ರಾಮನಗರ: ಪೌರಾಣಿಕ ನಾಟಕಗಳಿಗೆ ಜನಪ್ರಿಯವಾಗಿರುವ ಜಿಲ್ಲೆಯಲ್ಲಿ ಇದೀಗ ಸಾಮಾಜಿಕ ಹಾಗೂ ಇತರ ನಾಟಕಗಳ ಕಲರವ ಶುರುವಾಗಿದೆ. ಸಾಗರ ತಾಲ್ಲೂಕಿನ ಹೆಗ್ಗೋಡಿನ ಹೆಸರಾಂತ ನೀನಾಸಂ (ನೀಲಕಂಠೇಶ್ವರ ನಾಟ್ಯಸೇವಾ ಸಂಘ) ರಂಗಕಲಾ ಸಂಘವು ರಾಮನಗರದಲ್ಲಿ ‘ನೀನಾಸಂ ನಾಟಕೋತ್ಸವ’ ಹಮ್ಮಿಕೊಂಡಿದೆ.
ನಗರದ ವಿವೇಕಾನಂದ ನಗರದಲ್ಲಿರುವ ಎಂ.ಎಚ್. ಕಾಲೇಜಿನ ಸಭಾಂಗಣದಲ್ಲಿ ಅ. 23 ಮತ್ತು 24ರಂದು ನಾಟಕೋತ್ಸವ ಜರುಗಲಿದೆ. ತಾಲ್ಲೂಕಿನ ಕುಂಬಾಪುರದ ಜನಮುಖಿ ಟ್ರಸ್ಟ್ ನೀನಾಸಂ ನಾಟಕೋತ್ಸವಕ್ಕೆ ಕೈ ಜೋಡಿಸಿದೆ. ಎರಡು ದಿನಗಳ ನಾಟಕೋತ್ಸವದ ಪ್ರಚಾರವೂ ಭರ್ಜರಿಯಾಗಿ ನಡೆಯುತ್ತಿದೆ.
2004ರಿಂದ ನಂಟು: ‘ಜಿಲ್ಲೆಯಾಗುವುದಕ್ಕೆ ಮುಂಚಿನಿಂದಲೂ ರಾಮನಗರವು ನೀನಾಸಂ ನಂಟು ಹೊಂದಿದೆ. 2004ರಲ್ಲಿ ಮೊದಲ ಬಾರಿಗೆ ನೀನಾಸಂ ತಂಡ ನಗರಕ್ಕೆ ಬಂದಿತ್ತು. ಆಗ ಬಿಜಿಎಸ್ ಅಂಧರ ಶಾಲೆಯಲ್ಲಿ ಕುವೆಂಪು ಅವರ ‘ಬಿರುಗಾಳಿ’ ಮತ್ತು ದ.ರಾ. ಬೇಂದ್ರೆ ಅವರ ‘ಪಾತರಗಿತ್ತಿ ಪಕ್ಕ’ ಪದ್ಯಗಳನ್ನು ಒಳಗೊಂಡ ನಾಟಕ ಪ್ರದರ್ಶನ ನಡೆದಿತ್ತು’ ಎಂದು ಜನಮುಖಿ ಟ್ರಸ್ಟ್ ಕಾರ್ಯದರ್ಶಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ವಿ. ಬಾಬು ‘ಪ್ರಜಾವಾಣಿ’ಯೊಂದಿಗೆ ಮೆಲುಕು ಹಾಕಿದರು.
‘ಕಳೆದ 20 ವರ್ಷಗಳಲ್ಲಿ ಕೋವಿಡ್ ಅವಧಿ ಸೇರಿದಂತೆ ಒಂದೆರಡು ವರ್ಷ ಮಾತ್ರವೇ ನೀನಾಸಂ ನಾಟಕೋತ್ಸವ ಇಲ್ಲಿ ನಡೆದಿಲ್ಲ. ಉಳಿದಂತೆ ಪ್ರತಿ ವರ್ಷ ನಾಟಕಗಳ ಪ್ರದರ್ಶನ ನಡೆಯುತ್ತಾ ಬಂದಿದೆ. ಸಾಣೆಹಳ್ಳಿಯ ಶಿವಸಂಚಾರ ತಂಡವೂ ಇಲ್ಲಿಗೆ ಬಂದು ಪ್ರದರ್ಶನ ನೀಡಿದೆ. ಬೇರೆ ಜಿಲ್ಲೆಗಳಿಂದ ರಾಮನಗರಕ್ಕೆ ಬರುವ ತಂಡಗಳಿಗೆ ಸಹಯೋಗ ನೀಡುತ್ತಾ, ಜಿಲ್ಲೆಯಲ್ಲಿ ಸಾಮಾಜಿಕ ಹಾಗೂ ಇತರ ನಾಟಕಗಳ ಅಭಿರುಚಿ ಬೆಳೆಸುವ ಕೆಲಸವನ್ನು ಟ್ರಸ್ಟ್ ಮೂಲಕ ಮಾಡಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.
16 ಮಂದಿಯ ತಂಡ: ನಾಟಕೋತ್ಸವ ಸಲುವಾಗಿ ನೀನಾಸಂನ 16 ಕಲಾವಿದರ ತಂಡವು ನಗರಕ್ಕೆ ಅ. 22ಕ್ಕೆ ಬಂದಿಳಿಯಲಿದೆ. ಕುಂಬಾಪುರ ಕಾಲೊನಿಯಲ್ಲಿರುವ ಜನಮುಖಿ ಸಾಂಸ್ಕೃತಿಕ ಭವನದಲ್ಲಿ ತಂಡದ ವಾಸ್ತವ್ಯಕ್ಕೆ ಹಾಗೂ ತಾಲೀಮಿಗೆ ವ್ಯವಸ್ಥೆ ಮಾಡಲಾಗಿದೆ.
