ADVERTISEMENT

ರಾಮನಗರದ 75 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ

ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ಹಾಕುವ ಗುರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 13:30 IST
Last Updated 6 ಮಾರ್ಚ್ 2021, 13:30 IST
ರಾಕೇಶ್‌ಕುಮಾರ್
ರಾಕೇಶ್‌ಕುಮಾರ್   

ರಾಮನಗರ: ಜಿಲ್ಲೆಯಲ್ಲಿ 60 ವರ್ಷ ಮತ್ತು ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಮೂರನೇ ಹಂತದ ಕಾರ್ಯಕ್ರಮವು ಇದೇ 8ರಿಂದ ಒಟ್ಟು 75 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ. ರಾಜೇಶ್‌ಕುಮಾರ್ ತಿಳಿಸಿದರು.

ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ನಗರ ಆರೋಗ್ಯ ಕೇಂದ್ರಗಳು ಹಾಗೂ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಸಿಗಲಿದೆ. 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ 45 ರಿಂದ 60 ವರ್ಷದೊಳಗಿನ ವ್ಯಕ್ತಿಗಳು ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ, ಮೂತ್ರಪಿಂಡ, ಲಿವರ್‌ಗಳಿಗೆ ಸಂಬಂಧಿಸಿದ ತೊಂದರೆಗಳಿದ್ದರೆ ಹಾಗೂ ಕ್ಯಾನ್ಸರ್, ಎಚ್.ಐ.ವಿ/ಏಡ್ಸ್ ಸೋಂಕಿನಿಂದ ಬಳಲುತ್ತಿರುವವರಿಗೆ ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಲಸಿಕೆ ನೀಡಲಾಗುವುದು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಲಸಿಕೆ ಪಡೆಯುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಹನ ಪರವಾನಗಿ, ಪಾಸ್‌ಪೋರ್ಟ್ ಇವುಗಳಲ್ಲಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. 45 ವರ್ಷ ಮೇಲ್ಪಟ್ಟವರು 59 ವರ್ಷದೊಳಗಿನ ಕೊಮೊರ್ಬಿಡಿಟಿ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಆರ್.ಎಂ.ಪಿ ವೈದ್ಯರಿಂದ ಕಾಯಿಲೆ ಇರುವ ಬಗ್ಗೆ ದೃಢೀಕರಣ ಪತ್ರವನ್ನು ಹಾಜರಿಪಡಿಸಬೇಕು ಎಂದರು.

ADVERTISEMENT

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ನಗರ ಆರೋಗ್ಯ ಕೇಂದ್ರಗಳು ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳಾದ ರಾಮಕೃಷ್ಣ ಆಸ್ಪತ್ರೆ ಹಾಗೂ ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಪ್ರತಿ ಡೋಸ್ ಗೆ 250 ಪಾವತಿಸಿ ಲಸಿಕೆ ಪಡೆಯಬಹುದಾಗಿದೆ ಎಂದರು.

