ADVERTISEMENT

ಮುಳಬಾಗಿಲು: ನಿರಂತರ ಹೋರಾಟದ ಫಲ ನಂಗಲಿ ಸ್ಮಶಾನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 14:31 IST
Last Updated 1 ಡಿಸೆಂಬರ್ 2024, 14:31 IST
ನಂಗಲಿ ಸ್ಮಶಾನ ಭೂಮಿ.
ನಂಗಲಿ ಸ್ಮಶಾನ ಭೂಮಿ.   

ಮುಳಬಾಗಿಲು: ನಂಗಲಿ ಹಿಂದೂ ರುದ್ರಭೂಮಿಗೆ ಸ್ಥಳಾವಕಾಶ ಇದ್ದರೂ ಸ್ಮಶಾನದ ದಾಖಲೆಗಳಿರಲಿಲ್ಲ. ಗ್ರಾಮಸ್ಥರು ನಿರಂತರವಾಗಿ ಹೋರಾಟ ಮಾಡಿದ ಫಲ ಕೊನೆಗೂ ಸ್ಮಶಾನಕ್ಕೆ ಪಹಣಿ ಸಮೇತ ಅಧಿಕಾರಿಗಳು ದಾಖಲೆಗಳನ್ನು ಒದಗಿಸಿದ್ದಾರೆ.

ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ನಂಗಲಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಸಿದ್ಧತೆ ನಡೆದಿದೆ. ಆದರೆ, ಗ್ರಾಮದ ಸ್ಮಶಾನಕ್ಕೆ ಕಾಯಂ ಭೂಮಿ ದಾಖಲೆಗಳೇ ಇರಲಿಲ್ಲ. ಗ್ರಾಮಸ್ಥರು ಸುಮಾರು ವರ್ಷಗಳಿಂದಲೂ ಹೋರಾಟ ನಡೆಸಿದ್ದರು.

ಈ ಹಿಂದೆ ಪ್ರಜಾವಾಣಿ ಪತ್ರಿಕೆಯಲ್ಲೂ 2021, ನ.15ರಂದು ‘ಮಳೆ ನೀರಿನಲ್ಲಿ ಮುಳುಗಿದ ಸ್ಮಶಾನ’ ಎಂಬ ಶೀರ್ಷಿಕೆಯಡಿ ಸುದ್ಧಿ ಪ್ರಕಟವಾಗಿತ್ತು.

ADVERTISEMENT

ಈಚೆಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ್, ರಮೇಶ್, ಕಿಶೋರ್, ಗ್ರಾಮ ಪಂಚಾಯಿತಿ ಸದಸ್ಯೆ ಅಶ್ವಿನಿ ಪ್ರಸನ್ನಕುಮಾರ್ ಹಾಗೂ ಗ್ರಾಮಸ್ಥರು ಸ್ಮಶಾನದ ಸ್ಥಳದಲ್ಲಿಯೇ ಪ್ರತಿಭಟನೆ ಮಾಡಿ ತಹಶೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ, ಸರ್ವೆ ಅಧಿಕಾರಿ ನಿವೇದಿತಾ ಅವರಿಗೆ ಸ್ಥಳದಲ್ಲಿಯೇ ಮನವಿ ಸಲ್ಲಿಸಿದ್ದರು.

ಗ್ರಾಮದ ಹೊರವಲಯದ ಸರ್ವೆ ನಂ 515, 516, 517ರಲ್ಲಿ ಒಟ್ಟು 1ಎಕರೆ 33ಗುಂಟೆ ಸ್ಥಳವನ್ನು ಅಧಿಕಾರಿಗಳು ಮಂಜೂರು ಮಾಡಿಸಿದ್ದು ಶೀಘ್ರದಲ್ಲೇ ಸ್ಮಶಾನಕ್ಕೆ ಕಾಂಪೌಂಡ್, ಸಿಮೆಂಟ್ ತೊಟ್ಟಿ, ನೀರಿನ ವ್ಯವಸ್ಥೆ ಮತ್ತಿತರ ಮೂಲ ಸೌಲಭ್ಯಗಳನ್ನು ಪಂಚಾಯಿತಿ ಅಧಿಕಾರಿಗಳು ಒದಗಿಸಿ ಕೊಡಬೇಕು ಎಂದು ಗ್ರಾಮಸ್ಥ ನಂಗಲಿ ಕಿಶೋರ್ ಮನವಿ ಮಾಡಿದರು.

ಉಪ ತಹಶಿಲ್ದಾರ್ ಕೆ.ಟಿ.ವೆಂಕಟೇಶಪ್ಪ, ರಾಜಸ್ವ ನಿರೀಕ್ಷಕ ಉಮೇಶ್, ಗ್ರಾಮ ಲೆಕ್ಕಾಧಿಕಾರಿ ಶ್ರೀನಿಧಿ ಹಾಗೂ ತಾಲ್ಲೂಕು ಅಧಿಕಾರಿಗಳಿಗೆ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.