ADVERTISEMENT

ಮುನಿರತ್ನ ಶಾಸಕ ಸ್ಥಾನ ರದ್ದುಪಡಿಸಿ: ಕಾಂಗ್ರೆಸ್ ಎಸ್‌ಸಿ–ಎಸ್‌ಟಿ ಘಟಕ ಆಗ್ರಹ

ಜಾತಿ ನಿಂದನೆ ಪ್ರಕರಣ: ಜಿಲ್ಲಾ ಕಾಂಗ್ರೆಸ್ ಎಸ್‌ಸಿ–ಎಸ್‌ಟಿ ಘಟಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 7:22 IST
Last Updated 18 ಸೆಪ್ಟೆಂಬರ್ 2024, 7:22 IST
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಎಸ್‌ಸಿ ಮತ್ತು ಎಸ್‌ಟಿ ಘಟಕದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಘಟಕದ ಅಧ್ಯಕ್ಷ ಎನ್. ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಸಿ. ಜಯರಾಮು, ಉಪಾಧ್ಯಕ್ಷ ಜಯಚಂದ್ರ, ಮುಖಂಡ ಶಿವಕುಮಾರ ಸ್ವಾಮಿ ಹಾಗೂ ಇತರರು ಇದ್ದಾರೆ
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಎಸ್‌ಸಿ ಮತ್ತು ಎಸ್‌ಟಿ ಘಟಕದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಘಟಕದ ಅಧ್ಯಕ್ಷ ಎನ್. ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಸಿ. ಜಯರಾಮು, ಉಪಾಧ್ಯಕ್ಷ ಜಯಚಂದ್ರ, ಮುಖಂಡ ಶಿವಕುಮಾರ ಸ್ವಾಮಿ ಹಾಗೂ ಇತರರು ಇದ್ದಾರೆ   

ರಾಮನಗರ: ‘ದಲಿತ ಗುತ್ತಿಗೆದಾರನಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಶಾಸಕ ಸ್ಥಾನವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ರಾಮನಗರ ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಪ್ರಧಾನ ಕಾರ್ಯದರ್ಶಿ ಸಿ. ಜಯರಾಮು ಆಗ್ರಹಿಸಿದರು.

‘ಸಂವಿಧಾನದ ಆಶಯಕ್ಕೆ ಹಾಗೂ ಈ ನೆಲದ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿರುವ ಮುನಿರತ್ನ, ಅದಕ್ಕೆ ವ್ಯತಿರಿಕವಾಗಿ ನಡೆದುಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕವಾಗಿರುವ ಇಂತಹ ಜನಪ್ರತಿನಿಧಿ ವಿಧಾನಸೌಧದಲ್ಲಿ ಇರಲು ಯೋಗ್ಯತೆ ಇಲ್ಲ’ ಎಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮುನಿರತ್ನ ಹಾಗೂ ಅವರ ತಮ್ಮ ಕೊರಂಗು ಕೃಷ್ಣ ಇಬ್ಬರೂ ರೌಡಿಗಳೇ. ಕಾಲ ಬದಲಾದಂತೆ ಬಿಬಿಎಂಪಿಯಲ್ಲಿ ಗುತ್ತಿಗೆದಾರನಾದ ಮುನಿರತ್ನ ನಂತರ ರಾಜಕೀಯ ಪ್ರವೇಶಿಸಿದರೆ, ಸಹೋದರ ರೌಡಿಸಂನಲ್ಲೇ ಮುಂದುವರಿದ. ರಾಜಕೀಯಕ್ಕೆ ಬಂದರೂ ಮುನಿರತ್ನ ತಮ್ಮ ವರ್ತನೆ, ದರ್ಪ ಹಾಗೂ ದೌರ್ಜನ್ಯ ಬಿಟ್ಟಿಲ್ಲ. ಇಂತಹ ನೀಚ ಪ್ರವೃತ್ತಿಯವರು ಜನಪ್ರತಿನಿಧಿಯಾಗಿದ್ದರೆ ಸಂವಿಧಾನಕ್ಕೆ ಅಪಚಾರ ಎಸಗಿದಂತೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪಕ್ಷದ ಮುಖಂಡ ಶಿವಕುಮಾರ ಸ್ವಾಮಿ ಮಾತನಾಡಿ, ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಮುನಿರತ್ನ ಮಾತುಗಳಲ್ಲಿ ಅಸ್ಪೃಶ್ಯತೆ ಆಚರಣೆ ಎದ್ದು ಕಾಣುತ್ತದೆ. ಒಕ್ಕಲಿಗ ಮತ್ತು ಪರಿಶಿಷ್ಟರನ್ನು ಎತ್ತಿ ಕಟ್ಟುವ ಕೆಲಸ ಮಾಡಿರುವ ಅವರು, ಸಮುದಾಯಗಳ ಮಧ್ಯೆ ದ್ವೇಷ ಬಿತ್ತಿದ್ದಾರೆ. ಚುನಾವಣೆಯಲ್ಲಿ ಅಕ್ರಮ ಎಸಗಿ ಗೆದ್ದಿರುವ ಮುನಿರತ್ನ ಕೃತ್ಯವನ್ನು ಇಡೀ ಸಮುದಾಯ ಖಂಡಿಸುತ್ತದೆ’ ಎಂದರು.

