ADVERTISEMENT

ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 14:06 IST
Last Updated 13 ಡಿಸೆಂಬರ್ 2019, 14:06 IST
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಚನ್ನಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಮ್ಮದ್ ಫಾಜಿಲ್ ಮಾತನಾಡಿದರು
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಚನ್ನಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಮ್ಮದ್ ಫಾಜಿಲ್ ಮಾತನಾಡಿದರು   

ಚನ್ನಪಟ್ಟಣ: ಕೇಂದ್ರ ಸರ್ಕಾರದ ‘ಪೌರತ್ವ ತಿದ್ದುಪಡಿ ವಿಧೇಯಕ -2019’ ಅನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತಾಲ್ಲೂಕು ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ಶೇರು ಹೋಟೆಲ್ ಬಳಿ ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಫಾಜಿಲ್ ಮಾತನಾಡಿ, ‘ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕಾರ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಹಿಂದುಳಿದ ಸಮುದಾಯವನ್ನು ಹತ್ತಿಕಲು ಪ್ರಯತ್ನಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಧರ್ಮದ ಆಧಾರದ ಮೇಲೆ ಪೌರತ್ವ ನಿರ್ಧರಿಸುವ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಕೂಡಲೇ ಕೈ ಬಿಡಬೇಕು. ದೇಶಕ್ಕೆ ಬರುತ್ತಿರುವ ವಲಸಿಗರ ನಿಯಂತ್ರಣದ ನೆಪದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಈ ರೀತಿಯ ಅಪಾಯಕಾರಿ ಮಸೂದೆಗಳನ್ನು ಜಾರಿಗೆ ತರಲಿ ಹೊರಟಿರುವ ಕೇಂದ್ರದ ಕ್ರಮ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಹುನ್ನಾರ’ ಎಂದು ಆರೋಪಿಸಿದರು.

ADVERTISEMENT

‘ಕೇಂದ್ರ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಇಂತಹ ನಿಯಮ ಜಾರಿಗೆ ತರುವ ಅವಶ್ಯಕತೆ ಇಲ್ಲ. ದೇಶದಲ್ಲಿ ನೂರಾರು ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಿ. ಇಂತಹ ಜನ ವಿರೋಧಿ ನಿಯಮ ಜಾರಿಗೆ ತರಲು ಹೊರಟರೆ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು. ರಸ್ತೆತಡೆ ವೇಳೆ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.