ADVERTISEMENT

ಚನ್ನಪಟ್ಟಣ: ನಗರಸಭೆ ಫಲಿತಾಂಶಕ್ಕೆ ಕ್ಷಣಗಣನೆ

31 ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ 112 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಎಚ್.ಎಂ.ರಮೇಶ್
Published 30 ಏಪ್ರಿಲ್ 2021, 5:47 IST
Last Updated 30 ಏಪ್ರಿಲ್ 2021, 5:47 IST
ಚನ್ನಪಟ್ಟಣದಲ್ಲಿ ನಗರಸಭೆಯ ಮತ ಎಣಿಕೆ ಕಾರ್ಯ ನಡೆಯುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು
ಚನ್ನಪಟ್ಟಣದಲ್ಲಿ ನಗರಸಭೆಯ ಮತ ಎಣಿಕೆ ಕಾರ್ಯ ನಡೆಯುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು   

ಚನ್ನಪಟ್ಟಣ: ನಗರಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಲ್ಲಿನ ನಗರಸಭಾ ಸದಸ್ಯರಾಗಲು ಆಸೆ ಹೊತ್ತು ಕಣದಲ್ಲಿದ್ದ 112 ಅಭ್ಯರ್ಥಿಗಳ ಸೋಲು-ಗೆಲುವಿನ ಭವಿಷ್ಯ ಶುಕ್ರವಾರ ನಿರ್ಧಾರವಾಗಲಿದೆ.

ಪಟ್ಟಣದ 31 ವಾರ್ಡ್‌ಗಳ ಸದಸ್ಯಗಿರಿಗೆ ಮಂಗಳವಾರ ಚುನಾವಣೆ ನಡೆದಿದ್ದು, ಅಲ್ಲಿಂದ ಇಲ್ಲಿವರೆಗೆ ಅಭ್ಯರ್ಥಿಗಳು ಫಲಿತಾಂಶದ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇಂದು ಈ ಲೆಕ್ಕಾಚಾರಕ್ಕೆ ಪೂರ್ಣ ವಿರಾಮ ಬೀಳಲಿದೆ.

ಇಲ್ಲಿನ 31 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 21,480 ಪುರುಷ ಮತದಾರರು ಹಾಗೂ 21,582 ಮಹಿಳಾ ಮತದಾರರು ಸೇರಿದಂತೆ ಒಟ್ಟು 43,062 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇಕಡ 70.99ರಷ್ಟು ಮತದಾನವಾಗಿದೆ. ಮತದಾರರು ಈಗಾಗಲೇ ಅಭ್ಯರ್ಥಿಗಳ ಹಣೆಬರಹವನ್ನು ಬರೆದಿದ್ದು, ಇಂದು ಅನಾವರಣಗೊಳ್ಳಲಿದೆ.

ADVERTISEMENT

ಸಕಲ ಸಿದ್ಧತೆ: ಇಲ್ಲಿನ ನಗರಸಭೆಯ 31 ವಾರ್ಡ್‌ಗಳ ಮತ ಎಣಿಕೆ ಕಾರ್ಯ ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಬೆಳಿಗ್ಗೆ ಆರಂಭಗೊಳ್ಳಲಿದ್ದು, ಈಗಾಗಲೇ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ತಹಶೀಲ್ದಾರ್ ನಾಗೇಶ್ ತಿಳಿಸಿದ್ದಾರೆ.

ಮತ ಎಣಿಕೆಗಾಗಿ ಎರಡು ಕೊಠಡಿಗಳಲ್ಲಿ 9 ಟೇಬಲ್‌ಗಳನ್ನು ಸಿದ್ಧಗೊಳಿಸಲಾಗಿದ್ದು, ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಮತ ಎಣಿಕೆಗಾಗಿ 24 ಮತ ಎಣಿಕೆ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಯಾ ವಾರ್ಡ್‌ನ ಅಭ್ಯರ್ಥಿಗಳ ಏಜೆಂಟ್‌ ಹೊರತುಪಡಿಸಿ ಮತ್ಯಾರಿಗೂ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಭೀತಿ ಇರುವುದರಿಂದ ಮತ ಎಣಿಕೆ ಸಿಬ್ಬಂದಿ, ಅಭ್ಯರ್ಥಿಗಳು, ಅವರ ಏಜೆಂಟ್‌ಗಳು, ಸಾರ್ವಜನಿಕರು ಕೊರೊನಾ ನಿಯಮಗಳನ್ನು ಪಾಲಿಸಬೇಕು. ಗುಂಪುಗೂಡುವುದು, ಅನಾವಶ್ಯಕವಾಗಿ ಓಡಾಡುವುದು, ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವುದು ಎಲ್ಲವನ್ನೂ ರದ್ದುಗೊಳಿಸಲಾಗಿದೆ. ಶಾಂತಿಯುತ ಮತ ಎಣಿಕೆಗೆ ಎಲ್ಲರೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಬೆಟ್ಟಿಂಗ್ ಭರಾಟೆ: ಇಲ್ಲಿನ ನಗರಸಭಾ ಚುನಾವಣೆಯ ಮತದಾನ ಮುಗಿದ ಬಳಿಕ ಕೆಲವು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಬೆಟ್ಟಿಂಗ್ ಕಟ್ಟುತ್ತಿರುವ ವರದಿ ಬರುತ್ತಿದ್ದು, ಬೆಟ್ಟಿಂಗ್ ಭರಾಟೆ ತೀವ್ರಗೊಂಡಿದೆ.

ಬಹುತೇಕ ವಾರ್ಡ್‌ಗಳಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದರೂ ಪ್ರತಿಷ್ಠಿತ ವಾರ್ಡ್ ಎನ್ನಿಸಿಕೊಂಡಿರುವ 5, 6, 10, 12, 22, 27 ಮತ್ತು 31ನೇ ವಾರ್ಡ್ಗಳಲ್ಲಿ ಬೆಟ್ಟಿಂಗ್ ಜೋರಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಅವರ ಬೆಂಬಲಿಗರು ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ಕೆಲವರು ಇದರಲ್ಲಿ ಹಣ ಮಾಡುವ ದೃಷ್ಟಿಯಿಂದ ಬೆಟ್ಟಿಂಗ್ ಅನ್ನೇ ವ್ಯವಹಾರ ಮಾಡಿಕೊಂಡಿದ್ದಾರೆ.

ಲೆಕ್ಕಾಚಾರ: ನಗರಸಭೆಗೆ ಚುನಾವಣೆ ನಡೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಮಂದಿ ಹಾಗೂ ಅವರ ಅನುಯಾಯಿಗಳು ತಮ್ಮದೇ ಆದ ವಾದಗಳೊಂದಿಗೆ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮತದಾರರಿಗೆ ಒಡ್ಡಿರುವ ಆಮಿಷ, ಜಾತಿ, ಪಕ್ಷ ಮುಂತಾದ ದೃಷ್ಟಿಕೋನವಿಟ್ಟುಕೊಂಡು ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ರಾಜಕೀಯ ಪಕ್ಷಗಳ ಮುಖಂಡರು ತಮ್ಮದೇ ವಾದ ಇಟ್ಟುಕೊಂಡು ತಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುವುದು, ನಗರಸಭೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂಬ ವಾದ ಮಾಡುತ್ತಿದ್ದಾರೆ. ಆದರೆ, ಮತದಾರ ಯಾರಿಗೆ ಮಣೆ ಹಾಕಿದ್ದಾನೆ ಎಂಬುದು ಮಧ್ಯಾಹ್ನದ ವೇಳೆಗೆ ಅನಾವರಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.