂಡ ತಂಡವು ಬಾಲ್ಯವಿವಾಹ ಕುರಿತು ಬರುವ ದೂರುಗಳ ವಿರುದ್ಧ ತಕ್ಷಣ ಕಾರ್ಯಪ್ರವೃತ್ತವಾಗಿ ಕಾರ್ಯಾಚರಣೆ ನಡೆಸುತ್ತದೆ. ಅದಾಗಲೇ ವಿವಾಹವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಪ್ರಕರಣ ಬಾಲ್ಯವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ’ ಎಂದರು.

‘ಸಾಮೂಹಿಕವಾಗಿ ನಡೆಯುವ ವಿವಾಹದಲ್ಲೂ ಬಾಲ್ಯವಿವಾಹ ನಡೆಯುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಯಾರೇ ಅಂತಹ ವಿವಾಹಗಳನ್ನು ನಡೆಸುವಾಗ ಕಡ್ಡಾಯವಾಗಿ ಅವರ ಜನ್ಮ ದಿನಾಂಕ ತಿಳಿಸುವ ಯಾವುದಾದರೂ ದಾಖಲೆಯನ್ನು ಸಂಗ್ರಹಿಸಿರಬೇಕು. ಇದನ್ನೂ ಮೀರಿಯೂ ಬಾಲ್ಯವಿವಾಹ ನಡೆಯುತ್ತಿರುವುದು ಖಚಿತವಾದರೆ ತಡೆಯಲಾಗುತ್ತದೆ’ ಎಂದು ಹೇಳಿದರು.

‘ಕೆಲವರು ಗರ್ಭಿಣಿಯರಾದ ಬಳಿಕವೇ ಅವರು ಬಾಲ್ಯವಿವಾಹವಾಗಿರುವುದು ಗೊತ್ತಾಗುತ್ತದೆ. ಆಸ್ಪತ್ರೆಗೆ ಬಂದಾಗ ಬೆಳಕಿಗೆ ಬರುವ ಇಂತಹ ಘಟನೆ ಕುರಿತು ಅಲ್ಲಿನ ಸಿಬ್ಬಂದಿ ನೀಡುವ ಮಾಹಿತಿ ಮೇರೆಗೆ, ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.