ADVERTISEMENT

ಗುಂಡು ಹೊಡೆದ್ರಾ? ಹೊಡೆದುಕೊಂಡ್ರಾ? ರಾಯ್ ‍ಸಾವಿನ ಬಗ್ಗೆ ಪ್ರದೀಪ್ ಈಶ್ವರ್ ಅನುಮಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 12:58 IST
Last Updated 31 ಜನವರಿ 2026, 12:58 IST
<div class="paragraphs"><p> ಸಿ.ಜೆ. ರಾಯ್ ಹಾಗೂ ಪ್ರದೀಪ್  ಈಶ್ವರ್</p></div>

ಸಿ.ಜೆ. ರಾಯ್ ಹಾಗೂ ಪ್ರದೀಪ್ ಈಶ್ವರ್

   

ಕನಕಪುರ (ರಾಮನಗರ): ‘ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಅವರೇ ಗುಂಡು ಹೊಡೆದುಕೊಂಡ್ರಾ ಅಥವಾ ಯಾರಾದರೂ ಗುಂಡು ಹೊಡೆದ್ರಾ ಎಂಬ ಅನುಮಾನವಿದೆ. ಯಾಕೆಂದರೆ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾವಿಲ್ಲ. ಅಲ್ಲಿದ್ದವರು ಆದಾಯ ತೆರಿಗೆ ಇಲಾಖೆಯವರು ಮಾತ್ರ’ ಎಂದು ಶಾಸಕ ಪ್ರದೀಪ್ ಈಶ್ವರ್ ಅನುಮಾನ ವ್ಯಕ್ತಪಡಿಸಿದರು.

ಪ್ರಕರಣ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಒಳಗಡೆ ಏನಾಗಿದೆಯೊ ಗೊತ್ತಿಲ್ಲ. ನನಗಿರುವ ಮಾಹಿತಿ ಪ್ರಕಾರ ಬಿಜೆಪಿಯವರು ಚುನಾವಣೆಗೆ ದುಡ್ಡು ಕೇಳಿದ್ದಾರೆ. ಅವರು ಹಣ ಕೊಡದಿದ್ದಕ್ಕೆ ಟಾರ್ಗೆಟ್ ಮಾಡಿದ್ದಾರೆ. ಇಂತಹ ಭ್ರಷ್ಟ ಬಿಜೆಪಿಯಿಂದ ನಮ್ಮ ದೇಶ ಅಭಿವೃದ್ಧಿಯಾಗಲ್ಲ’ ಎಂದು ಟೀಕಿಸಿದರು.

ADVERTISEMENT

‘ಬಿಜೆಪಿಯ ಅಶೋಕಣ್ಣ, ಸುನೀಲಣ್ಣ, ಯತ್ನಾಳ್ ಹಾಗೂ ಮೈಸೂರಿನ ಒಬ್ಬರು ಎಲ್ಲದಕ್ಕೂ ಬಾಯಿ ಬಡಿದುಕೊಳ್ಳುತ್ತಾರೆ. ಇದರ ಬಗ್ಗೆ ಯಾಕೆ ಯಾರೂ ಬಾಯಿ ಬಿಡುತ್ತಿಲ್ಲ. ಒಬ್ಬ ಕಾಮನ್ ಮ್ಯಾನ್ ಹಣ ಸಂಪಾದನೆ ಮಾಡೋಕೆ ಬಿಜೆಪಿ ಬಿಡುತ್ತಿಲ್ಲ. ರಾಯ್ ಅವರಿಗೆ ಸಾಲ ಹಾಗೂ ಯಾವುದೇ ಸಮಸ್ಯೆ ಇಲ್ಲ. ಆದರೂ ಕಳೆದ ಒಂದು ತಿಂಗಳಿನಿಂದ ಐಟಿ ಕಿರುಕುಳ ನೀಡಿದೆ’ ಎಂದು ಆರೋಪಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದರೆ ಇಂತಹ ಕಿರುಕುಳ ಮುಂದುವರಿಯುತ್ತಲೇ ಇರುತ್ತದೆ. ಪ್ರಕರಣ ಕುರಿತು ಎಸ್‌ಐಟಿ ತನಿಖೆಯಾಗಲಿದೆ. ಇದನ್ನು ಸಿಬಿಐ ತನಿಖೆಗೆ ವಹಿಸಿದರೂ ನ್ಯಾಯ ಸಿಗುವುದಿಲ್ಲ. ಹಾಗಾಗಿ, ಎಸ್‌ಐಟಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.