ADVERTISEMENT

ರೈತರು, ಕಾರ್ಯದರ್ಶಿ ಜಟಾಪಟಿ: ಹಾಲು ಹಾಳು

ಲೆಕ್ಕ ನೀಡುವಂತೆ ಒತ್ತಾಯಿಸಿ ರಾಮನಗರದಲ್ಲಿ ಹಾಲು ಉತ್ಪಾದಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 15:49 IST
Last Updated 18 ನವೆಂಬರ್ 2019, 15:49 IST
ಅಗರ ಗ್ರಾಮದ ಹಾಲು ಉತ್ಪಾದಕರು ರೈತ ಮಖಂಡರೊಂದಿಗೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು
ಅಗರ ಗ್ರಾಮದ ಹಾಲು ಉತ್ಪಾದಕರು ರೈತ ಮಖಂಡರೊಂದಿಗೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು   

ರಾಮನಗರ/ಕನಕಪುರ: ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕರ ನಡುವಿನ ವೈಮನಸ್ಯದಿಂದಾಗಿ ಕನಕಪುರ ತಾಲ್ಲೂಕಿನ ಮರಳವಾಡಿ ಅಗರ ಗ್ರಾಮದಲ್ಲಿ ಕಳೆದೆರಡು ದಿನ ನೂರಾರು ಲೀಟರ್‌ ಹಾಲು ಹಾಳಾಗಿದ್ದು, ರೈತರ ಬೇಸರಕ್ಕೆ ಕಾರಣವಾಗಿದೆ.

‘ಹಾಲು ಉತ್ಪಾದಕರನ್ನು ಡೇರಿಯ ಷೇರುದಾರರನ್ನಾಗಿ ಮಾಡಿಕೊಂಡಿಲ್ಲ. ವಾರ್ಷಿಕ ಖರ್ಚು ವೆಚ್ಚದ ಲೆಕ್ಕ ನೀಡಿಲ್ಲ’ ಎಂಬುದು ರೈತರ ಆರೋಪ. ಇದನ್ನು ಕೆಲವು ರೈತರು ಪ್ರಶ್ನೆ ಮಾಡಿದ್ದು, ಅದೇ ಕಾರಣಕ್ಕೆ ಶನಿವಾರ ಹಾಗೂ ಭಾನುವಾರ ಹಾಲನ್ನು ತೆಗೆದುಕೊಳ್ಳದೇ ವಾಪಸ್‌ ಕಳುಹಿಸಲಾಗಿದೆ ಎಂದು ದೂರಿದ್ದಾರೆ. ಆದರೆ ಗುಣಮಟ್ಟ ಇಲ್ಲದ ಕಾರಣ ಹಾಲನ್ನು ಸ್ವೀಕರಿಸಿಲ್ಲ ಎಂಬುದು ಅಧಿಕಾರಿಗಳ ಸಮಜಾಯಿಷಿ. ಈ ಸಂಬಂಧ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಯನ್ನೂ ನಡೆಸಿದರು. ಸೋಮವಾರದಿಂದ ಡೇರಿಯಲ್ಲಿ ಮತ್ತೆ ರೈತರಿಂದ ಹಾಲು ಸ್ವೀಕರಿಸಲಾಗುತ್ತಿದೆ.

ಆಗಿದ್ದೇನು?: ಡೇರಿಯ ಆವರಣದಲ್ಲಿ ಶನಿವಾರ ಮಧ್ಯಾಹ್ನ ಸಭೆ ನಡೆದಿತ್ತು. ಈ ಸಂದರ್ಭ ಕೆಲವು ಹಾಲು ಉತ್ಪಾದಕರು ಮಾತನಾಡಿ ’20 ವರ್ಷಗಳ ಹಿಂದೆ ಡೇರಿ ಸ್ಥಾಪನೆ ಆಗಿದೆ. ಆದರೆ ಇಲ್ಲಿನ ಕಾರ್ಯದರ್ಶಿ ಈವರೆಗೆ ನಮಗೆ ಸಂಘದ ಲೆಕ್ಕ ಕೊಟ್ಟಿಲ್ಲ’ ಎಂದು ಹರಿಹಾಯ್ದರು. ಇದಕ್ಕೆ ಆಡಳಿತ ಮಂಡಳಿಯವರು ಮಾಹಿತಿ ನೀಡಲು ಮುಂದಾದರು. ಈ ಸಂದರ್ಭ ಕೆಲವರು ವೀಡಿಯೊ ಚಿತ್ರೀಕರಣಕ್ಕೆ ಮುಂದಾದರು. ಇದರಿಂದ ಸಭೆಯಲ್ಲಿ ಗಲಾಟೆ ಹೆಚ್ಚಾಯಿತು. ಹೀಗಾಗಿ ಅರ್ಧಕ್ಕೆ ಸಭೆ ಮೊಟಕುಗೊಂಡಿತು.

