ADVERTISEMENT

ರಾಮನಗರ | ನಗರಸಭೆಯಿಂದ ಖಾಲಿ ನಿವೇಶನ ಸ್ವಚ್ಛತೆ;

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 13:35 IST
Last Updated 29 ಜನವರಿ 2025, 13:35 IST
ರಾಮನಗರದ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿ ತೆರವು ಕಾರ್ಯಾಚರಣೆಯನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ ಹಾಗೂ ಸದಸ್ಯರು ವೀಕ್ಷಿಸಿದರು. ಪರಿಸರ ಎಂಜಿನಿಯರ್ ಸುಬ್ರಮಣ್ಯ, ಆರೋಗ್ಯ ನಿರೀಕ್ಷಕ ವಿಜಯಕುಮಾರ್ ಇದ್ದಾರೆ
ರಾಮನಗರದ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿ ತೆರವು ಕಾರ್ಯಾಚರಣೆಯನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ ಹಾಗೂ ಸದಸ್ಯರು ವೀಕ್ಷಿಸಿದರು. ಪರಿಸರ ಎಂಜಿನಿಯರ್ ಸುಬ್ರಮಣ್ಯ, ಆರೋಗ್ಯ ನಿರೀಕ್ಷಕ ವಿಜಯಕುಮಾರ್ ಇದ್ದಾರೆ   

ರಾಮನಗರ: ನಗರದಲ್ಲಿರುವ ಖಾಲಿ ನಿವೇಶನ ಸೇರಿದಂತೆ ಖಾಲಿ ಸ್ಥಳಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳ ತೆರವು ಕಾರ್ಯಾಚರಣೆಗೆ ನಗರಸಭೆ ಚಾಲನೆ ನೀಡಿದೆ. ಒಂದೂವರೆ ತಿಂಗಳ ಹಿಂದೆ ನಗರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿತ್ತು. ಮೂರು ದಿನಗಳ ಹಿಂದೆ ನಡೆದ ಸಾಮಾನ್ಯಸಭೆಯಲ್ಲಿ ಗಿಡಗಂಟಿ ತೆರವಿಗೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ, ಕಾರ್ಯಾಚರಣೆ ಶುರುವಾಗಿದೆ.

ನಗರದಲ್ಲಿ ಬುಧವಾರ ಬೆಳಿಗ್ಗೆ ಪ್ರದಕ್ಷಿಣೆ ಹಾಕಿದ ಶಶಿ ಅವರು, ವಿವಿಧೆಡೆ ನಡೆಯುತ್ತಿರುವ ಗಿಡಗಂಟಿ ತೆರವು ಕಾರ್ಯಾಚರಣೆ ಪರಿಶೀಲಿಸಿದರು. ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರಾದ ಅಸ್ಮತ್‌ಉಲ್ಲಾ ಖಾನ್, ಸೋಮಶೇಖರ್ ಮಣಿ, ಫೈರೋಜ್ ಪಾಷ, ಮುತ್ತುರಾಜ್ ಸಾಥ್ ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಶಿ, ‘ನಗರವನ್ನು ಸ್ವಚ್ಛ ಹಾಗೂ ಸುಂದರಗೊಳಿಸುವ ಸಂಕಲ್ಪದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಕಸದ ತಿಪ್ಪೆಯಾಗಿರುವ ಖಾಲಿ ನಿವೇಶನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ಗಿಡಗಂಟಿಗಳು ನಗರದ ಅಂದಗೆಡಿಸಿದ್ದು, ಅವುಗಳ ತೆರವಿಗೆ ಚಾಲನೆ ನೀಡಲಾಗಿದೆ’ ಎಂದರು.

ADVERTISEMENT

‘ನಗರದಲ್ಲಿ ಸುಮಾರು 1,500 ಖಾಲಿ ನಿವೇಶನಗಳನ್ನು ಗುರುತಿಸಲಾಗಿದೆ. ಬಹುತೇಕ ನಿವೇಶನಗಳು ಕಸ ಎಸೆಯುವ ತಾಣ ಅಥವಾ ಗಿಡಗಂಟಿ ಬೆಳೆದು ನಿಂತು ಹಾವು, ಹೆಗ್ಗಣ, ಇಲಿಗಳ ಆವಾಸಸ್ಥಾನವಾಗಿವೆ. ಬೀದಿ ನಾಯಿ ಹಾಗೂ ಹಂದಿಗಳ ಆಹಾರದ ಅಡ್ಡವಾಗಿರುವ ಈ ನಿವೇಶನಗಳು ಸೊಳ್ಳೆಗಳ ತಾಣವಾಗಿದ್ದು, ಅಕ್ಕಪಕ್ಕದ ನಿವಾಸಿಗಳಿಂದ ದೂರು ಬರುತ್ತಿದ್ದವು’ ಎಂದು ತಿಳಿಸಿದರು.

‘ಈಗಾಗಲೇ 100ಕ್ಕೂ ಹೆಚ್ಚು ನಿವೇಶನಗಳನ್ನು ಸ್ವಚ್ಛಗೊಳಿಸಲಾಗಿದೆ. ನಗರಸಭೆಯ ಈ ಕಾರ್ಯಾಚರಣೆಗೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಉತ್ಸಾಹದಿಂದ ಕೈ ಜೋಡಿಸಿದ್ದಾರೆ. ನಾಗರಿಕರು ಸಹ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಹೇಳಿದರು.

ಪರಿಸರ ಎಂಜಿನಿಯರ್ ಸುಬ್ರಮಣ್ಯ, ಆರೋಗ್ಯ ನಿರೀಕ್ಷಕರಾದ ವಿಜಯಕುಮಾರ್, ದಿಲೀಪ್ ನದಾಫ, ಲಕ್ಷ್ಮೀಪತಿ ಹಾಗೂ ಇತರರು ಇದ್ದರು.

‘ನಾಗರಿಕರ ಸಹಭಾಗಿತ್ವ ಮುಖ್ಯ’

‘ನಗರದ ಸ್ವಚ್ಛತೆ ಕಾಪಾಡುವ ಸಲುವಾಗಿ ನಗರಸಭೆಯು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಜನರು ಬೆಳಿಗ್ಗೆ ರಸ್ತೆಗಿಳಿಯುವುದಕ್ಕೆ ಮುಂಚೆಯೇ ನಸುಕಿನಲ್ಲಿ ಪೌರ ಕಾರ್ಮಿಕರು ಬೀದಿಗಿಳಿದು ಮುಖ್ಯರಸ್ತೆಗಳು ಹಾಗೂ ಬೀದಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಇದೀಗ ಖಾಲಿ ನಿವೇಶನಗಳ ಸ್ವಚ್ಛತೆ ಆರಂಭಿಸಲಾಗಿದೆ. ಇದಕ್ಕೆ ನಾಗರಿಕರ ಸಹಭಾಗಿತ್ವವೂ ಮುಖ್ಯ. ಒಮ್ಮೆ ಮಾತ್ರ ನಿವೇಶನ ಸ್ವಚ್ಛಗೊಳಿಸಲಾಗುವುದು. ಮಾಲೀಕರು ಸರಿಯಾಗಿ ನಿರ್ವಹಣೆ ಮಾಡದೆ ಮತ್ತೆ ಪಾಳು ಬಿಟ್ಟರೆ ದಂಡ ವಿಧಿಸಲಾಗುವುದು’ ಎಂದು ಕೆ. ಶೇಷಾದ್ರಿ ಶಶಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.