ADVERTISEMENT

ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 16:13 IST
Last Updated 28 ಏಪ್ರಿಲ್ 2025, 16:13 IST
ಚನ್ನಪಟ್ಟಣದಲ್ಲಿ ಪೌರಕಾರ್ಮಿಕರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು
ಚನ್ನಪಟ್ಟಣದಲ್ಲಿ ಪೌರಕಾರ್ಮಿಕರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ಪೌರಕಾರ್ಮಿಕರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಸಂಜೆ ತೋಳಿಗೆ ಕಪ್ಪುಪಟ್ಟಿ ಕಟ್ಟಿ, ಮೇಣದಬತ್ತಿ ಹಿಡಿದು ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ನಗರಸಭಾ ಕಚೇರಿ ಬಳಿಯಿಂದ ಹೊರಟು ಎಂ.ಜಿ. ರಸ್ತೆಯ ಮೂಲಕ ಗಾಂಧಿಭವನ ವೃತ್ತದವರೆಗೆ ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಸಿದ ಪೌರ ಕಾರ್ಮಿಕರು, ಸರ್ಕಾರಿ ನೌಕರರು ಪಡೆಯುವ ಸೌಲಭ್ಯಗಳನ್ನು ನಮಗೂ ನೀಡಬೇಕು ಬೇಡಿಕೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಯೋಜನೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ನಮಗೂ ನೀಡಬೇಕು. ಈ ಬಗ್ಗೆ ಕಾಯಿದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಿ ಪೌರ ಸೇವಾ ಕಾರ್ಮಿಕರಿಗೂ ಜಾರಿಮಾಡಬೇಕು. ದಿನಗೂಲಿ ನೌಕರರು, ಚಾಲಕರು, ಲೋಡರ್ಸ್, ಹೆಲ್ಪರ್ಸ್, ಕ್ಲೀನರ್‌ಗಳು ಸೇರಿದಂತೆ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸಬೇಕು. ಜೊತೆಗೆ ನೇರಪಾವತಿ ಪಡೆಯುವ ಎಲ್ಲರನ್ನೂ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ನಗರಸಭೆ ಪೌರಾಯುಕ್ತ ಬಿ.ಮಹೇಂದ್ರ ಅವರಿಗೆ ಮನವಿಪತ್ರ ನೀಡಿದರು. ಪೌರಕಾರ್ಮಿಕ ಸಂಘದ ಉಪಾಧ್ಯಕ್ಷ ಸಿ.ಮಂಜು, ಕಾರ್ಯದರ್ಶಿ ಮಂಜು, ಪದಾಧಿಕಾರಿಗಳು, ಪೌರ ಕಾರ್ಮಿಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.