ADVERTISEMENT

ಕ್ರಷರ್ ಗಲಾಟೆ: ಗ್ರಾಮಸ್ಥರ ಮೇಲೆ ಹಲ್ಲೆ?

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 19:52 IST
Last Updated 11 ಆಗಸ್ಟ್ 2021, 19:52 IST

ರಾಮನಗರ: ಮಾಗಡಿ ತಾಲ್ಲೂಕಿನ ಜೋಗಿಪಾಳ್ಯ ಬಳಿ ಇರುವ ಜೇನುಕಲ್ಲು ಗುಡ್ಡದಲ್ಲಿ ಕ್ರಷರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬುಧವಾರ ಕ್ರಷರ್‌ ಮಾಲೀಕ ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದಿದ್ದು, ಇದನ್ನೇ ನೆಪವಾಗಿಸಿಕೊಂಡು ಪೊಲೀಸರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಜೋಗಿಪಾಳ್ಯದ ಗಿರಿಯಪ್ಪ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ನಿಮಾನ್ಸ್‌ಗೆ ದಾಖಲಿಸಲಾಗಿದೆ.

ಜೋಗಿಪಾಳ್ಯದ ಬಳಿ ಗಿರಿಧರ್ ಕಸಬೆ ಎಂಬುವರು ಕ್ರಷರ್‌ ಆರಂಭಿಸುತ್ತಿದ್ದು, ಇದಕ್ಕೆ ಬೇಕಾದ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಕ್ರಷರ್ ಆರಂಭ ವಿರೋಧಿಸಿ ಸೋಮವಾರ ಸ್ಥಳೀಯ ರೈತರು ಕ್ರಷರ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಬುಧವಾರ ಕ್ರಷರ್‌ ಮಾಲೀಕರು ಸ್ಥಳಕ್ಕೆ ತೆರಳಿದ್ದು, ರಸ್ತೆ ಕಾಮಗಾರಿ ಮುಂದುವರಿಸಲು ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ಸಂದರ್ಭ ಸ್ಥಳೀಯ ರೈತರು ಹಾಗೂ ಕ್ರಷರ್ ಮಾಲೀಕರ ನಡುವೆ ವಾಗ್ದಾದ ನಡೆದಿದೆ.

ADVERTISEMENT

ಈ ಘಟನೆ ಬಳಿಕ, ‘ಗ್ರಾಮಸ್ಥರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಗಿರಿಧರ್ ಮಾಗಡಿ ಪೊಲೀಸಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಸಂಜೆ ಗ್ರಾಮಕ್ಕೆ ತೆರಳಿದ್ದಾರೆ. ಈ ಸಂದರ್ಭ ಮನೆಮನೆಗೆ ನುಗ್ಗಿ ರೈತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲವರಿಗೆ ಗಾಯಗಳಾಗಿವೆ.

ಪೊಲೀಸರು ಹೇಳುವುದೇನು?: ‘ಗಿರಿಧರ್ ಅವರು ನೀಡಿದ ದೂರು ಆಧರಿಸಿ ನಮ್ಮ ಸಿಬ್ಬಂದಿ ಆರೋಪಿಗಳ ಬಂಧನಕ್ಕೆ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಪೊಲೀಸರನ್ನು ಹಿಡಿದು ಎಳೆದಾಡಿದ್ದಾರೆ. ಘಟನೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಅವರಿಗೆ ಸಣ್ಣ ಗಾಯಗಳಾಗಿವೆ. ಪೊಲೀಸ್ ಜೀಪ್‌ ಸಹ ಜಖಂಗೊಂಡಿದೆ.’ ಎಂದು ರಾಮನಗರ ಎಸ್ಪಿ ಗಿರೀಶ್ ಮಾಹಿತಿ ನೀಡಿದರು. ಘಟನೆಯಿಂದಾಗಿ ಸದ್ಯ ಜೋಗಿಪಾಳ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.