ADVERTISEMENT

ದೇವಾಲಯದ ಸುತ್ತ ಸ್ವಚ್ಛತಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 13:28 IST
Last Updated 6 ಡಿಸೆಂಬರ್ 2019, 13:28 IST
ಅರಳಾಳು ಆದಿ ನಾರಾಯಣ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ರೂರಲ್‌ ಕಾಲೇಜು ಎನ್‌ಸಿಸಿ ವಿದ್ಯಾರ್ಥಿಗಳು
ಅರಳಾಳು ಆದಿ ನಾರಾಯಣ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ರೂರಲ್‌ ಕಾಲೇಜು ಎನ್‌ಸಿಸಿ ವಿದ್ಯಾರ್ಥಿಗಳು   

ಕನಕಪುರ: ರಾಜರ ಕಾಲದಲ್ಲಿ ಧರ್ಮದ ಸಹಿಷ್ಣುತೆಗಾಗಿ ನಮ್ಮ ಕಲಾ ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವದ ಸಂಕೇತವಾಗಿ ಪ್ರಸಿದ್ಧ ದೇವಾಲಯವನ್ನು ಕಟ್ಟಿದ್ದಾರೆ. ಅವುಗಳನ್ನು ಜೋಪಾನವಾಗಿ ಕಾಪಾಡಿ ಮುಂದಿನ ತಲೆಮಾರಿನ ಜನತೆಗೆ ಕೊಡಬೇಕಿದೆ ಎಂದು ರೂರಲ್‌ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಗೋವಿಂದಪ್ಪ ತಿಳಿಸಿದರು.

ಇಲ್ಲಿನ ಅರಳಾಳು ಗ್ರಾಮದಲ್ಲಿನ ಪುರಾತನವಾದ ಆದಿ ನಾರಾಯಣ ದೇವಾಲಯದಲ್ಲಿ ರೂರಲ್‌ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಗುರುವಾರ ‘ಇತಿಹಾಸ ಪ್ರಸಿದ್ಧ ಸ್ಥಳಗಳ ಸಂರಕ್ಷಣೆ ಮತ್ತು ಸ್ವಚ್ಛತೆ ಕಾರ್ಯಕ್ರಮ’ದಡಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮ್ಮ ದೇಶ ಸಾಂಸ್ಕೃತಿಕ ನಾಡಾಗಿದ್ದು ದೇವಾಲಯಗಳನ್ನು ವಿಶಿಷ್ಟ ಕಲಾ ವಿನ್ಯಾಸದೊಂದಿಗೆ ನಿರ್ಮಾಣ ಮಾಡಿದ್ದಾರೆ. ಅಂತಹ ವಾಸ್ತುಶಿಲ್ಪ, ಕಲ್ಲುಗಳ ಕೆತ್ತನೆ ಮತ್ತೆಲ್ಲೂ ಸಿಗುವುದಿಲ್ಲ. ಇಂತಹ ದೇವಾಲಯಗಳನ್ನು ನಾಶವಾಗದಂತೆ ನಾವು ಜೋಪಾನ ಮಾಡಬೇಕು’ ಎಂದು ಹೇಳಿದರು.

‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಂದು ಇಲ್ಲಿ ದೇವಾಲಯದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿ ಚೆನ್ನಾಗಿ ಮಾಡಿದ್ದಾರೆ. ಗ್ರಾಮದ ಜನತೆಯು ಇದೇ ರೀತಿ ನಿರ್ವಹಣೆ ಮಾಡಿಕೊಂಡು ಹೋಗಬೇಕು’ ಎಂದು ಹೇಳಿದರು.

ಎನ್‌ಸಿಸಿ ಯ 70 ವಿದ್ಯಾರ್ಥಿಗಳು ಲೆಪ್ಟಿನೆಂಟ್‌ ವಿಜೇಂದ್ರ ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಪರಿಸರ ಸ್ವಚ್ಛತೆ ಮತ್ತು ಇತಿಹಾಸ ಪ್ರಸಿದ್ಧ ಸ್ಥಳಗಳ ಸಂರಕ್ಷಣೆ ಕುರಿತು ಬ್ಯಾನರ್‌ಗಳನ್ನು ಹಿಡಿದು ಮತ್ತು ಕರಪತ್ರಗಳನ್ನು ಹಂಚಿ ಅರಳಾಳು ಗ್ರಾಮದಲ್ಲಿ ಪಥ ಸಂಚಲನ ನಡೆಸಿ ಜನಜಾಗೃತಿ ಮೂಡಿಸಿದರು.

ಅರಳಾಳು ಗ್ರಾಮಸ್ಥರಾದ ಜಯರಾಮು, ಶ್ರೀನಿವಾಸ, ಬಸವರಾಜು, ಪ್ರಶಾಂತ್‌, ಚಿಕ್ಕಯ್ಯ, ಮೃತ್ಯಂಜಯ, ಬೋರೇಗೌಡ, ಗೋಪಾಲ, ಕೃಷ್ಣಪ್ಪ, ಸುರೇಶ್‌, ಮಲ್ಲೇಶ್‌, ಅರ್ಚಕ ದಯಾನಿಧಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.