
ರಾಮನಗರ: ಜಗತ್ತಿನ ಶಾಂತಿಧೂತನಾದ ಯೇಸುವಿನ ಜನ್ಮದಿನ ಆಚರಣೆಯ ದಿನವಾದ ಕ್ರಿಸ್‌ಮಸ್ ಹಬ್ಬಕ್ಕೆ ನಗರದಲ್ಲಿ ಭರದ ಸಿದ್ಧತೆ ನಡೆದಿದೆ. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳಿಗೆ ನಾಲ್ಕೈದು ದಿನದಿಂದಲೇ ವಿಶೇಷ ವಿದ್ಯುದ್ಧೀಪಾಲಂಕಾರ ಮಾಡಲಾಗಿದ್ದು, ವರ್ಣರಂಜಿತವಾಗಿ ಕಂಗೊಳಿಸುತ್ತಿವೆ. ಕ್ರೈಸ್ತರ ಮನೆಗಳು ಸಹ ವಿದ್ಯುತ್ ದೀಪಗಳಿಂದ ಗಮನ ಸೆಳೆಯುತ್ತಿವೆ.
ಹಬ್ಬಕ್ಕಾಗಿ ಸಮುದಾಯದವರು ಎರಡು ದಿನಗಳಿಂದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಂಭ್ರಮಾಚರಣೆಗೆ ಬುಧವಾರ ಚರ್ಚ್ ಹಾಗೂ ಮನೆಗಳಲ್ಲಿ ಅಂತಿಮ ತಯಾರಿ ನಡೆಸುತ್ತಿದ್ದ ದೃಶ್ಯ ಕಂಡುಬಂತು. ಯೇಸು ಹುಟ್ಟಿನ ಸಂದೇಶದ ದ್ಯೋತಕವಾಗಿ ಬಣ್ಣ ಬಣ್ಣದ ನಕ್ಷತ್ರಗಳು, ಆಕಾಶ ಬುಟ್ಟಿಗಳು, ಕ್ರಿಸ್‌ಮಸ್ ಟ್ರೀಗಳು ಚರ್ಚ್, ಪ್ರಾರ್ಥನಾ ಮಂದಿರಗಳ ಮಹಡಿಯನ್ನು ಅಲಂಕರಿಸಿವೆ.
ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಮನೆಗಳಲ್ಲಿ ಕೇಕ್ ಹಾಗೂ ವಿಶೇಷ ಖಾದ್ಯ ತಯಾರಿ ನಡೆಯುತ್ತಿದ್ದು, ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ರಾತ್ರಿಯಿಂದಲೇ ಹಬ್ಬದ ಸಡಗರ ಮನೆ ಮಾಡಿದೆ. ರಾತ್ರಿ 11.30ರ ಸುಮಾರಿಗೆ ಯೇಸುವಿನ ಸ್ತುತಿಗೀತೆಗಳ ಗಾಯನ, ಬಲಿಪೂಜೆ ಹಾಗೂ ವಿಶೇಷ ಪಾರ್ಥನೆ ಜರುಗಲಿದೆ.
ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಚರ್ಚ್‌ಗಳಲ್ಲಿ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ, ಕ್ರಿಸ್ತನ ಆರಾಧನೆ, ಹಬ್ಬದ ಶುಭಾಶಯ ವಿನಿಮಯ ನಡೆಯಲಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರದ ರೈಲು ನಿಲ್ದಾಣದ ಬಳಿ ಇರುವ ಕ್ಯಾಥೊಲಿಕ್ ಲೂರ್ದು ಮಾತೆ ದೇವಾಲಯ ಮತ್ತು ಸಂತ ಥಾಮಸ್ ಪ್ರಾರ್ಥನಾಲಯವು ವಿಶೇಷ ವಿದ್ಯುತ್ ದೀಪಾಲಂಕಾರದಿಂದ ಗಮನ ಸೆಳೆಯುತ್ತಿವೆ.
ಚರ್ಚ್, ಶಾಲೆಗಳು, ಮನೆಗಳ ಆವರಣದಲ್ಲಿ ಸ್ಥಾಪಿಸಿರುವ ಆಕರ್ಷಕ ಗೋದಲಿಗಳು ಮನಸೂರೆಗೊಳ್ಳುತ್ತಿದೆ. ಯೇಸವನ್ನು ಶಿಲುಬೆಗೆ ಏರಿಸುವ ತನಕ ಸಾಗಿಬಂದ ಬದುಕಿನ ಕಥನ ಹೇಳುವ ಗೋದಲಿಗಳನ್ನು ನಿರ್ಮಾಣ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.