ADVERTISEMENT

ಮುಂಬೈಗೆ ತೆರಳಿದ ಯೋಗೇಶ್ವರ್‌?, ತಲೆಮರಿಸಿಕೊಂಡಿರುವ ಶಾಸಕ ಗಣೇಶ್ ಸಂಪರ್ಕ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 13:39 IST
Last Updated 29 ಜನವರಿ 2019, 13:39 IST
ಸಿ.ಪಿ. ಯೋಗೇಶ್ವರ್‌
ಸಿ.ಪಿ. ಯೋಗೇಶ್ವರ್‌   

ರಾಮನಗರ: ಆಪರೇಷನ್‌ ಕಮಲದ ಮುಂದುವರಿದ ಭಾಗವಾಗಿ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಮುಂಬೈಗೆ ತೆರಳಿದ್ದು, ನಾಯಕರ ಅಣತಿಯಂತೆ ಜೆ.ಎನ್‌. ಗಣೇಶ್‌ರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಯೋಗೇಶ್ವರ್‌ರ ಈ ತಂತ್ರಗಾರಿಕೆ ಕುರಿತು ಚನ್ನಪಟ್ಣಣದ ಬಿಜೆಪಿ ವಲಯದಲ್ಲಿ ಗುಸುಗುಸು ಸುದ್ದಿ ಹಬ್ಬಿದೆ. ಬಿಡದಿಯ ಈಗಲ್‌ಟನ್‌ ರೆಸಾರ್ಟಿನಲ್ಲಿ ಕಾಂಗ್ರೆಸ್‌ ಶಾಸಕರಾದ ಆನಂದ್ ಸಿಂಗ್‌ ಮತ್ತು ಜೆ.ಎನ್. ಗಣೇಶ್‌ ನಡುವೆ ಮಾರಾಮಾರಿ ನಡೆದು ಕಾಂಗ್ರೆಸ್ ಮುಜುಗರ ಅನುಭವಿಸಿತ್ತು. ಅದರಲ್ಲಿಯೂ ರೆಸಾರ್ಟ್‌ ವಾಸ್ತವ್ಯದ ಉಸ್ತುವಾರಿ ಹೊತ್ತಿದ್ದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರು ಹೆಚ್ಚು ಮುಜುಗರ ಅನುಭವಿಸಿದ್ದರು.

ಈಗ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಯೋಗೇಶ್ವರ್‌ ಕಾರ್ಯ ತಂತ್ರ ರೂಪಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮುಂಬೈಗೆ ತೆರಳಿ ಗಣೇಶ್‌ರನ್ನು ಸಂಪರ್ಕಿಸಿದ್ದಾರೆ. ಅವರನ್ನು ರಕ್ಷಣೆ ಮಾಡುವ ಮೂಲಕ ಬಿಜೆಪಿಗೆ ಸೆಳೆಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಇದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ,ರಾಮನಗರ ಉಪಚುನಾವಣೆಯಲ್ಲಿ ಆದ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳುವ ತಂತ್ರ ಹೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇತ್ತ ಯೋಗೇಶ್ವರ್‌ ಯಾರ ಸಂಪರ್ಕಕ್ಕೂ ಲಭ್ಯವಾಗದೇ ಇರುವುದು, ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದತ್ತಲೂ ಬರದೇ ಇರುವುದು ಈ ಎಲ್ಲ ಅನುಮಾನಗಳನ್ನು ಪುಷ್ಠೀಕರಿಸುವಂತೆ ಇವೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಅವರು ಮೊಬೈಲ್ ಕರೆ ಸ್ವೀಕರಿಸಲಿಲ್ಲ. ಅವರ ಆಪ್ತರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.

ಬರಿಗೈನಲ್ಲಿ ವಾಪಸ್‌
ಗಣೇಶ್‌ ಬಂಧನಕ್ಕೆ ತೆರಳಿದ್ದ ರಾಮನಗರ ಪೊಲೀಸರು ಬಳ್ಳಾರಿ, ಮುಂಬೈ, ಪುಣೆ ಮೊದಲಾದ ಕಡೆ ಸುತ್ತಾಟ ನಡೆಸಿ ವಾಪಸ್‌ ಆಗಿದ್ದಾರೆ. ಘಟನೆ ನಡೆದು ಹತ್ತು ದಿನ ಕಳೆದರೂ ಆರೋಪಿಯ ಸುಳಿವು ಮಾತ್ರ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.