ADVERTISEMENT

ಕಾಯಿಲೆ ತಡೆಗಟ್ಟಲು ಸ್ವಚ್ಛತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 13:44 IST
Last Updated 3 ಜುಲೈ 2019, 13:44 IST
ತೋಕಸಂದ್ರ ಗ್ರಾಮದಲ್ಲಿ ಪಂಚಾಯಿತಿ ಅಧ್ಯಕ್ಷ ಸೋಮನಾಯ್ಕ್‌ ರಥಕ್ಕೆ ಚಾಲನೆ ನೀಡಿದರು
ತೋಕಸಂದ್ರ ಗ್ರಾಮದಲ್ಲಿ ಪಂಚಾಯಿತಿ ಅಧ್ಯಕ್ಷ ಸೋಮನಾಯ್ಕ್‌ ರಥಕ್ಕೆ ಚಾಲನೆ ನೀಡಿದರು   

ಕನಕಪುರ: ‘ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕಿದೆ. ಪರಿಸರ ಸ್ವಚ್ಛತೆಯ ಜಾಗೃತಿಗಾಗಿ ತಾಲ್ಲೂಕು ಪಂಚಾಯಿತಿ ವತಿಯಿಂದ ಜಾಗೃತಿ ಮೂಡಿಸುವ ರಥವು ಪ್ರತಿ ಗ್ರಾಮಗಳಿಗೆ ಬರುತ್ತಿದೆ’ ಎಂದು ಪಂಚಾಯಿತಿ ಅಧ್ಯಕ್ಷ ಸೋಮನಾಯ್ಕ್‌ ತಿಳಿಸಿದರು.

ತಾಲ್ಲೂಕಿನ ತೋಕಸಂದ್ರ ಗ್ರಾಮ ಪಂಚಾಯಿತಿಗೆ ಬುಧವಾರ ಬಂದಿದ್ದ ‘ಸ್ವಚ್ಛಮೇವ ಜಯತೆ ರಥ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜನರು ಮಲ ಮೂತ್ರ ವಿಸರ್ಜನೆಗೆ ಬಹಿರ್ದೆಸೆಗೆ ಹೋಗುವುದನ್ನು ತಡೆಗಟ್ಟಲು ಪ್ರತಿ ಕುಟುಂಬಕ್ಕೊಂದು ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಧನ ಸಹಾಯ ನೀಡಲಾಗಿದೆ. ಗ್ರಾಮಗಳಲ್ಲಿ ಬಹುತೇಕವಾಗಿ ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದು ಜನತೆ ಅದನ್ನು ಕಡ್ಡಾಯವಾಗಿ ಬಳಸಬೇಕು’ ಎಂದು ಹೇಳಿದರು.

ADVERTISEMENT

ಜೆಡಿಎಸ್‌ ಮುಖಂಡ ಶಿವರುದ್ರೇಗೌಡ ಮಾತನಾಡಿ, ‘ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ನಮಗೆ ಹೆಚ್ಚು ಲಾಭವಾಗಲಿದೆ. ನಮ್ಮ ಮನೆಯ ಸುತ್ತ ಚರಂಡಿಗಳಲ್ಲಿ ನೀರು ನಿಲ್ಲದಂತೆ, ಕಸ ಕೊಳೆಯದಂತೆ ನೋಡಿಕೊಳ್ಳಬೇಕು. ಇದರಿಂದ ಮಳೆಗಾಲದಲ್ಲಿ ಡೆಂಗಿ, ಸಾಂಕ್ರಾಮಿಕ ಕಾಯಿಲೆ ಹರಡುವುದನ್ನು ತಡೆಗಟ್ಟಬಹುದಾಗಿದೆ. ಸಾರ್ವಜನಿಕರು ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರಯ್ಯ ಮಾತನಾಡಿ, ‘ಸ್ವಚ್ಛತೆ ಕಾಪಾಡುವುದು ಹೇಗೆ, ಅದರಿಂದ ಏನು ಲಾಭವಿದೆ ಎಂಬುದನ್ನು ತಿಳಿಸಿಕೊಡಲು ಸ್ವಚ್ಛಮೇವ ಜಯತೆ ರಥವು ಗ್ರಾಮ ಪಂಚಾಯಿತಿಯ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಭಿತ್ತಿಪತ್ರ ಹಂಚಿ ಮೈಕ್‌ನಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಮಾಹಿತಿಯನ್ನು ಜನತೆ ಪಡೆದುಕೊಳ್ಳಬೇಕು’ ಎಂದರು.

ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ರಥ ಸಂಚರಿಸಿತು. ಪಂಚಾಯಿತಿ ಸದಸ್ಯ ಮಣಿಯಂಬಾಳ್‌ ಬಸವರಾಜು, ನರೇಗಾ ಎಂಜಿನಿಯರ್‌ ಹೇಮಂತ್‌, ಕರವಸೂಲಿಗಾರ ಶಿವರುದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.