ADVERTISEMENT

ಸಭೆಯ ಬಳಿಕ ಶನಿವಾರ ಸಂಜೆ ಹಾಗೂ ಭಾನುವಾರ ಬೆಳಿಗ್ಗೆ ಮತ್ತು ಸಂಜೆ ಡೇರಿಯಲ್ಲಿ ಹಾಲು ಸ್ವೀಕರಿಸಿಲ್ಲ. ಇದರಿಂದ ಹಾಲನ್ನು ಕೆರೆಗೆ ಚೆಲ್ಲಬೇಕಾಯಿತು ಎಂದು ರೈತರು ದೂರಿದರು.

ಡೇರಿ ನಿರ್ದೇಶಕ ಶಿವರಾಜು ಮಾತನಾಡಿ ‘ಡೇರಿ ಸ್ಥಾಪನೆಯಾಗಿ 20 ವರ್ಷ ಆದರೂ ಯಾವುದೇ ಸಭೆ ನಡೆಸಿಲ್ಲ. ನನ್ನನ್ನು ನಿರ್ದೇಶಕನನ್ನಾಗಿ ಮಾಡಿಕೊಂಡಿರುವುದು ಗೊತ್ತಿಲ್ಲ. ಇಲ್ಲಿ ಕಾರ್ಯದರ್ಶಿಯನ್ನು ಯಾರು ಕೇಳುವಂತಿಲ್ಲ, ಕೇಳಿದರೆ ಗುಂಪಾಗಿ ದೌರ್ಜನ್ಯ ನಡೆಸುತ್ತಾರೆ’ ಎಂದು ದೂರಿದರು.

ಡೇರಿಯ ಕಾರ್ಯದರ್ಶಿ ವೆಂಕಟಾಚಲ ಮಾತನಾಡಿ ‘ನಾವು ಯಾವುದೇ ಲೆಕ್ಕಪತ್ರವನ್ನು ಮುಚ್ಚಿಟ್ಟಿಲ್ಲ. ಪ್ರತಿವರ್ಷ ಆಡಿಟ್‌ ಮಾಡಿಸಿ ಸಭೆ ನಡೆಸಿ ಸಾರ್ವಜನಿಕವಾಗಿ ಮಾಹಿತಿ ನೀಡಿದ್ದೇವೆ. ರಾಜಕೀಯ ಪ್ರೇರಿತರಾಗಿ ಇಲ್ಲಿ ಗಲಾಟೆ ಮಾಡುತ್ತಿದ್ದಾರೆ. ನಾವು ಲೆಕ್ಕಕೊಡಲು ಹೋದರೆ ಲೆಕ್ಕವನ್ನು ತೆಗೆದುಕೊಳ್ಳದೆ ಗಲಾಟೆ ಮಾಡುತ್ತಿದ್ದಾರೆ. 20 ವರ್ಷದ ಲೆಕ್ಕವನ್ನು ಈಗ ಕೇಳಿದರೆ ಕೊಡಲು ಹೇಗೆ ಸಾಧ್ಯ, ಪ್ರತಿವರ್ಷವು ಲೆಕ್ಕವನ್ನು ಕೊಟ್ಟಿದ್ದೇವೆ’ ಎಂದು ತಿಳಿಸಿದರು.

ಬಮೂಲ್‌ ನಿರ್ದೇಶಕ ಎಚ್‌.ಎಸ್‌. ಹರೀಶ್‌ಕುಮಾರ್‌ ಪ್ರತಿಕ್ರಿಯಿಸಿ ‘ ಅಗರ ಗ್ರಾಮದಲ್ಲಿ ನಡೆದ ಸಭೆಗೆ ಹೋಗಿದ್ದೆ. ಆದರೆ ಮಾತನಾಡಲು ಅವಕಾಶ ನೀಡಲಿಲ್ಲ. ರೈತರಿಗೆ ಅನ್ಯಾಯ ಆಗಿದ್ದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಒಕ್ಕೂಟದಿಂದ, ಶಿಬಿರ ಕಚೇರಿಯಿಂದ ಅಗರ ಡೇರಿಗೆ ಸಂಬಂಧಿಸಿದಂತೆ ಲೆಕ್ಕಕೊಡಲು ಸಿದ್ದರಿದ್ದೇವೆ. ಸೋಮವಾರ ಬೆಳಿಗ್ಗೆಯಿಂದಲೇ ರೈತರಿಂದ ಹಾಲು ಖರೀದಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ರಾಮನಗರದಲ್ಲಿ ಪ್ರತಿಭಟನೆ: ಅಗರ ಗ್ರಾಮದ ಹಾಲು ಉತ್ಪಾದಕರು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ‘ಶನಿವಾರ ಸಂಜೆ ಒಕ್ಕೂಟದ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಬಮೂಲ್ ನಿರ್ದೇಶಕ ಎಚ್.ಎಸ್. ಹರೀಶ್ ಕುಮಾರ್ ನಮಗೆ ನಿಮ್ಮ ಗ್ರಾಮದ ಹಾಲೆ ಬೇಡ, ಹಾಲಿನ ಸಂಗ್ರಹಕ್ಕೆ ಲಾರಿ ಕಳಿಸುವುದಿಲ್ಲ ಎಂದು ಹೆದರಿಸಿ, ಮೂರು ದಿನಗಳ ಕಾಲ ಹಾಲನ್ನು ತೆಗೆದುಕೊಂಡಿಲ್ಲ’ ಎಂದು ರೈತರು ದೂರಿದರು.

