ADVERTISEMENT

ಕಮಿಷನ್ ಹೆಸರಲ್ಲಿ ₹16.81 ಲಕ್ಷ ವಂಚನೆ

ದುಪ್ಪಟ್ಟು ಕಮಿಷನ್ ಆಸೆ ತೋರಿಸಿ ಉದ್ಯಮಿಗೆ ವಂಚಿಸಿದ ಆನ್‌ಲೈನ್ ವಂಚಕರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 22:27 IST
Last Updated 16 ಜನವರಿ 2024, 22:27 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ರಾಮನಗರ: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್ ಕಂಪನಿಯ ದುಪ್ಪಟ್ಟು ಲಾಭದ ಆಸೆಗೆ ಮಾರುಹೋದ ಉದ್ಯಮಿಯೊಬ್ಬರು, ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ ₹16.81 ಲಕ್ಷ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಜೀವನ್ ಕೆ. ವಂಚನೆಗೊಳಗಾದವರು. ಈ ಕುರಿತು, ತಾಲ್ಲೂಕಿನ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂಪರ್ ಮಾರ್ಕೆಟ್ ಉದ್ಯಮಿಯಾಗಿರುವ ಜೀವನ್ ಅವರಿಗೆ ಟೆಲಿಗ್ರಾಂ ಆ್ಯಪ್‌ನಿಂದ http://www.yatra.int.com ಎಂಬ ಕಂಪನಿಯಿಂದ ಕಳೆದ ನ. 1ರಂದು ವರ್ಕ್ ಫ್ರಂ ಹೋಂ ಉದ್ಯೋಗದ ಆಫರ್ ಬಂದಿತ್ತು. ಯಾತ್ರಾ ಏರ್‌ಲೈನ್ ಟಿಕೆಟ್ ಬುಕ್ಕಿಂಗ್ ಡಾಕ್ಯುಮೆಂಟರಿ ಕಂಪನಿ ಪ್ರತಿನಿಧಿಗಳೆಂದು ಹೇಳಿಕೊಂಡಿದ್ದ ಅದಿತಿ ನಾರಾಯಣ್ ಮತ್ತು ಸ್ಟೀಫನ್ ಎಂಬುವರು, ಉದ್ಯೋಗದ ಕುರಿತು ಜೀವನ್ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ಕೆಲಸದ ಕುರಿತು ತಿಳಿಸಿದ್ದರು.

ADVERTISEMENT

ಕಂಪನಿಯ ಬುಕ್ಕಿಂಗ್ ಸ್ಟ್ಯಾಂಡರ್ಡ್ ಹೆಚ್ಚಿಸಬೇಕು. ಇದಕ್ಕಾಗಿ, ನಿತ್ಯ ನಿಮಗೆ 30 ಟಿಕೆಟ್‌ ಕೊಡಲಾಗುತ್ತದೆ. ಪ್ರತಿ ಟಿಕೆಟ್ ಮಾರಾಟದ ಮೇಲೆ ನಿಮಗೆ ಕಮಿಷನ್ ನೀಡಲಾಗುವುದು ಎಂದು ಹೇಳಿದ್ದರು. ಜೀವನ್ ಅವರ ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದರು. ವೆಬ್‌ಸೈಟ್‌ಗೆ ಲಾಗಿನ್ ಆಗಿ ಕೆಲಸ ಶುರುಮಾಡಿದ್ದ ಜೀವನ್, 30 ಟಿಕೆಟ್‌ಗಳನ್ನು ಮಾರಾಟ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಕಂಪನಿ ₹940 ಪಾವತಿಸಿತ್ತು.

ಇದೇ ರೀತಿ 30ರಿಂದ 40 ನಿಮಿಷಗಳಲ್ಲಿ ಸೈಟ್‌ನಲ್ಲಿರುವ ಟಿಕೆಟ್‌ಗಳನ್ನು ಮಾರಾಟ ಮಾಡಿದರೆ ಹಣ ಡ್ರಾ ಮಾಡಬಹುದು ಎಂದು ಹೇಳಿದ್ದರು. ಅದರಂತೆ, ಕೆಲಸ ಶುರು ಮಾಡಿದ ಜೀವನ್ ಅವರಿಗೆ ₹8 ಸಾವಿರ ಪಾವತಿಸಿದರೆ, ಇಂದೇ ₹17 ಸಾವಿರ ಲಾಭ ಪಡೆಯಬಹುದು ಎಂದಿದ್ದರು. ಅದರಂತೆ, ಪಾವತಿಸಿದ್ದ ಅವರ ಖಾತೆಗೆ ₹17,257 ಪಾವತಿಯಾಗಿತ್ತು.

ಆರಂಭದಲ್ಲಿ ದುಪ್ಪಟ್ಟು ಕಮಿಷನ್ ಬಂದಿದ್ದರಿಂದ ಉತ್ಸುಕರಾದ ಜೀವನ್, ಪ್ರತಿನಿಧಿಗಳು ಹೇಳಿದ್ದಷ್ಟು ಮೊತ್ತವನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ಪಾವತಿಸಿದ್ದಾರೆ. ಅದೇ ರೀತಿ 2023ರ ನ. 15ರಿಂದ 2024ರ ಜ. 8ರವರೆಗೆ ತಮ್ಮ ಬಳಿ ಇದ್ದ ಹಣದ ಜೊತೆಗೆ, ಸ್ನೇಹಿತರ ಬಳಿ ಸಾಲ ಮಾಡಿಕೊಂಡು ₹16.81 ಲಕ್ಷ ಪಾವತಿಸಿದ್ದಾರೆ.

ಕಡೆಗೆ ವಂಚಕರು ₹9.85 ಲಕ್ಷ ಪಾವತಿಸಿದರೆ ನಿಮ್ಮ ಹಣ ನಿಮಗೆ ಸಂಪೂರ್ಣವಾಗಿ ಸಿಗುತ್ತದೆ. ನೀವೀಗ 91 ಸ್ಕೋರ್‌ ಗಳಿಸಿದ್ದು, 100 ತಲುಪಿದರೆ ನಿಮ್ಮ ಹಣ ನಿಮಗೆ ಸಿಗಲಿದೆ. ಒಂದು ಸ್ಕೋರ್‌ಗೆ ನೀವು ₹1.09 ಲಕ್ಷದಂತೆ ₹9.85 ಲಕ್ಷ ಪಾವತಿಸಬೇಕಿತ್ತು ಎಂದರು.

ಆಗ ಜೀವನ್, ನನ್ನ ಬಳಿ ಹಣವಿಲ್ಲ ಎಂದು ಹೇಳಿದಾಗ, ನಿಮ್ಮ ಖಾತೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ ವಂಚಕರು ಮತ್ತೆ ಸಂಪರ್ಕಕ್ಕೆ ಸಿಕ್ಕಿಲ್ಲ. ಇತ್ತ ಪಾವತಿಸಿಕೊಂಡ ಹಣ ಸಹ ಹಿಂದಿರುಗಿಸಿಲ್ಲ ಎಂದು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಜೀವನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.