ನಾಟಕೋತ್ಸವದ ಪ್ರಚಾರವೂ ಜೋರಾಗಿ ನಡೆದಿದೆ. ನಗರದ ಕೆಲವೆಡೆ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಜಿಲ್ಲೆಯ ಪ್ರಮುಖ ಸಾಹಿತಿಗಳು, ಸಂಘಟನೆಕಾರರು, ಸಾಂಸ್ಕೃತಿಕ ಕ್ಷೇತ್ರದಲ್ಲಿರುವರು, ರಾಜಕಾರಣಿಗಳು, ಉದ್ಯಮಿಗಳು, ಸಂಘ–ಸಂಘಟನೆಗಳ ಪ್ರಮುಖರು ನಾಟಕೋತ್ಸವ ಕುರಿತು ಮಾತನಾಡಿರುವ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ.
‘ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ. ಮನುಷ್ಯನ ಪ್ರಜ್ಞೆಯನ್ನು ಜಾಗೃತಗೊಳಿಸುವ ನಾಟಕವನ್ನು ಹಿರಿಯರು ತಮ್ಮ ಸಾಂಸ್ಕೃತಿಕ ಬದುಕಿನ ಭಾಗವಾಗಿಸಿಕೊಂಡು ಬಂದಿದ್ದಾರೆ. ನಾಡಿನಲ್ಲಿ ತನ್ನದೇ ಪ್ರಖ್ಯಾತಿ ಹೊಂದಿರುವ ನೀನಾಸಂ ನಾಟಕೋತ್ಸವ ರಾಮನಗರದಲ್ಲಿ ನಡೆಯುತ್ತಿರುವು ಖುಷಿ ತಂದಿದೆ. ನಮ್ಮ ಸಂಘದ ಸದಸ್ಯರೆಲ್ಲೂ ನಾಟಕ ವೀಕ್ಷಿಸುವಂತೆ ಪ್ರಚಾರ ಮಾಡುತ್ತಿದ್ದೇವೆ’ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಉಪಾಧ್ಯಕ್ಷ ಆರ್. ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಕೊಪ್ಪಳದ ರಂಗಧಾರ ರೆಪರ್ಟರಿ ಹಾಗೂ ಕಲ್ಲೂರಿನ ಕಲ್ಪುರ ಸಾಂಸ್ಕೃತಿಕ ಕಲಾ ಸಂಘದ ಕಾಲೇಜಿನ ರಂಗ ಸಂಚಾರ ತಂಡವು, ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಸಂಚರಿಸಿ ಚಂದ್ರಶೇಖರ ಕಂಬಾರ ಅವರ ‘ಬೆಪ್ಪು ತಕ್ಕಡಿ ಬೋಳೇಶಂಕರ’ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡನ ಆನೆ’ ಪಠ್ಯದ ನಾಟಕಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದ್ದನ್ನು ನೆನೆಯಬಹುದು.
ಪೌರಾಣಿಕ ನಾಟಕಗಳ ಜೊತೆಗೆ ಇತರ ನಾಟಕಗಳನ್ನು ಸಹ ಜನರಿಗೆ ಪರಿಚಯಿಸಬೇಕು. ನೀನಾಸಂ ನಾಟಕೋತ್ಸವ ವಿದ್ಯಾರ್ಥಿಕೇಂದ್ರಿತವೂ ಆಗಿದ್ದು ಅವರಿಗೆ ರಂಗಭೂಮಿ ಪರಿಚಯಿಸುವ ಆಶಯ ಹೊಂದಿದೆಕುಂಬಾಪುರ ವಿ. ಬಾಬು ಸದಸ್ಯ ಕರ್ನಾಟಕ ನಾಟಕ ಅಕಾಡೆಮಿ
ಯಾವ್ಯಾವ ನಾಟಕ ಪ್ರದರ್ಶನ
* ನಾಟಕ: ಮಾಲತೀಮಾಧವರಚನೆ: ಭವಭೂಮತಿಕನ್ನಡ ರೂಪಾಂತರ ಮತ್ತು ನಿರ್ದೇಶನ: ಅಕ್ಷರ ಕೆ.ವಿಸಂಗೀತ ವಿನ್ಯಾಸ: ವಿದ್ಯಾ ಹೆಗಡೆ ಭಾರ್ಗವ ಕೆ.ಎನ್ ಎಂ.ಎಚ್. ಗಣೇಶ ಪ್ರದರ್ಶನ: ಅ. 23 ಸಂಜೆ 6 ಗಂಟೆ
* ನಾಟಕ: ಅಂಕದ ಪರದೆರಚನೆ: ಅಭಿರಾಮ್ ಭಡ್ಕಮ್ಕರ್ಕನ್ನಡಕ್ಕೆ: ಜಯಂತ್ ಕಾಯ್ಕಿಣಿನಿರ್ದೇಶನ: ವಿದ್ಯಾನಿಧಿ ವನಾರಸೆ (ಪ್ರಸಾದ್)ಪ್ರದರ್ಶನ: ಅ. 24 ಸಂಜೆ 6 ಗಂಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.