ADVERTISEMENT

ಪಕ್ಷ ಸಂಘಟನೆಗೆ ತೊಡಕು: ಬಿಜೆಪಿ ಜಿಲ್ಲಾ ಅಧ್ಯಕ್ಷರ ವಿರುದ್ಧ ಟೀಕೆ

ಪಕ್ಷ ಸಂಘಟನೆಗೆ ತೊಡಕು: ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 0:56 IST
Last Updated 25 ಜನವರಿ 2021, 0:56 IST
ಬಿಡದಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನಾ ಪ್ರಾಧಿಕಾರದ ನಿರ್ದೇಶಕ ಬಿ.ಸಿ. ಮುತ್ತುರಾಜ್ ಮಾತನಾಡಿದರು
ಬಿಡದಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನಾ ಪ್ರಾಧಿಕಾರದ ನಿರ್ದೇಶಕ ಬಿ.ಸಿ. ಮುತ್ತುರಾಜ್ ಮಾತನಾಡಿದರು   

ಬಿಡದಿ: ಸ್ವಾರ್ಥ ಮತ್ತು ಬಣ ರಾಜಕೀಯದ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ತೊಡಕಾಗಿರುವ ಜಿಲ್ಲಾ ಅಧ್ಯಕ್ಷ ಹುಲುವಾಡಿ ದೇವರಾಜು ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿಕಾರದ ನಿರ್ದೇ ಶಕ ಬಿ.ಸಿ. ಮುತ್ತುರಾಜ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹುಲುವಾಡಿ ದೇವರಾಜು ಅವರು ಜಿಲ್ಲಾ ಅಧ್ಯಕ್ಷರಾಗಿ ನೇಮಕ ಆದ ನಂತರ ಇಡೀ ಪಕ್ಷ ಸಂಘಟನೆಗೆ ಪೆಟ್ಟು ಬಿದ್ದಿದೆ. ಹಲವಾರು ವರ್ಷಗಳಿಂದ ಪಕ್ಷದ ಬಾವುಟ ಕಟ್ಟಿ ಕ್ರಿಯಾಶೀಲರಾಗಿ ಸಂಘಟನೆ ಮಾಡಿರುವ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಕಾರ್ಯಕರ್ತರನ್ನು ಬಣಗಳ ಹೆಸರಿನಲ್ಲಿ ಬೇರ್ಪಡಿಸಿದ್ದು, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೆಆರ್‌ಡಿಐಎಲ್ ನಿಗಮದ ಅಧ್ಯಕ್ಷ ಎಂ. ರುದ್ರೇಶ್ ಅವರ ಅಭಿಮಾನಿಗಳನ್ನು ವಿರೋಧಿಗಳಂತೆ ಕಾಣುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿ ಅಧಿಕಾರದಲ್ಲಿದೆ. ಉತ್ತಮ ಯೋಜನೆಗಳು ಜಾರಿಗೊಂಡಿವೆ. ಸಾರ್ವಜನಿಕರು ಮತ್ತು ಕಾರ್ಯಕರ್ತರ ಸ್ಪಂದನೆಗೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯಾಲಯ ತೆರೆಯಲು ಜಿಲ್ಲಾ ಅಧ್ಯಕ್ಷರಿಂದ ಸಾಧ್ಯವಾಗಲಿಲ್ಲ. ಜಿಲ್ಲೆಯಲ್ಲಿ ಯಾವ ಕಾರ್ಯಕ್ರಮವನ್ನು ಆಯೋಜಿಸಿಲ್ಲ ಎಂದು ದೂರಿದರು.

ADVERTISEMENT

ಹಿಂದಿನ ಜಿಲ್ಲಾ ಅಧ್ಯಕ್ಷರಾಗಿದ್ದ ಎಂ. ರುದ್ರೇಶ್ ಅವರು ಜಿಲ್ಲೆಯಲ್ಲಿ ಉತ್ತಮ ಸಂಘಟನೆ ಮಾಡಿ ಪ್ರತಿ ಹಳ್ಳಿಗಳಲ್ಲೂ ಕಾರ್ಯಕರ್ತರ ಪಡೆ ಕಟ್ಟಿದ್ದರು. ಅದರ ಫಲವಾಗಿ ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಸಾಧ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಷಣ್ಮುಗಂ, ಗುರುಪ್ರಸಾದ್, ವಿಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.