
ಚನ್ನಪಟ್ಟಣ: ಭಾರತ ವಿಕಾಸ ಪರಿಷದ್ ಕಣ್ವ ಶಾಖೆಯ ವತಿಯಿಂದ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೂರಣಗೆರೆ ನರಸಿಂಹಸ್ವಾಮಿ ಬೆಟ್ಟದ ಮೇಲಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ, ದೇವಾಲಯ ಪ್ರಾಂಗಣದ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಗುರುವಾರ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಪ್ರಾಣಿ ಪಕ್ಷಿಗಳಿಗೆ ಆಹಾರ, ನೆರಳು ಸಿಗಲೆಂಬ ಕಾರಣಕ್ಕೆ ಸೀಬೆ, ನೆರಳೆ, ಹಲಸು, ಹೊಂಗೆ, ಹುಣಸೆ ಸಸಿಗಳನ್ನು ನೆಟ್ಟು, ನೀರೆರೆಯುವ ಮೂಲಕ ಪ್ರಕೃತಿ ಉಳಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು. ಜೊತೆಗೆ ದೇವಾಲಯದ ಆವರಣದಲ್ಲಿ ಕಸವನ್ನು ತೆಗೆದು, ಬೇಡವಾದ ಸಸ್ಯಗಳನ್ನು ಕಿತ್ತು ಸ್ವಚ್ಛಗೊಳಿಸಲಾಯಿತು. ಬೆಟ್ಟದ ಮೇಲೆ ಬಿಸಾಡಿದ್ದ ಪ್ಲಾಸ್ಟಿಕ್ ಬಾಟಲಿ, ಚೀಲ, ಕವರ್ ಮೊದಲಾದ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.
ಭಾವಿಪ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಅರಣ್ಯ ನಾಶದಿಂದಲೇ ಕಾಡು ಪ್ರಾಣಿಗಳು ನಾಡಿಗೆ ಧಾವಿಸುತ್ತಿವೆ. ಪರಿಸರ ಮಾಲಿನ್ಯದಿಂದ ಪಕ್ಷಿ, ಪ್ರಾಣಿಗಳ ಸಂತತಿಯೂ ನಶಿಸುತ್ತಿದೆ. ಗಿಡಮರಗಳನ್ನು ಹೆಚ್ಚು ಬೆಳೆಸುವುದರಿಂದ ಕಾಡು ಉಳಿಯುತ್ತದೆ. ಜೊತೆಗೆ ಮುಂದಿನ ಪೀಳಿಗೆ ಉಳಿಯಬೇಕಾದರೆ ಎಲ್ಲರೂ ಪರಿಸರವನ್ನು ಕಾಪಾಡಬೇಕು ಎಂದರು.
ಭಾವಿಪ ಕಣ್ವ ಶಾಖೆಯ ಪರಿಸರ ಸಂಚಾಲಕ ಕೂರಣಗೆರೆ ಕೃಷ್ಣಪ್ಪ ಮಾತನಾಡಿ, ಪರಿಸರ ದಿನವನ್ನು ಧಾರ್ಮಿಕ ಕೇಂದ್ರಗಳನ್ನು ಸ್ವಚ್ಛ ಮಾಡುವ ಮೂಲಕ ವಿಶೇಷವಾಗಿ ಆಚರಿಸಿ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಯೋಗೇಶ್ ಚಕ್ಕೆರೆ, ವಸಂತ್ ಕುಮಾರ್, ವಿ.ಟಿ. ರಮೇಶ್, ಕರಿಯಪ್ಪ, ಬಿ.ಎನ್. ಕಾಡಯ್ಯ, ಪುಟ್ಟಲಿಂಗೇಗೌಡ, ಸಿದ್ದರಾಮೇಗೌಡ, ಗುರುಮಾದಯ್ಯ, ಗೋವಿಂದಯ್ಯ, ತಿಪ್ರೇಗೌಡ, ಕೃಷ್ಣಕುಮಾರ್, ಬಸವರಾಜು, ಪುಟ್ಟಸ್ವಾಮಿಗೌಡ, ಅರೇಂದ್ರಗೌಡ, ಕೂರಣಗೆರೆ ಪುಟ್ಟಸ್ವಾಮಿ, ಚಕ್ಕಲೂರು ಕೃಷ್ಣಪ್ಪ, ಡಾ.ಲಿಖಿತ್, ಚಿನ್ಮಯ್, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.