ರಾಮನಗರದ ನಗರಸಭೆ ಸಭಾಂಗಣದಲ್ಲಿ ನಡೆದ ಬೀದಿ ಬದಿ ವ್ಯಾಪಾರಿಗಳ ಲೋಕ ಕಲ್ಯಾಣ ಮೇಳದಲ್ಲಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಲಾಯಿತು.
ರಾಮನಗರ: ‘ಬೀದಿಬದಿ ವ್ಯಾಪಾರಿಗಳಿಗೆ ಆಸರೆಯಾಗಿದ್ದ ಪ್ರಧಾನಮಂತ್ರಿ ಸ್ವನಿಧಿ ಸಾಲ ಸೌಲಭ್ಯ ಯೋಜನೆಯನ್ನು ಕೇಂದ್ರ ಸರ್ಕಾರವು 2030ರವರೆಗೆ ವಿಸ್ತರಿಸಿದೆ. ಸಕಾಲದಲ್ಲಿ ಸಾಲ ಪಾವತಿಸಿದರಿಗೆ ಮುಂದೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಸಿಗಲಿದೆ’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ಕುಮಾರ್ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಲೀಡ್‍ಬ್ಯಾಂಕ್, ಕೆನರಾ ಬ್ಯಾಂಕ್, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ)ಹಾಗೂ ನಗರಸಭೆ ಸಹಯೋಗದಲ್ಲಿ ನಡೆದ ಬೀದಿ ಬದಿ ವ್ಯಾಪಾರಿಗಳ ಲೋಕ ಕಲ್ಯಾಣ ಮೇಳದಲ್ಲಿ ಮಾತನಾಡಿದ ಅವರು, ‘ಯೋಜನೆಯಡಿ ವ್ಯಾಪಾರಿಗಳಿಗೆ ₹15 ಸಾವಿರದಿಂದ ₹50 ಸಾವಿರದವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ’ ಎಂದರು.
‘ಗರಿಷ್ಠ ₹50 ಸಾವಿರ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿದವರಿಗೆ ರುಪೇ ಕ್ರೆಡಿಟ್ ಕಾರ್ಡ್ ಸಿಗಲಿದೆ. 20ರಿಂದ 50 ದಿನಗಳವರೆಗೆ ₹30 ಸಾವಿರ ಸಾಲ ಬಡ್ಡಿ ರಹಿತವಾಗಿ ಸಿಗಲಿದೆ. ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಸೌಲಭ್ಯ ಅನುಷ್ಠಾನವಾಗುತ್ತಿದೆ. ಇದನ್ನು ವ್ಯಾಪಾರ ವಹಿವಾಟಿಗೆ ಮಾತ್ರ ಬಳಸಬೇಕು. ವೈಯಕ್ತಿಕ ಬಳಕೆಗೆ ಸಾಲ ಬಳಕೆ ತಪ್ಪಿಸಲು 80 ಮರ್ಚೆಂಟ್ ಪೇಮೆಂಟ್‍ಗಳನ್ನು ಬ್ಲಾಕ್ ಮಾಡಲಾಗಿದೆ’ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಕಾರಿ ಡಾ. ಉಮಾ ಮಾತನಾಡಿ, ‘ವ್ಯಾಪಾರಿಗಳು ತಪ್ಪದೆ ಎಫ್‍ಎಸ್‍ಎಸ್‍ಎಐ ಪ್ರಮಾಣಪತ್ರ ಪಡೆದುಕೊಂಡು, ಪ್ರತಿ ವರ್ಷ ನವೀಕರಿಸಿಕೊಳ್ಳಬೇಕು. ವ್ಯಾಪಾರ ಸ್ಥಳದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು.ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕು’ ಎಂದು ಸೂಚಿಸಿದರು.
ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಅಕ್ಲಿಂ, ಸೋಮಶೇಖರ್ ಮಣಿ, ಮೋಯಿನ್ ಖುರೇಷಿ, ಕೆನರಾ ಬ್ಯಾಂಕ್ ಮ್ಯಾನೇಜರ್ ವೀರಾಂಜನೇಯ, ಕೌಶಲಾಭಿವೃದ್ಧಿ ಅಧಿಕಾರಿ ಪುಷ್ಪಲತಾ, ನಗರಸಭೆ ಅಧಿಕಾರಿಗಳಾದ ನಟರಾಜೇಗೌಡ ಹಾಗೂ ಇತರರು ಇದ್ದರು.
‘ನಗರದಲ್ಲಿದ್ದಾರೆ 2 ಸಾವಿರ ವ್ಯಾಪಾರಿಗಳು’
‘ರಾಮನಗರದಲ್ಲಿ ಸುಮಾರು 2 ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಅವರ ವ್ಯಾಪಾರ–ವಹಿವಾಟಿಗೆ ನಗರಸಭೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ವ್ಯಾಪಾರದ ಸ್ಥಳದಲ್ಲಿ ನೈರ್ಮಲ್ಯ ಕಾಪಾಡುವ ವಿಷಯದಲ್ಲಿ ವ್ಯಾಪಾರಿಗಳು ಪೌರ ಕಾರ್ಮಿಕರಿಗೆ ಸಹಕರಿಸಬೇಕು. ನಿಮ್ಮ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡರೆ ಕಸ ವಿಲೇವಾರಿ ಸಮಸ್ಯೆ ಅರ್ಧದಷ್ಟು ಬಗೆಹರಿಯಲಿದೆ. ಅಲ್ಲದೆ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ವ್ಯಾಪಾರ ಮಾಡಬೇಕು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.