ADVERTISEMENT

ರಾಮನಗರ: 5 ಸಾವಿರ ದಾಟಿದ ಸೋಂಕಿತರ ಸಂಖ್ಯೆ!

ರಾಮನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸೋಂಕಿತರು; ಸಕ್ರಿಯ ಪ್ರಕರಣಗಳ ಪ್ರಮಾಣ ಇಳಿಮುಖ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 1:03 IST
Last Updated 21 ಸೆಪ್ಟೆಂಬರ್ 2020, 1:03 IST

ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಭಾನುವಾರ ಐದು ಸಾವಿರದ ಗಡಿ ದಾಟಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಆಗುತ್ತಿರುವುದು ಸಮಾಧಾನದ ಸಂಗತಿಯಾಗಿದೆ.

ಕಳೆದ ಆರು ತಿಂಗಳ ಅವಧಿಯಿಂದ ಕೋವಿಡ್‌ ಸೋಂಕು ಜಿಲ್ಲೆಯನ್ನು ಬಾಧಿಸುತ್ತಿದೆ. ಮೊದಲೆರಡು ತಿಂಗಳು ಯಾವುದೇ ಸೋಂಕಿತರು ಇರದೇ ಹಸಿರು ವಲಯದಲ್ಲಿದ್ದ ರಾಮನಗರದಲ್ಲಿ ದಿನ ಕಳೆದಂತೆ ಸೋಂಕಿತರ ಸಂಖ್ಯೆಯೂ ಉಲ್ಬಣಗೊಳ್ಳುತ್ತಲೇ ಹೋಗುತ್ತಿದೆ. ರಾಮನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸೋಂಕಿತರು ಪತ್ತೆ ಆಗಿದ್ದಾರೆ. ಇದೊಂದೇ ತಾಲ್ಲೂಕಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆಯು ಎರಡು ಸಾವಿರ ದಾಟಿದೆ. ಕನಕಪುರ ಹಾಗೂ ಚನ್ನಪಟ್ಟಣದಲ್ಲಿಯೂ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದೆ. ಆದರೆ ಆರಂಭದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸೋಂಕಿತರು ಕಂಡುಬಂದಿದ್ದ ಮಾಗಡಿ ತಾಲ್ಲೂಕಿನಲ್ಲಿ ಈಚೆಗೆ ಸೋಂಕು ನಿಯಂತ್ರಣಕ್ಕೆ ಬಂದಿರುವುದು ಸಮಾಧಾನದ ಸಂಗತಿಯಾಗಿದೆ.

ಸಕ್ರಿಯ ಪ್ರಕರಣಗಳು ಕಡಿಮೆ: ಜಿಲ್ಲೆಯಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾಗ್ಯೂ ಸಕ್ರಿಯ ಪ್ರಕರಣಗಳು ಕಡಿಮೆ ಆಗುತ್ತಿದೆ. ಭಾನುವಾರದ ಅಂತ್ಯಕ್ಕೆ ಕೇವಲ 848 ಮಂದಿ ಮಾತ್ರ ಜಿಲ್ಲೆಯ ವಿವಿಧ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ ದಾಖಲಾಗುವ ಪ್ರಕರಣಗಳ ಸಂಖ್ಯೆಗಿಂತ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಂದ ಗುಣಮುಖರಾಗಿ ಹೊರ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಸದ್ಯಕ್ಕೆ ಆಸ್ಪತ್ರೆ ಹಾಗೂ ಹಾಸಿಗೆಗಳ ಕೊರತೆಯಾಗಿಲ್ಲ.

ADVERTISEMENT

ತಪಾಸಣೆ ಹೆಚ್ಚಳ: ಜಿಲ್ಲೆಯಲ್ಲಿಯೇ ಕೋವಿಡ್‌ ಪರೀಕ್ಷಾ ಕೇಂದ್ರ ಸ್ಥಾಪನೆಯಾದ ಮೇಲೆ ನಿತ್ಯ ತಪಾಸಣೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಿನಕ್ಕೆ ಸರಾಸರಿ 500-600 ವ್ಯಕ್ತಿಗಳ ಗಂಟಲ ದ್ರವದ ಮಾದರಿ ಪರೀಕ್ಷೆ ನಡೆಯುತ್ತಿದೆ. ಇದರಲ್ಲಿ ಅರ್ಧದಷ್ಟು ವರದಿಗಳು ಅಂದೇ ಫಲಿತಾಂಶ ಕಾಣುತ್ತಿವೆ. ಹೀಗಾಗಿ ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸುವ ಜೊತೆಗೆ ಸೋಂಕಿತರನ್ನು ಆರಂಭದಲ್ಲಿಯೇ ಗುರುತಿಸಲು ಸಾಧ್ಯವಾಗಿದೆ. ಜೊತೆಗೆ ಜ್ವರ ತಪಾಸಣೆ ಪರೀಕ್ಷೆಗಳೂ ಹೆಚ್ಚಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.