ಕನಕಪುರ: ಪೌರಕಾರ್ಮಿಕರಿಗಾಗಿ ನಿರ್ಮಿಸಿರುವ ವಸತಿ ಗೃಹ ಪೂರ್ಣಗೊಂಡು ಐದು ವರ್ಷಗಳಾದರೂ ಅವರಿಗೆ ಇನ್ನೂ ಹಸ್ತಾಂತರವಾಗದೆ ಹಾಗೆ ಉಳಿದಿವೆ.
ಇಲ್ಲಿನ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುವಂತಹ ವಸತಿ ರಹಿತರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ 43 ಮಂದಿಯಿಂದ ಅರ್ಜಿ ಪಡೆದು ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಅವರಿಗೂ ಇನ್ನೂ ಹಸ್ತಾಂತರಿಸಿಲ್ಲ.
ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆ (ಪಿಕೆಜಿಬಿವೈ) ಅಡಿಯಲ್ಲಿ 2017-18ರಲ್ಲಿ ಪೌರ ಕರ್ಮಿಕರಿಗಾಗಿ ₹4.30 ಕೋಟಿ ವೆಚ್ಚದಲ್ಲಿ ನೀಲಕಂಠೇಶ್ವರ ಶಾಲೆ ಹೊಳೆ ರಸ್ತೆಯಲ್ಲಿ ವಸತಿ ಗೃಹಗಳನ್ನು ನಿರ್ಮಿಸಿದ್ದಾರೆ.
ವಸತಿ ಗೃಹಗಳ ನಿರ್ಮಾಣದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು 2020-21ನೇ ಸಾಲಿನಲ್ಲಿ ಕಾಮಗಾರಿ ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರಿಸಲಾಗಿದೆ. ಆದರೆ, ನಗರಸಭೆಯವರು ಪೌರಕಾರ್ಮಿಕರಿಗೆ ಹಸ್ತಾಂತರಿಸಿಲ್ಲ.
ಈ ವಸತಿ ಗೃಹಗಳು ಜಿ+2 ಕಟ್ಟಡಗಳಾಗಿದ್ದು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ನಗರಸಭೆಯವರು ಕಟ್ಟಡ ಕಾಮಗಾರಿ ಪೂರ್ಣವಾಗುತ್ತಿದ್ದಂತೆ 43 ಮಂದಿಗೂ ಹಕ್ಕುಪತ್ರ ನೀಡಿ ವಸತಿ ಗೃಹ ಹಸ್ತಾಂತರಿಸುವುದಾಗಿ ತಿಳಿಸಿದ್ದರು. ಆದರೆ, ಈಗ ಬೂದಿಕೇರಿಯಲ್ಲಿರುವ ಟಿಎಂಸಿ ಕಾಲೊನಿಯಲ್ಲಿರುವ ಮನೆಗಳನ್ನು ಖಾಲಿ ಮಾಡಿ ಇಲ್ಲಿಗೆ ಬಂದರೆ ಮಾತ್ರ ಹಕ್ಕುಪತ್ರ ನೀಡಿ ವಸತಿಗೃಹಗಳನ್ನು ಹಸ್ತಾಂತರಿಸುವುದು ಎಂದು ಹೇಳುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಫಲಾನುಭವಿಗಳ ಮಾತಾಗಿದೆ.
ನಗರಸಭೆ ವತಿಯಿಂದ ಪಿಕೆಜಿಬಿವೈ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಸಮುಚ್ಛಯ ನಿರ್ಮಾಣ ಮಾಡಿದ್ದು, ಅವುಗಳನ್ನು ಹಸ್ತಾಂತರಿಸದೆ, ಬೂದಿಕೆರೆಯಲ್ಲಿರುವ ಟಿಎಂಸಿ ಕಾಲೊನಿಯ ವಸತಿಗೃಹಗಳನ್ನು ಖಾಲಿ ಮಾಡಿದರೆ ಮಾತ್ರ ಹಕ್ಕು ಪತ್ರ ನೀಡುವುದಾಗಿ ಹೇಳುತ್ತಾರೆ. ಇದಕ್ಕೂ ಹೊಸದಾಗಿ ನಿರ್ಮಿಸಿರುವ ವಸತಿ ಸಮುಚ್ಛಯಕ್ಕೂ ಯಾವುದೇ ಸಂಬಂಧವಿಲ್ಲ. ಅರ್ಜಿ ಪಡೆದವರಿಗೆ ವಸತಿ ಸಮುಚ್ಛಯ ಹಸ್ತಾಂತರಿಸಬೇಕು.
ನೀಲಿ ರಮೇಶ್, ಸಮುದಾಯದ ಮುಖಂಡ, ಟಿಎಂಸಿ ಕಾಲೊನಿ
ಬೂದಿಕೇರಿಯ ಟಿಎಂಸಿ ಕಾಲೊನಿಯಲ್ಲಿ 27 ಮಂದಿ 50ಕ್ಕೂ ಹೆಚ್ಚು ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಹಾಗಾಗಿ ಆ ವಸತಿ ಸಮುಚ್ಛಯವನ್ನು ಅಲ್ಲಿರುವವರಿಗೆ ಮಂಜೂರು ಮಾಡಿಕೊಡಬೇಕು. ಹೊಸದಾಗಿ ನಿರ್ಮಿಸಿರುವ 43 ವಸತಿ ಸಮುಚ್ಛಯ ಉಳಿದ ಪೌರಕಾರ್ಮಿಕರಿಗೆ ನೀಡಬೇಕು.
ಟಿ.ವೆಂಕಟಮ್ಮ, ನಿವೃತ್ತ ಪೌರಕಾರ್ಮಿಕರು, ಬೂದಿಕೇರಿ ಟಿಎಂಸಿ ಕಾಲೊನಿ
ಪೌರ ಕಾರ್ಮಿಕರು ವಾಸಿಸುತ್ತಿರುವ ಬೂದಿಕೇರಿ ಟಿಎಂಸಿ ಕಾಲೊನಿಯಲ್ಲೇ ಜಾಗ ನೀಡಬೇಕು. ಪೌರ ಕಾರ್ಮಿಕರೇ ಗೃಹ ಭಾಗ್ಯ ಯೋಜನೆ ಅಡಿ ಮನೆ ನಿರ್ಮಿಸಿಕೊಳ್ಳುತ್ತಾರೆ. ಈಗ ನಿರ್ಮಾಣವಾಗಿರುವ ಜಾಗದಲ್ಲಿ ನೆಲದ ಮಾಲೀಕತ್ವ ಪೌರಕಾರ್ಮಿಕರಿಗೆ ಇಲ್ಲದ ಕಾರಣ ಆ ಜಾಗ ಬೇಡ.
ಆರ್.ನಾಗರಾಜು, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ಪೌರ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.