ADVERTISEMENT

‘ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ’

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 2:39 IST
Last Updated 30 ಸೆಪ್ಟೆಂಬರ್ 2025, 2:39 IST
<div class="paragraphs"><p>ರಾಮನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ&nbsp; ಕಾರ್ಯಕ್ರಮದಲ್ಲಿ ಕನ್ನಡ ವಿಷಯದಲ್ಲಿ ಶೇ 100ರಷ್ಟು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p></div>

ರಾಮನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ಕನ್ನಡ ವಿಷಯದಲ್ಲಿ ಶೇ 100ರಷ್ಟು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

   

ರಾಮನಗರ: ‘ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಆರಂಭದಲ್ಲೇ ಗುರುತಿಸಿ ಪ್ರೋತ್ಸಾಹಿಸಿದರೆ ಮುಂದೆ ಅವರು ಅದರಲ್ಲಿ ದೊಡ್ಡ ಸಾಧನೆ ಮಾಡಬಲ್ಲರು. ಅವರ ಪ್ರತಿಭೆ ಗುರುತಿಸುವಲ್ಲಿ ಪೋಷಕರು ಹಾಗೂ ಪಾಠ ಹೇಳಿ ಕೊಡುವ ಗುರುಗಳ ಪಾತ್ರ ದೊಡ್ಡದು’ ಎಂದು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಹೇಳಿದರು.

ನಗರದ ಹೋಲಿ ಕ್ರೆಸೆಂಟ್ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಹಮ್ಮಿಕೊಂಡಿದ್ದ ಕನ್ನಡ ಪ್ರತಿಭೆಗಳು, ಕನ್ನಡ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ‘ಕ್ರೀಡಾ ಚಟುವಟಿಕೆ, ನೃತ್ಯ, ಗಾಯನದಂತಹ ಸಾಂಸ್ಕೃತಿಕ ಪ್ರತಿಭೆ ಮಕ್ಕಳಲ್ಲಿದ್ದಾಗ ಅದನ್ನು ಗುರುತಿಸಿ ನೀರೆರೆಯಬೇಕು’ ಎಂದರು.

ADVERTISEMENT

ಮುಖ್ಯ ಅತಿಥಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ. ಭೈರಲಿಂಗಯ್ಯ ಮಾತನಾಡಿ, ‘ಮಕ್ಕಳು ಕನ್ನಡ ಕಲಿಯಲು ಆಸಕ್ತಿ ತೋರಿಸಬೇಕಾಗಿ. ಇಂಗ್ಲಿಷ್ ಶಿಕ್ಷಣದ ನೆಪದಲ್ಲಿ ಕನ್ನಡ ಕಡೆಗಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ’ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ‘ದಾನಿಗಳ ಸಹಕಾರದಿಂದ ಪರಿಷತ್ತು ವಿನೂತನ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಮಕ್ಕಳಲ್ಲಿ ಕನ್ನಡಾಸಕ್ತಿ ಬೆಳೆಸುವ ಜೊತೆಗೆ ಕನ್ನಡ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

ಸನ್ಮಾನ: ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ 6 ವಿದ್ಯಾರ್ಥಿಗಳು, 124 ಅಂಕ ಗಳಿಸಿದ 12 ಮಂದಿ ಸೇರಿ ಒಟ್ಟು 18 ವಿದ್ಯಾರ್ಥಿಗಳನ್ನು, ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ 100ಕ್ಕೆ 100 ಅಂಕ ಗಳಿಸಿದ 18 ವಿದ್ಯಾರ್ಥಿಗಳು ಹಾಗೂ ಆಯಾ ಶಾಲೆಯ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಜೊತೆಗೆ ತಾಲ್ಲೂಕಿನ ಮೂವರು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. 2025ರ ರಾಜ್ಯ ಶಿಕ್ಷಕ ಪ್ರಶಸ್ತಿ ಪಡೆದ ರಾಮಚಂದ್ರಪ್ಪ ಹಾಗೂ ಕಾನೂನು ಪದವಿಯಲ್ಲಿ ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದ ವಿನುತ ಹಾಗೂ ಏಕಕಾಲದಲ್ಲಿ ಐದು ಸರ್ಕಾರಿ ನೌಕರಿ ಪಡೆದ ಕ್ಯಾಸಾಪುರದ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆ ಅಲ್ತಾಫ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಗಾಯಕ ವಿನಯ್ ಕುಮಾರ್ ಗೀತ ಗಾಯನ ನಡೆಸಿ ಕೊಟ್ಟರು. ಸಾಹಿತಿ ಪ್ರೊ.ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಸ್ಟ್ಯಾನ್ಲಿ ಪಾಲ್, ಸಾಹಿತಿ ಜಿ.ಎಚ್. ರಾಮಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್, ಪದಾಧಿಕಾರಿಗಳಾದ ರಾಜೇಶ್, ಸಿ. ಪುಟ್ಟಸ್ವಾಮಿ, ನಂಜುಂಡಿ, ಕಿರಣ್ ಬಿಳಗುಂಬ, ಅರುಣ್ ಕವಣಾಪುರ, ಗಿರೀಶ್ ವಡ್ಡರಹಳ್ಳಿ, ಮಹದೇವ ಲಕ್ಕಸಂದ್ರ, ದೇವರಾಜ್ ಕ್ಯಾಸಾಪುರ, ಬಿ.ಟಿ. ರಾಜೇಂದ್ರ, ಇ.ಟಿ. ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಆರ್. ಮಲ್ಲೇಶ್, ಗುತ್ತಿಗೆದಾರ ಷಡಕ್ಷರಿ ದೇವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.