ಯಾವುದೇ ಅಡ್ಡ ಪರಿಣಾಮವಿಲ್ಲ: ಕೋವಿಡ್ ಲಸಿಕೆ ಸುರಕ್ಷಿತವಾಗಿದ್ದು ಯಾವುದೇ ಅಡ್ಡ ಪರಿಣಾಮವಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಹಾಗೂ ಕೋವಿಡ್‌ ವಾರಿಯರ್‌ಗಳು ಈ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಯಾರಿಗೂ ಸಹ ಅಡ್ಡ ಪರಿಣಾಮ ಉಂಟಾಗಿಲ್ಲ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಕೋವಿಡ್ ಲಸಿಕೆ ಪಡೆದುಕೊಂಡು ಕೋವಿಡ್ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸೇನಾನಿಗಳ ಪೈಕಿ ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಇಲಾಖೆಯಲ್ಲಿ 2331 ಜನರಲ್ಲಿ 2138 ಜನರು, ಪೊಲೀಸ್ ಇಲಾಖೆಯಲ್ಲಿ 1363 ಜನರಲ್ಲಿ 1072 ಜನರು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ 727 ಜನರಲ್ಲಿ 572 ಜನರು ಲಸಿಕೆ ಪಡೆದಿರುತ್ತಾರೆ. ಲಸಿಕೆ ಪಡೆದವರಿಗೆ ಯಾವುದೇ ರೀತಿಯ ತೊಂದರೆಯಾಗಿರುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನ ಕೊಮೊರ್ಬಿಡಿಟಿ ಹೊಂದಿರುವವರು 28,148 ಜನರು ಹಾಗೂ 60 ವರ್ಷ ಮೇಲ್ಪಟ್ಟವರು 84,445 ಜನರು ಇದ್ದಾರೆ. ಇದೇ ತಿಂಗಳ 3ರವರೆಗೆ 411 ಜನ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಡ್ ಪ್ರಕರಣಗಳು ಬೇರೆ ರಾಜ್ಯಗಳಲ್ಲಿ ಹೆಚ್ಚಾಗುತ್ತಿದೆ. ಇದರ ಬಗ್ಗೆ ಜನರು ಹೆಚ್ಚಿನ ಮುನ್ನಚ್ಚರಿಕಾ ಕ್ರಮಗಳನ್ನು ವಹಿಸುವುದರ ಜೊತೆಗೆ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಆನ್‌ಲೈನ್ ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ತೊಂದರೆಯಾಗುತ್ತಿದ್ದಲ್ಲಿ, ಸಾರ್ವಜನಿಕರು ಲಸಿಕೆ ನೀಡುವ ಕೇಂದ್ರಗಳಿಗೆ ಭೇಟಿ ನೀಡಿದರೆ ಸ್ಥಳದಲ್ಲೇ ಹೆಸರು ನೊಂದಾಯಿಸಿಕೊಂಡರೆ ಲಸಿಕೆ ನೀಡಲಾಗುವುದು ಎಂದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಪದ್ಮಾ, ಡಿಎಲ್‌ಒ ಡಾ. ಮಂಜುನಾಥ್, ಡಿ.ಎಸ್.ಒ ಡಾ. ಕಿರಣ್ ಶಂಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್ ಇದ್ದರು.

ಗಣಿಗಾರಿಕೆ: ಅಕ್ರಮ ಇದ್ದಲ್ಲಿ ಕ್ರಮ

ಗಣಿಗಾರಿಕೆ ಕ್ವಾರಿಗಳಲ್ಲಿ ಅಕ್ರಮವಾಗಿ ಸ್ಪೋಟಕಗಳನ್ನು ಶೇಖರಿಸಿಟ್ಟಿರುವ ದೂರಿಗೆ ಸಂಬಂಧಿಸಿ, ಅಧಿಕಾರಿಗಳ ಜಂಟಿ ಸರ್ವೆಗೆ ಈ ಹಿಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈ ವರದಿ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು. ಖುದ್ದಾಗಿ ಗಣಿ ಪರಿಶೀಲನೆ ಮಾಡುವಂತೆ ನಾನೇ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಲ್ಲು ಕ್ವಾರಿಗಳ ಮೇಲೂ ಕ್ರಮ ವಹಿಸಿ, ಅಕ್ರಮ ದಾಸ್ತಾನು ಇದ್ದರೆ ಅಂತಹವರ ಲೈಸನ್ಸ್ ರದ್ದು ಪಡಿಸಲಾಗುವುದು. ಮುಂದಿನ ವಾರ ಈ ಕುರಿತು ಸಭೆ ನಡೆಸಲಾಗುವುದು ಎಂದು ರಾಕೇಶ್ ತಿಳಿಸಿದರು.

ಅಂಕಿ–ಅಂಶ
8163–ಮೊದಲ ಹಂತದ ಲಸಿಕೆ ಗುರಿ
6662–ಲಸಿಕೆ ಪಡೆದವರು
ಶೇ 81– ಗುರಿ ಸಾಧನೆ

6459–ಎರಡನೇ ಹಂತದ ಲಸಿಕೆ ಗುರಿ
4605––ಲಸಿಕೆ ಪಡೆದವರು
ಶೇ 72– ಗುರಿ ಸಾಧನೆ

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದೆ. ಆದರೆ ಸಂಪೂರ್ಣವಾಗಿ ಹೋಗಿಲ್ಲ. ಜನರು ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು

- ರಾಕೇಶ್‌ಕುಮಾರ್ , ಜಿಲ್ಲಾಧಿಕಾರಿ, ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.