ADVERTISEMENT

ಕನಕಪುರ: ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಸಹಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 2:19 IST
Last Updated 28 ಸೆಪ್ಟೆಂಬರ್ 2025, 2:19 IST
ಕನಕಪುರದ ಕೋಡಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ವತಿಯಿಂದ ಶುಕ್ರವಾರ ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯಿತು 
ಕನಕಪುರದ ಕೋಡಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ವತಿಯಿಂದ ಶುಕ್ರವಾರ ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯಿತು    

ಕನಕಪುರ: ಮತಗಳ್ಳತನ ವಿರೋಧಿಸಿ, ಪ್ರಜಾಪ್ರಭುತ್ವ ಉಳಿಸಿ ಅಭಿಯಾನದ ಸಹಿ ಸಂಗ್ರಹ ಅಭಿಯಾನವನ್ನು ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಸಾತನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಯಿತು. 

ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾತನೂರು ನಾಗರಾಜು ಸಹಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 

‘ಬಿಜೆಪಿ ಪಕ್ಷವು ರಾಜ್ಯದಲ್ಲೂ ಮತಗಳ್ಳತನ ಮಾಡಿದೆ. ತಾನು ಸೋಲುವ ಭೀತಿ ಇರುವ ಕ್ಷೇತ್ರಗಳಲ್ಲಿ ತಮಗೆ ಬೇಕಾದ ಮತದಾರರನ್ನು ಸೇರಿಸಿ, ತಮ್ಮ ಪಕ್ಷಕ್ಕೆ ಮತ ಬಾರದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿಸಿದೆ’ ಎಂದು ಆರೋಪಿಸಿದರು. 

ADVERTISEMENT

ಮಹದೇವಪುರ ಕ್ಷೇತ್ರ ಒಂದರಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಮತದಾರರನ್ನು ಸೇರಿಸಿರುವುದು ದೃಢಪಟ್ಟಿದೆ. ಇದರಿಂದ ಚುನಾವಣಾ ಆಯೋಗವು ಮತಗಳ್ಳತನಕ್ಕೆ ಅವಕಾಶ ನೀಡಿರುವುದು ಗೊತ್ತಾಗುತ್ತದೆ ಎಂದರು. 

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಮತಗಳ್ಳತನ ಮಾಡಿ ಅಕ್ರಮವಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಮತಗಳ್ಳತನ ಆಗಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. 

‘ಮತಗಳ್ಳತನದ ವಿರುದ್ಧ ನಮ್ಮ ನಾಯಕ ರಾಹುಲ್ ಗಾಂಧಿ ಹೋರಾಟ ನಡೆಸುತ್ತಿದ್ದು, ನಮ್ಮ ರಾಜ್ಯದಲ್ಲೂ ಮತಗಳ್ಳತನದ ವಿರುದ್ಧ ಹಾಗೂ ಸಂವಿಧಾನವನ್ನು ಉಳಿಸುವಂತೆ ಒತ್ತಾಯಿಸಿ, ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸಪ್ಪ, ಕೆ.ಎಂ.ರಾಜೇಂದ್ರ, ಮುನಿ ಹುಚ್ಚೇಗೌಡ, ಶ್ರೀನಿವಾಸ್, ರಮೇಶ್, ರುದ್ರೇಶ್ ಅರಕೆರೆ, ಮಾದೇಶ್, ಸೋಮಶೇಖರ್, ಮಲ್ಲೇಶ್, ಅಶೋಕ್, ಜಮೀರ್, ರೂಪ, ಉಷಾ, ಅಭಿಷೇಕ್, ಸಾಗರ್, ಕಿರಣ್, ಅಪ್ಪಿ, ಸಾಕಿಬ್ ಪಾಷಾ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.