ADVERTISEMENT

ರಾಮನಗರ | ‘ಗ್ಯಾರಂಟಿ’ಯಿಂದ ಮಹಿಳಾ ಸಬಲೀಕರಣ: ಸೌಮ್ಯ ರೆಡ್ಡಿ

‘ಕೈ’ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತರ ಜೊತೆ ಸಭೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 2:24 IST
Last Updated 18 ಆಗಸ್ಟ್ 2025, 2:24 IST
ರಾಮನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಅವರು ಭಾನುವಾರ ಭೇಟಿ ನೀಡಿ, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು ಹಾಗೂ ಇತರರು ಇದ್ದಾರೆ
ರಾಮನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಅವರು ಭಾನುವಾರ ಭೇಟಿ ನೀಡಿ, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು ಹಾಗೂ ಇತರರು ಇದ್ದಾರೆ   

ರಾಮನಗರ: ‘ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಮಹಿಳಾ ಸಮಾನತೆಗೂ ಗ್ಯಾರಂಟಿ ಯೋಜನೆಗಳು ಕೊಡುಗೆ ದೊಡ್ಡದು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಕಾಂಗ್ರೆಸ್ ಕಚೇರಿಗೆ ಭಾನುವಾರ ಭಾನುವಾರ ಭೇಟಿ ನೀಡಿ ಮಹಿಳಾ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯದ ಕೋಟ್ಯಂತರ ಜನರು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ. ಕೋವಿಡ್‌ನಿಂದ ತತ್ತರಿಸಿದ್ದವರ ಬದುಕಿಗೆ ನಮ್ಮ ಯೋಜನೆಗಳು ಆಸರೆಯಾಗಿವೆ’ ಎಂದರು.

‘ರಾಜ್ಯದಲ್ಲಿ ಮಹಿಳಾ ಕ್ರಾಂತಿ ಪ್ರಾರಂಭವಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಆಸಕ್ತಿ ತೋರುತ್ತಿದ್ದಾರೆ. ಮಹಿಳೆಯರು ಶೈಕ್ಷಣಿಕವಾಗಿ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಹೆಣ್ಣು ಕುಟುಂಬದ ಕಣ್ಣಿದ್ದಂತೆ. ಮಹಿಳೆಯರು ಸ್ವಾವಲಂಬಿಗಳಾದಾಗ ಮಾತ್ರ ಕುಟುಂಬ ಮತ್ತು ಸಮಾಜಕ್ಕೆ ಆರ್ಥಿಕ ಶಕ್ತಿ ಬರುತ್ತದೆ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್ ಪಕ್ಷವು ಮಹಿಳೆಯರನ್ನು ಎಲ್ಲಾ ರೀತಿಯಲ್ಲೂ ಮುಂದೆ ತರಬೇಕು ಎಂಬ ಆಶಯ ಹೊಂದಿದೆ. ಅದಕ್ಕಾಗಿಯೇ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ವಿಶೇಷ ಒತ್ತು ನೀಡಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರ, ಕೌಶಲಾಭಿವೃದ್ಧಿ ಕಾರ್ಯಕ್ರಮ, ಗ್ಯಾರಂಟಿ ಯೋಜನೆಯ ಹಣದಿಂದ ಸಣ್ಣಪುಟ್ಟ ಸ್ವಯಂ ಉದ್ಯೋಗ ಆರಂಭಿಸಿರುವ ಹಲವು ಮಹಿಳೆಯರಿಗೆ ನೆರವು ನೀಡುವ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಯಿತು’ ಎಂದರು.

‘ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿನ ಪ್ರಮಾಣದ ಮಹಿಳೆಯರು ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿದ್ದಾರೆ. ತೆಲಂಗಾಣದ ಬಳಿಕ ಹೆಚ್ಚಿನ ಸಂಖ್ಯೆಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಇರುವ ರಾಜ್ಯ ಕರ್ನಾಟಕವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮಹಿಳಾ ಕ್ರಾಂತಿ ಪ್ರಾರಂಭವಾಗಿದೆ. ಸದಸ್ಯತ್ವ ಹೆಚ್ಚಿಸಲು ವಿಶೇಷ ಆದ್ಯತೆ ನೀಡಲಾಗಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೇ ಹೆಚ್ಚಿನ ಅನುಕೂಲಗಳಾಗಿವೆ. ಯೋಜನೆಗಳ ಪ್ರಯೋಜನ ಪಡೆದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಬೀಡಿ ಕಾರ್ಮಿಕರಿಗೆ ಕಡಿಮೆ ವೇತನವಿದ್ದು ಸಂಕಷ್ಟದಲ್ಲಿದ್ದಾರೆ. ಅವರಿಗೆ ಹೆಚ್ಚಿನ ಸವಲತ್ತು ಒದಗಿಸುವ ಕುರಿತು ಚಿಂತನೆ ನಡೆಸಬೇಕಿದೆ’ ಎಂದು ಸಲಹೆ ನೀಡಿದರು.

‍ಪಕ್ಷದ ಮಹಿಳಾ ಮುಖಂಡರಾದ ಕೋಕಿಲರಾಣಿ, ರೋಹಿಣಿ ಪ್ರಿಯಾ, ಸುಧಾ, ಲೇಕಾ, ಗಾಯತ್ರಿ, ಅನುಸೂಯ, ಮಂಜೀತಾ, ಅರ್ಪಿತಾ, ಫರ್ಹಾನ್, ಲೀಲಾವತಿ ಹಾಗೂ ಕಾರ್ಯಕರ್ತರು ಇದ್ದರು.

‘ಬಿಜೆಪಿಯ ಮತಗಳ್ಳತನದ ಸಾಕ್ಷ್ಯ ಬಿಚ್ಚಿಟ್ಟ ರಾಹುಲ್’:

‘ಬಿಜೆಪಿಯವರು ಚುನಾವಣೆಗಳಲ್ಲಿ ಹೇಗೆ ಮತಗಳ್ಳತನ ಮಾಡಿ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ ಎಂಬುದನ್ನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಸಾಕ್ಷ್ಯ ಸಮೇತ ದೇಶದ ಜನರ ಮುಂದಿಟ್ಟಿದ್ದಾರೆ. ಜನರಿಗೂ ಬಿಜೆಪಿಯ ಚುನಾವಣೆಯ ಮರ್ಮ ಏನೆಂಬುದು ಈಗ ಗೊತ್ತಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನ ಗೆಲುವಿನ ಬಳಿಕ ಬಿಜೆಪಿಯವರು ಮತಗಳ್ಳತನ ಮೂಲಕ ಏನು ಮಾಡಿದರು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಬಿಜೆಪಿಯ ಈ ಕಳ್ಳಹಾದಿ ಮುಂದೆ ಅವರಿಗೇ ಮುಳುವಾಗಲಿದೆ’ ಎಂದು ಸೌಮ್ಯಾ ರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.