ADVERTISEMENT

ರಾಗಿ ಬಣವೆ ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:29 IST
Last Updated 20 ಜನವರಿ 2026, 2:29 IST
ಬಿಡದಿಯ ಕೆಂಚನಕುಪ್ಪೆಯ ಹೊಲದಲ್ಲಿದ್ದ ರಾಗಿ ಬಣವೆಯು ಬೆಂಕಿಗೆ ಆಹುತಿಯಾಯಿತು
ಬಿಡದಿಯ ಕೆಂಚನಕುಪ್ಪೆಯ ಹೊಲದಲ್ಲಿದ್ದ ರಾಗಿ ಬಣವೆಯು ಬೆಂಕಿಗೆ ಆಹುತಿಯಾಯಿತು   

ಬಿಡದಿ (ರಾಮನಗರ): ಪಟ್ಟಣದ ವಾರ್ಡ್–4ರ ಕೆಂಚನಕುಪ್ಪೆಯ ಹೊಲವೊಂದರಲ್ಲಿದ್ದ ಎರಡು ರಾಗಿ ಮೆದೆಗಳಿಗೆ ಭಾನುವಾರ ಬೆಂಕಿ ಹೊತ್ತಿಕೊಂಡಿದ್ದರಿಂದ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಗಿರಿಯಪ್ಪ ಎಂಬುವರಿಗೆ ಸೇರಿದ್ದ ಮೆದೆಗಳಿಗೆ ಮಧ್ಯಾಹ್ನ 1.45ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಮನೆ ಹಿಂಭಾಗದ ಹೊಲದಲ್ಲೇ ಇದ್ದ ಕಣದಲ್ಲಿ ಜೋಡಿಸಿದ್ದ ರಾಗಿ ಮೆದಗಳಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಮನೆಯವರು ಮತ್ತು ಸ್ಥಳೀಯರು ಕೂಡಲೇ, ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ, ಬಿಸಿಲಿನ ತೀವ್ರತೆಗೆ ಬೆಂಕಿ ಆದಷ್ಟು ಬೇಗನೇ ಎರಡೂ ಮೆದೆಗಳನ್ನು ಆವರಿಸಿಕೊಂಡಿತು.

ಕಣ್ಣೆದುರಿಗೇ ರಾಗಿ ಮೆದೆಗಳು ಬೆಂಕಿಗೆ ಆಹುತಿಯಾಗುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕತೆಯಿಂದ ಮನೆಯವರು ಮತ್ತು ಸ್ಥಳೀಯರು ನಿಲ್ಲಬೇಕಾಯಿತು. ಸ್ಥಳಕ್ಕೆ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಮೆದೆಗಳು ಬಹುತೇಕ ಸುಟ್ಟು ಹೋಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ADVERTISEMENT

ಘಟನೆಗೆ ನಿಜವಾದ ಕಾರಣ ಗೊತ್ತಾಗಿಲ್ಲ. ರಾಗಿ ಮೆದೆಯಿಂದ ಅನತಿ ದೂರದಲ್ಲಿ ಯಾರೊ ಹಚ್ಚಿದ ಪಟಾಕಿ ಕಿಡಿಯು ಮೆದೆಗಳಿಗೆ ಬಂದು ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರು. ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಗಿರಿಯಪ್ಪ ಅವರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.