ADVERTISEMENT

ಮತದಾನ ವಿಚಾರ ಜಾಗೃತಿ ಮೂಡಿಸಿ

‘ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ’ ಕುರಿತು ತರಬೇತಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 14:02 IST
Last Updated 13 ಮಾರ್ಚ್ 2019, 14:02 IST
ಮಾಗಡಿ ಬಿಜಿಎಸ್‌ ಕಾಲೇಜಿನಲ್ಲಿ ನಡೆದ ‘ಚುನಾವಣೆಯಲ್ಲಿ ಶಿಕ್ಷಕರ ಪಾತ್ರ’ ತರಬೇತಿಗೆ ತಾಲ್ಲೂಕು ಪಂಚಾಯಿತಿ ಇಒ ಚಂದ್ರು ಚಾಲನೆ ನೀಡಿದರು
ಮಾಗಡಿ ಬಿಜಿಎಸ್‌ ಕಾಲೇಜಿನಲ್ಲಿ ನಡೆದ ‘ಚುನಾವಣೆಯಲ್ಲಿ ಶಿಕ್ಷಕರ ಪಾತ್ರ’ ತರಬೇತಿಗೆ ತಾಲ್ಲೂಕು ಪಂಚಾಯಿತಿ ಇಒ ಚಂದ್ರು ಚಾಲನೆ ನೀಡಿದರು   

ಮಾಗಡಿ: ‘ಮತ ಮಾರಾಟದ ಸರಕಲ್ಲ. ಪ್ರಜಾಪ್ರಭುತ್ವ ಯಶಸ್ವಿಯಾಗಲು, ಮತದಾನ ಮಾಡುವಂತೆ ಶಿಕ್ಷಕರು ಮತದಾರರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ ಚಂದ್ರು ತಿಳಿಸಿದರು.

ಜಿಲ್ಲಾ ಡಯೆಟ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ಬಿಜಿಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ’ ಕುರಿತ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

‘ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಒಡ್ಡುವ ಆಸೆ ಆಮಿಷಗಳಿಗೆ ಬಲಿಯಾಗದಂತೆ, ನಿಷ್ಪಕ್ಷಪಾತ, ನಿರ್ಭೀತಿಯಿಂದ ಮತಗಟ್ಟೆಗೆ ತೆರಳಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು’ ಎಂದರು.

ADVERTISEMENT

‘ವಯಸ್ಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರಬೇಕು. ಮತದಾನ ಮಾಡುವುದು ಪವಿತ್ರ ಕೆಲಸ ಎಂಬುದನ್ನು ಮತದಾರರಿಗೆ ತಿಳಿಸಿಕೊಡಬೇಕು. ಪಕ್ಷ, ಜಾತಿ, ಧರ್ಮ ಮರೆತು ಪ್ರಾಮಾಣಿಕ ಅಭ್ಯರ್ಥಿಗೆ ಮತ ನೀಡಿ ಆಯ್ಕೆ ಮಾಡಿದರೆ ದೇಶದ ಭವಿಷ್ಯ ಉಜ್ವಲಗೊಳ್ಳಲಿದೆ ಎಂಬುದನ್ನು ಶಿಕ್ಷಕರು ಮನವರಿಕೆ ಮಾಡಿಕೊಡುವುದು ತೀರಾ ಅಗತ್ಯವಾಗಿದೆ’ ಎಂದು ಡಯಟ್‌ನ ಅಧಿಕಾರಿ ರಂಗಸ್ವಾಮಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್‌.ಮಾತನಾಡಿ ‘ಶಿಕ್ಷಕರು ಸಂವಿಧಾನ, ಚುನಾವಣಾ ಆಯೋಗ, ಮತದಾನ ಪದ್ಧತಿಯ ಬಗ್ಗೆ ಶಾಲೆಗಳಲ್ಲಿ ಮಕ್ಕಳಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ, ಭವಿಷ್ಯದ ಮತದಾರರನ್ನು ಜಾಗೃತರನ್ನಾಗಿ ಮಾಡಬೇಕು. ಮತದಾರರು ಮತದಾನದಿಂದ ವಂಚಿತರಾಗದಂತೆ ತಿಳಿವಳಿಕೆ ಮೂಡಿಸಬೇಕು’ ಎಂದರು.

ಬಿಜಿಎಸ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಉಮೇಶ್‌ ಮಾತನಾಡಿ ‘ಮತದಾರರು ಜಾಗೃತರಾದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲಿದೆ. ಸರ್ವರಿಗೆ ಸಮಬಾಳು–ಸರ್ವರಿಗೆ ಸಮಪಾಲು ಎಂಬ ಧ್ಯೇಯವಾಕ್ಯ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗದಿರಲಿ’ ಎಂದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿ.ಆರ್‌.ಪಿ. ಜಿ.ರವಿಕುಮಾರ್‌, ಲಕ್ಕೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಟಿ.ವೆಂಕಟೇಶ್‌, ಕುದೂರಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವೆಂಕಟೇಶ್‌ ಮೂರ್ತಿ, ‘ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ’ದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಶಿಕ್ಷಕ–ಶಿಕ್ಷಕಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.