
ಮಾಗಡಿ: ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್‌ಮಸ್‌ಗಾಗಿ ತಾಲ್ಲೂಕಿನ ಚರ್ಚ್ ಹಾಗೂ ಕ್ರೈಸ್ತರ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಕ್ರಿಸ್‌ಮಸ್ ಆಚರಣೆಗೆ ಎರಡು ದಿನ ಬಾಕಿ ಉಳಿದಿದ್ದು ಚರ್ಚ್ ಹಾಗೂ ಕ್ರೈಸ್ತರ ಮನೆಗಳಲ್ಲಿ ಅಂತಯಿಮ ಹಂತದ ಸಿದ್ಧತೆಗಳು ಭರದಿಂದ ನಡೆದಿವೆ.
ಕ್ರಿಸ್‌ಮಸ್ ಗಿಡ, ಜಿಂಗಲ್ ಬೆಲ್, ಆಕಾಶಬುಟ್ಟಿ ಖರೀದಿ ನಡೆದಿದೆ. ಬಣ್ಣ, ಬಣ್ಣದ ವಿದ್ಯುತ್ ದೀಪಗಳ ಅಲಂಕಾರ, ಗೋದಲಿ ನಿರ್ಮಾಣ, ಏಸು ಕ್ರಿಸ್ತನ ಜೀವನ ವೃತ್ತಾಂತ ತಿಳಿಸುವ ಗೊಂಬೆಗಳು ತಯಾರಿ ನಡೆದಿದೆ. ಮಾರುಕಟ್ಟೆಯಲ್ಲಿ ಕೇಕ್, ಹೊಸ ಬಟ್ಟೆ ಖರೀದಿ ನಡೆಯುತ್ತಿದೆ.
ಮಾಗಡಿಯ ಸಂತ ಅಂತೋನಿ ಚರ್ಚ್ ಮತ್ತು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ಸೇಂಟ್ ಎಲಿಜಬೆತ್, ನವಜ್ಯೋತಿ ಮಕ್ಕಳ ಮನೆ ಹಬ್ಬಕ್ಕೆ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ.
ಕ್ರಿಸ್‌ಮಸ್ 25 ದಿನ ಮುಂಚಿತವಾಗಿ ಮೂರನೇ ಭಾನುವಾರದಿಂದ ಹಬ್ಬದ ತಯಾರಿ ಶುರುವಾಗತ್ತದೆ. ಏಸು ಕ್ರಿಸ್ತ ಜನನ, ಬಾಲ್ಯದ ಮಾದರಿ ತಯಾರಿಸಲಾಗಿದೆ ಎಂದು ಸಿಸ್ಟರ್ ಸಹರ ತಿಳಿಸಿದರು.
ಏಸು ಜನಿಸಿದ ಸಮಯ ಕ್ರೈಸ್ತರಿಗೆಲ್ಲ ಅತ್ಯಂತ ಪವಿತ್ರ. ಹಾಗಾಗಿ ಡಿ.24ರ ಮಧ್ಯರಾತ್ರಿಯಿಂದಲೇ ಕ್ರಿಸ್‌ಮಸ್ ಆಚರಣೆ ಶುರುವಾಗುತ್ತದೆ. ಬುಧವಾರ ರಾತ್ರಿ ಚರ್ಚ್‌ಗಳಲ್ಲಿ ಮಾತೆ ಮೇರಿ ಮತ್ತು ಏಸು ಕ್ರಿಸ್ತರನ್ನು ಸ್ತುತಿಸುವ ಕ್ಯಾರೋಲ್(ಸಮೂಹ ಗಾಯನ) ಹೇಳಿ ಮೊಂಬತ್ತಿ ಬೆಳಗಿ ಸಂಭ್ರಮಿಸಲಾಗುವುದು. ಕೇಕ್ ಕತ್ತರಿಸಿ ಹಬ್ಬ ಆಚರಿಸಲಾಗುತ್ತದೆ ಎಂದರು.
ಮಕ್ಕಳ ಹಾಡು, ನೃತ್ಯ ಮನಸ್ಸಿಗೆ ಮುದ ನೀಡುತ್ತವೆ. ಸಾಂಟಾ ಅಜ್ಜ ನೀಡುವ ಕ್ರಿಸ್‌ಮಸ್ ಉಡುಗೊರೆಗಾಗಿ ಮಕ್ಕಳು ಕಾತರದಿಂದ ಕಾದಿರುತ್ತಾರೆ. 25ರಂದು ಬೆಳಗ್ಗೆ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಜರಗುತ್ತವೆ ಎಂದು ಸಿಸ್ಟರ್ ಸಹರ ತಿಳಿಸಿದರು.
ಪಟ್ಟಣದ ಹೊಸಪೇಟೆಯ ಸಂತ ಅಂತೋನಿ ಚರ್ಚ್‌ನಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿವೆ. ಚರ್ಚ್ ಹೊರಭಾಗದಲ್ಲಿ ಏಸು ಕ್ರಿಸ್ತನ ಜೀವನ ವೃತ್ತಾಂತ ಬಿಂಬಿಸುವ ಮಾದರಿ ಆಕರ್ಷಕವಾಗಿದೆ. ಸಿಸ್ಟರ್ ಜೆಸ್ಲಿ, ಸಿಸ್ಟರ್ ಮಶ್ಚಲ್ ಸೇರಿದಂತೆ ಅನೇಕರು ಕ್ರಿಸ್‌ಮಸ್ ಸಿದ್ಧತೆಯಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.