‘ಸಂಘದ ಕಾರ್ಯದರ್ಶಿ ವೆಂಕಟಾಚಲ ಹಾಗೂ ಬಮೂಲ್ ನಿರ್ದೇಶಕ ಹರೀಶ್ ಕುಮಾರ್ ತಮ್ಮ ಒಣ ಪ್ರತಿಷ್ಠೆಯನ್ನು ಬಿಟ್ಟು, ರೈತ ಪರವಾಗಿ ಕೆಲಸ ಮಾಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಲ್ಲಯ್ಯ ತಿಳಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ರಾಮು ಮಾತನಾಡಿ, ಬಮೂಲ್ ನಿರ್ದೇಶಕ ಹರೀಶ್ ಕುಮಾರ್ ದಬ್ಬಾಳಿಕೆ ನಡೆಸುವುದನ್ನು ಬಿಡಬೇಕು ಎಂದು ತಿಳಿಸಿದರು.

ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಮಾತನಾಡಿ, ಸಮಸ್ಯೆ ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದರು. ರೈತ ಸಂಘದ ಮುಖಂಡರಾದ ಎಂ. ಪುಟ್ಟಸ್ವಾಮಿ, ನಂಜಪ್ಪ, ಹಾಲು ಉತ್ಪಾದಕರಾದ ಶಶಿಕುಮಾರ್, ಶಿವರಾಜು, ಸವಿತಾ, ವೀಣಾ, ಇಂದ್ರ, ಪಚ್ಚಮ್ಮ, ರವಿ, ಮಹದೇವ, ಗವಿರಾಜು, ನಾಗರಾಜು, ಸಿದ್ದಬಸವನೇಗೌಡ, ಶ್ರೀನಿವಾಸ್, ವೆಂಕಟೇಶ್, ದುಂಡೇಶ್, ನಂಜುಂಡೇಗೌಡ, ಶಿವಾನಂದ, ಬಾಳೇಗೌಡ, ಬಸವರಾಜು ಇದ್ದರು.

ಡೇರಿಗೆ ನಾನು ನಿರ್ದೇಶಕನಾಗಿರುವುದೇ ಗೊತ್ತಿಲ್ಲ. ಸಭೆಯ ಮಾಹಿತಿಯೂ ಇಲ್ಲ. ಇಲ್ಲಿ ಕಾರ್ಯದರ್ಶಿಯನ್ನು ಪ್ರಶ್ನಿಸಿದವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ
- ಶಿವರಾಜು,ಡೇರಿ ನಿರ್ದೇಶಕ, ಅಗರ

ಪ್ರತಿ ವರ್ಷ ಡೇರಿಯ ಲೆಕ್ಕಪರಿಶೋಧನೆ ಮಾಡಿಸಿ ವಿವರ ನೀಡುತ್ತಿದ್ದೇನೆ. ಯಾವುದನ್ನೂ ಮುಚ್ಚಿಟ್ಟಿಲ್ಲ. 20 ವರ್ಷದ ಲೆಕ್ಕ ಈಗ ಕೇಳಿದರೆ ಎಲ್ಲಿಂದ ಕೊಡಲಿ
- ವೆಂಕಟಾಚಲ, ಡೇರಿ ಕಾರ್ಯದರ್ಶಿ, ಅಗರ

ರೈತರಿಗೆ ಅನ್ಯಾಯ ಆಗಿದ್ದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಬಮುಲ್‌ ಶಿಬಿರದಿಂದ ಮಾಹಿತಿ ನೀಡಲು ನಾವು ಸಿದ್ಧರಿದ್ದೇವೆ
- ಎಚ್‌.ಎಸ್‌. ಹರೀಶ್‌ಕುಮಾರ್‌, ಬಮುಲ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.