‘ಮುನಿರತ್ನ ಆಡಿಯೊ ಹೊರ ಬರುತ್ತಿದ್ದಂತೆ, ಒಕ್ಕೂಟದ ನೇತೃತ್ವದಲ್ಲಿ ರಾಮನಗರ ಟೌನ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ. ರಾಜ್ಯದಾದ್ಯಂತ ದೂರುಗಳು ದಾಖಲಾಗುತ್ತಲೇ ಇವೆ. ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ, ಮುಂದೆ ಯಾರೂ ಸಮುದಾಯದ ಕುರಿತು ಹಾಗೂ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡದಂತೆ ಸಂದೇಶ ನೀಡಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಎಸ್‌ಸಿ ಮತ್ತು ಎಸ್‌ಟಿ ಘಟಕದ ಉಪಾಧ್ಯಕ್ಷ ಜಯಚಂದ್ರ, ಮುಖಂಡರಾದ ಗುರುಮೂರ್ತಿ, ಮಾರುತಿ, ಪ್ರಕಾಶ್, ಗುಡ್ಡೆ ವೆಂಕಟೇಶ್, ರಾಮಕೃಷ್ಣ, ಶಿವಶಂಕರ್, ಶಿವಲಿಂಗಯ್ಯ ಹಾಗೂ ಇತರರು ಇದ್ದರು.

‘ಜಾತಿ ನಿಂದಕ ಶಾಸಕನ ಉಚ್ಛಾಟಿಸಲಿ’

‘ಬಿಜೆಪಿಯ ನಿಜವಾಗಿಯೂ ಶಿಸ್ತಿನ ಪಕ್ಷವಾಗಿದ್ದರೆ ದಲಿತ–ಒಕ್ಕಲಿಗ ಸಮುದಾಯ ಹಾಗೂ ಮಹಿಳೆಯರ ಬಗ್ಗೆ ಗೌರವ ಹೊಂದಿದ್ದರೆ ಕೂಡಲೇ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಕೇವಲ ನೋಟಿಸ್ ನೀಡಿ ಸುಮ್ಮನಾಗಿರುವುದು ಆ ಪಕ್ಷದ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ. ಮುನಿರತ್ನ ಪರ ವಕಾಲತ್ತು ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಜಾತಿ ನಿಂದಕ ಮುನಿರತ್ನ ಅವರ ಶಾಸಕ ಸ್ಥಾನ ರದ್ದುಪಡಿಸುವ ನಿಟ್ಟಿನಲ್ಲಿ ಸ್ಪೀಕರ್ ಮತ್ತು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು’ ಎಂದು ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎನ್. ನರಸಿಂಹಯ್ಯ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.